ಸಾರಾಂಶ
ತಿಂಗಳ ಹಿಂದೆ ಕೆಜಿಗೆ ಗರಿಷ್ಠ ೧೦೦ ರುಪಾಯಿಗೆ ಖರೀದಿಯಾಗಿದ್ದ ಕೊಕ್ಕೋ ಇದೀಗ ಉತ್ತಮ ದರಕ್ಕೆ ಖರೀದಿಯಾಗುತ್ತಿದೆ
ಕನ್ನಡಪ್ರಭವಾರ್ತೆ ಪುತ್ತೂರು:
ಕರಾವಳಿ ಭಾಗದ ರೈತರ ತೋಟದಲ್ಲಿ ಅಡಕೆ ಮತ್ತು ತೆಂಗಿನ ನಡುವೆ ಮಿಶ್ರ ಬೆಳೆಯಾಗಿ ಸಾಕಷ್ಟು ಬೆಳೆಸಲಾಗುತ್ತಿರುವ ಕೊಕ್ಕೋ ಇದೀಗ ಮತ್ತೊಮ್ಮೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. ಕಳೆದ ಹಲವು ಸಮಯಗಳಿಂದ ಏರಿಕೆ ಕಾಣದ ಕೊಕ್ಕೋ ಬೆಲೆ ದಿಡೀರ್ ಹೆಚ್ಚಾಗಿದೆ. ಒಂದು ತಿಂಗಳ ಅಂತರದಲ್ಲಿ ಕೊಕ್ಕೋ ಬೆಲೆ ದುಪ್ಪಟ್ಟಾಗಿದ್ದು, ಬೆಳೆಗಾರರಿಗೆ ಸಂತಸ ತಂದಿದೆ.ಅತೀ ಹೆಚ್ಚು ಕೊಕ್ಕೊ ಬೆಳೆಯುವ ಪ್ರದೇಶಗಳಲ್ಲಿ ಪುತ್ತೂರು ಸುಳ್ಯ ಸೇರಿದೆ. ಇಲ್ಲಿ ಬಹುತೇಕ ರೈತರು ತಮ್ಮ ಅಡಕೆ ಮತ್ತು ತೆಂಗಿನ ತೋಟಗಳ ನಡುವೆ ಕೊಕ್ಕೋ ಬೆಳೆಸುತ್ತಿದ್ದಾರೆ. ಆದರೆ ಅಡಕೆ ಧಾರಣೆ ಏರಿಕೆಯಾದರೂ ಕೊಕ್ಕೋ ಬೆಲೆ ಮಾತ್ರ ಏರಿಕೆಯಾಗದೆ ಬೆಳೆಗಾರರಲ್ಲಿ ನಿರಾಸೆ ಮೂಡಿಸಿತ್ತು.
ಇದೀಗ ಕೊಕ್ಕೋ ರೈತರ ಪಾಲಿಗೆ ಆಶಾದಾಯಕ ಬೆಳೆಯಾಗಿ ಆದಾಯ ಒದಗಿಸಲು ಮುಂದಾಗಿದೆ. ಈ ಮೊದಲು ಅಡಕೆ ದರ ಏರುತ್ತಾ ಹೋದಾಗ ಕೊಕ್ಕೊ ದರ ಕುಂಟುತ್ತಲೇ ಸಾಗಿತ್ತು. ಆದರೆ ಗುರುವಾರ ಪುತ್ತೂರು ಮತ್ತು ಸುಳ್ಯದಲ್ಲಿ ಕೊಕ್ಕೋ ಕೆಜಿಗೆ ೨೧೫ ರುಪಾಯಿಗೆ ಖರೀದಿಸಲಾಗುತ್ತಿದೆ. ತಿಂಗಳ ಹಿಂದೆ ಕೆಜಿಗೆ ಗರಿಷ್ಠ ೧೦೦ ರುಪಾಯಿಗೆ ಖರೀದಿಯಾಗಿದ್ದ ಕೊಕ್ಕೋ ಇದೀಗ ಉತ್ತಮ ದರಕ್ಕೆ ಖರೀದಿಯಾಗುತ್ತಿದೆ. ಇಳುವರಿ ಕಡಿಮೆಯಾಗಿರುವುದೇ ದರ ಏರಿಕೆಗೆ ಕಾರಣ ಎಂದು ರೈತರು ಹೇಳುತ್ತಾರೆ. ಆದರೆ ದರ ಹೆಚ್ಚಿದ್ದರೂ ನಿರೀಕ್ಷಿತ ಪ್ರಮಾಣದ ಫಸಲು ಇಲ್ಲದಿರುವುದರಿಂದ ರೈತರು ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ.ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್ ತನಕ ಕೊಕ್ಕೊ ಫಸಲು ಇರುತ್ತದೆ. ಕಳೆದ ಹಲವು ವರ್ಷಗಳಿಂದ ಕೊಕ್ಕೊ ದರ ಕೆಜಿಗೆ ೫೦-೬೦ ರ ಆಸುಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿತ್ತು. ಅಡಕೆ ದರ ೫೦೦ ರು.ಗೆ ಏರಿದಾಗಲೂ ಕೊಕ್ಕೊ ದರ ಮಾತ್ರ ೫೦ರಲ್ಲಿಯೇ ನಿಂತಿತ್ತು. ಇದರಿಂದ ಕೊಕ್ಕೂ ಲಾಭದಾಯಕವಾಗಿಲ್ಲ ಎಂದು ಕೃಷಿಕರು ನಿಧಾನಕ್ಕೆ ಕೊಕ್ಕೊ ಕೃಷಿಯಿಂದ ವಿಮುಖರಾಗತೊಡಗಿದ್ದರು. ಇದರಿಂದ ಕೊಕ್ಕೊ ಇಳುವರಿಯೂ ಕಡಿಮೆಯಾಗಲು ಆರಂಭಿಸಿತ್ತು. ಇದೀಗ ಕೊಕ್ಕೋ ಮತ್ತೊಮ್ಮೆ ರೈತರ ಪಾಲಿಗೆ ಆಶಾದಾಯಕ ಬೆಳೆಯಾಗಿ ಕಾಣಿಸತೊಡಗಿದೆ.