ಪುತ್ತೂರು: ರಸ್ತೆ ಕಾಮಗಾರಿಗೆ ಸ್ಥಳೀಯರ ವಿರೋಧ

| Published : May 02 2025, 12:08 AM IST

ಸಾರಾಂಶ

ರಸ್ತೆ ಕಾಮಗಾರಿ ನಡೆಸಲು ಬಂದಿದ್ದ ಅಧಿಕಾರಿಗಳಿಗೆ ತಡೆ ಒಡ್ಡಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ನಡೆಯಿತು. ಮನವೊಲಿಸುವಿಕೆಗೆ ಬಗ್ಗದೆ ಪ್ರತಿಭಟಿಸಿ ಕಾಮಗಾರಿ ನಡೆಸಲು ತಡೆ ಒಡ್ಡಿದವರನ್ನು ತಹಸೀಲ್ದಾರ್ ಸೂಚನೆಯ ಮೇರೆಗೆ ಪೊಲೀಸರು ವಶಕ್ಕೆ ಪಡೆದ ಬಳಿಕ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ರಸ್ತೆ ಕಾಮಗಾರಿ ಆರಂಭಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಕಾಡಬಾಗಿಲು-ಬಾವ ಗ್ರಾ.ಪಂ ರಸ್ತೆಯ ಕಾಂಕ್ರಿಟ್‌ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ರು.೧೦ ಲಕ್ಷ ಬಿಡುಗಡೆಗೊಂಡಿದ್ದು ಅದರ ಕಾಮಗಾರಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಈ ಸಂದರ್ಭ ಸ್ಥಳೀಯ ಕೆಲವು ವ್ಯಕ್ತಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಇದು ನಮ್ಮ ಖಾಸಗಿ ರಸ್ತೆಯಾಗಿದ್ದು ಇದಕ್ಕೆ ಕಾಂಕ್ರೀಟ್ ಮಾಡಬಾರದು, ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸಿದರು. ಗ್ರಾಪಂ ಅಧಿಕಾರಿಗಳು, ಪೊಲೀಸರು ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೆ ಅವರು ಜಗ್ಗದ ಕಾರಣ ಸ್ಥಳಕ್ಕೆ ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಆಗಮಿಸಿ ಪ್ರತಿಭಟನಾ ನಿರತದಲ್ಲಿ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿಗಳ ಆರ್ಡರ್ ಇದೆ ಎಂದರೂ ಅವರು ಒಪ್ಪಲಿಲ್ಲ.

ಪ್ರತಿಭಟನೆ ಮಾಡಿದವರು ಒಪ್ಪದೆ ರಸ್ತೆಯಲ್ಲಿ ಮಲಗಿ ಕಾಮಗಾರಿಗೆ ತಡೆ ಒಡ್ಡಿದರು. ಬಳಿಕ ತಹಸೀಲ್ದಾರ್ ಅವರು ರಸ್ತೆಯಲ್ಲಿ ಕುಳಿತವರನ್ನು ವಶಕ್ಕೆ ಪಡೆಯುವಂತೆ ಪೊಲಿಸರಿಗೆ ಸೂಚನೆ ನೀಡಿದರು.

ಬಳಿಕ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದುಕೊಂಡರು. ಈ ಸಂದರ್ಭ ಪೊಲೀಸರೊಂದಿಗೆ ತೀವ್ರ ವಾಗ್ವಾದ, ನೂಕಾಟ, ತಳ್ಳಾಟವೂ ನಡೆಯಿತು. ಎಲ್ಲರನ್ನೂ ಎತ್ತಿಕೊಂಡು ಹೋದ ಪೊಲೀಸರು ತಮ್ಮ ವಾಹನದಲ್ಲಿ ಕುಳ್ಳಿರಿಸಿ ಪುತ್ತೂರು ಗ್ರಾಮಾಂತರ ಠಾಣೆಗೆ ಕರೆದೊಯ್ದರು ಉಳಿದ ಕೆಲವರು ಸ್ಥಳದಿಂದ ತೆರಳಿದರು. ಬಳಿಕ ಕಾಮಗಾ ಮುಂದುವರಿಸಲಾಯಿತು.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ಸೈ ಸುಷ್ಮಾ ಭಂಡಾರಿ ಮತ್ತು ಸಿಬ್ಬಂದಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಮುಂಡೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಕಾರ್ಯದರ್ಶಿ ಸೂರಪ್ಪ, ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಮತ್ತಿತರರು ಇದ್ದರು.