ಕೊಡಗು ಜಿಲ್ಲೆಯಲ್ಲಿ ಪುತ್ತರಿ ಹಬ್ಬ ಸಂಭ್ರಮದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಪುತ್ತರಿ ಹಬ್ಬ ಸಂಭ್ರಮದಿಂದ ಜರುಗಿತು. ಗುರುವಾರ ರಾತ್ರಿ ಜಿಲ್ಲೆಯ ವಿವಿಧಡೆಗಳಲ್ಲಿ ಬತ್ತದ ಕದಿರನ್ನು ಕೊಯ್ಲು ಮಾಡುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಬರ ಮಾಡಿಕೊಳ್ಳಲಾಯಿತು. ಈ ವೇಳೆ ಪಟಾಕಿ ಸಿಡಿಸಿ, ವಾಲಗಕ್ಕೆ ಕುಣಿದು ಸಂಭ್ರಮಿಸಿದರು.ಹಬ್ಬದ ಅಂಗವಾಗಿ ನೆರೆಕಟ್ಟಿ, ದೇವರಿಗೆ ನೈವೇದ್ಯ ಅರ್ಪಿಸಿ ಹಿರಿಯರ ಮೂಲಕ ಮೆರವಣಿಗೆಯಲ್ಲಿ ಭತ್ತದ ಗದ್ದೆಗೆ ತೆರಳಲಾಯಿತು. ಇಲ್ಲಿ ಭತ್ತದ ಗದ್ದೆಗೆ ಪೂಜೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿ ಎಲ್ಲಾರು ಒಟ್ಟಾಗಿ ಭತ್ತದ ಕದಿರನ್ನು ಮನೆಗಳಿಗೆ ತರಲಾಯಿತು. ಮಹಿಳೆಯರು ಹಾಗೂ ಪುರುಷರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಕದಿರು ಹಿಡಿದು ಪೊಲಿ...ಪೊಲಿ ದೇವಾ ಎಂದು ಧಾನ್ಯ ಲಕ್ಷ್ಮಿಯನ್ನು ಬರ ಮಾಡಿಕೊಂಡರು. ಹಬ್ಬದಲ್ಲಿ ತಂಬಿಟ್ಟು ಹಾಗೂ ಪುತ್ತರಿ ಗೆಣಸಿನ ಖಾದ್ಯಗಳನ್ನು ತಯಾರಿಸಿ ಭೋಜನ ಮಾಡಲಾಯಿತು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಡಿಕೇರಿಯ ಕೋಟೆ ಆವರಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆ, ಮಡಿಕೇರಿ ಕೊಡವ ಸಮಾಜ, ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಮತ್ತು ಪಾಂಡೀರ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಪುತ್ತರಿ ಕೋಲಾಟ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕೊಡಗಿನಲ್ಲಿ ಹುತ್ತರಿ, ಕೈಲ್ ಮುಹೂರ್ತ ಹಾಗೂ ತುಲಾ ಸಂಕ್ರಮಣ ಪ್ರಮುಖ ಹಬ್ಬವಾಗಿದ್ದು, ಹುತ್ತರಿ ಹಬ್ಬ ಸುಗ್ಗಿಯ ಹಬ್ಬ ಎಂದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕದಿರು ಕೊಯ್ದು ಲಕ್ಷ್ಮಿಯನ್ನು ಮನೆಗೆ ಬರ ಮಾಡಿಕೊಳ್ಳುವುದು ಈ ಹಬ್ಬದ ಪ್ರಮುಖ ವಿಶೇಷವಾಗಿದೆ. ಹುತ್ತರಿಯ ಮಾರನೆಯ ದಿನ ಎಲ್ಲಾ ಗ್ರಾಮಗಳಲ್ಲಿ ಹುತ್ತರಿ ಕೋಲಾಟಗಳು ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.ಮಡಿಕೇರಿ ಕೋಟೆ ಆವರಣದಲ್ಲಿ ಪಾಂಡೀರ ಕುಟುಂಬಸ್ಥರ ಮುಂದಾಳತ್ವದಲ್ಲಿ ಎಲ್ಲರೂ ಸೇರಿ ಕೋಲಾಟ ನಡೆಯುತ್ತಿದೆ. ಹೆಚ್ಚು ಜನರು ಕೂಡ ಭಾಗವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೂಡ ಯಶಸ್ವಿಯಾಗಿ ನಡೆಯಲಿ ಎಂದರು.
ಪಾಂಡೀರ ಕುಟುಂಬಸ್ಥರಿಂದ ಪ್ರಾರಂಭಿಕವಾಗಿ ಪುತ್ತರಿ ಕೋಲಾಟ ನಡೆಯಿತು. ಪಾಂಡೀರ ಕುಟುಂಬದ ಮಹಿಳಾ ಸದಸ್ಯರಿಂದ ನಡೆದ ಉಮ್ಮತ್ತಾಟ್, ತಾಲಿಪಾಟ್ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಗೆ ಎಲ್ಲರೂ ಕೂಡ ಸಾಂಪ್ರದಾಯಿಕ ವಾಲಗಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಕೂಡ ಪುತ್ತರಿ ಅಂಗವಾಗಿ ಗುರುವಾರ ರಾತ್ರಿ ಕದಿರು ಕೊಯ್ದು ಮೆರವಣಿಗೆಯ ಮೂಲಕ ಭತ್ತದ ಕದಿರನ್ನು ಕೊಂಡೊಯ್ದು ಪೂಜೆ ಸಲ್ಲಿಸಿದ ಬಳಿಕ ಕೊಡವ ಸಮಾಜದಲ್ಲಿ ಕದಿರನ್ನು ವಿತರಿಸಲಾಯಿತು.