ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ನಡೆಸಲಾಗುತ್ತಿರುವ ೯೦ನೇ ವರ್ಷದ ಶ್ರೀ ಶಾರದೋತ್ಸವದ ಅದ್ಧೂರಿ ಶೋಭಾಯಾತ್ರೆಯು ಶನಿವಾರ ಸಂಜೆ ನಡೆಯಿತು.ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕರಾದ ವಿ.ಎಸ್. ಭಟ್ ಶ್ರೀ ಶಾರದಾ ಮಾತೆಯ ವಿಗ್ರಹ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಭಗವಾಧ್ವಜ ಹಾರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಶೋಭಾಯಾತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೇರಳದ ಪಂದಳಾಟಮ್, ಸಿಂಗಾರಿ ಕಾವಡಿ, ಕಥಕ್ಕಳಿ, ಮಹಿಳಾ ಸಿಂಗಾರಿ ಮೇಳಮ್, ತಿರಾಯಾಟ್ಟಮ್, ಸಿಂಗಾರಿ ಮೇಳ ಕಲಾತಂಡಗಳು ಭಾಗವಹಿಸಿತ್ತು. ಇದರೊಂದಿಗೆ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಕಡೆಗಳ ಕಲಾತಂಡ ಭಜನಾ ತಂಡಗಳು ಪಾಲ್ಗೊಂಡಿದ್ದವು. ಮಹಿಳೆಯರಿಂದ ವೇದಘೋಷ, ಚೆಂಡೆ ಮೇಳ, ವಾದ್ಯಘೋಷ, ವಾದ್ಯವೃಂದ, ಕುಣಿತ ಭಜನೆ, ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ವೀರಭದ್ರ ಕುಣಿತ, ಕಹಳೆ, ಉತ್ತರ ಕರ್ನಾಟಕದ ಜುಗ್ಗಳಿಗೆ ಮೇಳ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು. ಪಾರಂಪರಿಕತೆಗೆ ಒತ್ತು: ಶಾರದಾ ಶೋಭಾಯಾತ್ರೆಯಲ್ಲಿ ಪಟಾಕಿ, ಡಿ.ಜೆ. ಮತ್ತು ಟ್ಯಾಬ್ಲೋ ನಿರ್ಬಂಧಿಸಲಾಗಿತ್ತು. ಜಿಲ್ಲೆಯ ೨೦ ಕುಣಿತ ಭಜನಾ ತಂಡಗಳು, ಕರ್ನಾಟಕ ಮತ್ತು ಕೇರಳದ ೨೨ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಚೆಂಡೆ, ಬ್ಯಾಂಡ್, ಕೊಂಬುಗಳು ಜೊತೆಗಿದ್ದವು. ಬೆಂಕಿ ಉಗುಳುವ ಮೆಗಾ ಘಟೋದ್ಗಜ ಮತ್ತು ವಿರಾಟ್ ಹನುಮಂತ ವೇಷಗಳು ನೋಡುಗರ ಗಮನ ಸೆಳೆದವು. ಡಿಜೆ,ಪಟಾಕಿ, ಟ್ಲಾಬ್ಲೋಗಳಿಲ್ಲದೆ ಪಾರಂಪರಿಕತೆಗೆ ಒತ್ತು ನೀಡಿ, ಪರಿಸರ ಸ್ನೇಹಿಯಾಗಿ ಶೋಭಾಯಾತ್ರೆ ನಡೆಸಲಾಯಿತು.ಬೊಳುವಾರಿನಿಂದ ಆರಂಭಗೊಂಡ ಶೋಭಾಯಾತ್ರೆಯು ನಗರದ ಮುಖ್ಯ ರಸ್ತೆಯಲ್ಲಿ ದರ್ಬೆ ವೃತ್ತದ ತನಕ ಸಾಗಿತ್ತು. ಭಕ್ತರು ಮತ್ತು ಕಲಾಭಿಮಾನಿಗಳ ಅನುಕೂಲತೆಯ ನಿಟ್ಟಿನಲ್ಲಿ ರಸ್ತೆಯಲ್ಲಿ ೧೨ ಕಡೆಗಳಲ್ಲಿ ನಿಂತು ನೋಡುವ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರಿನ ಮುಖ್ಯರಸ್ತೆಯ ಉದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶೋಭಾಯಾತ್ರೆಯ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿರುವ ಕೆರೆಯಲ್ಲಿ ವಿಗ್ರಹ ಜಲಸ್ತಂಭನ ಮಾಡಲಾಯಿತು.ಮಾಜಿ ಶಾಸಕ ಸಂಜೀವ ಮಠಂದೂರು, ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ ರಾವ್, ಮೆರವಣಿಗೆ ಸಂಚಾಲಕ ನವೀನ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಪ್ರಮುಖರಾದ ಡಾ. ಸುರೇಶ್ ಪುತ್ತೂರಾಯ, ಚಿದಾನಂದ ಬೈಲಾಡಿ, ಮುರಳಿಕೃಷ್ಣ ಹಸಂತಡ್ಕ ಮತ್ತಿತರರು ಉಪಸ್ಥಿತರಿದ್ದರು.