ಸಾರಾಂಶ
ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಜೂ.೩೦ರಿಂದ ಜು. ೬ರ ತನಕ ಪುತ್ತೂರಿನ ಶ್ರೀ ಸುಕೃತೀಂದ್ರರ ಕಲಾಮಂದಿರದಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಜೂ.೩೦ರಿಂದ ಜು. ೬ರ ತನಕ ಪುತ್ತೂರಿನ ಶ್ರೀ ಸುಕೃತೀಂದ್ರರ ಕಲಾಮಂದಿರದಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಆಯೋಜಿಸಲಾಗಿದೆ. ಸಪ್ತಾಹದಲ್ಲಿ ಪ್ರತಿದಿನ ಸಂಜೆ ೪ರಿಂದ ೮ರ ತನಕ ಪ್ರಸಿದ್ಧ ಕಲಾವಿದರಿಂದ ವಿವಿಧ ಆಖ್ಯಾನಗಳ ತಾಳಮದ್ದಳೆಗಳು ನಡೆಯಲಿವೆ ಎಂದು ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೩೦ರಂದು ಸಪ್ತಾಹವನ್ನು ಯಕ್ಷಗಾನ ದಶಾವತಾರಿ ಕೆ.ಗೋವಿಂದ ಭಟ್ ಉದ್ಘಾಟಿಸಲಿದ್ದಾರೆ. ಉದ್ಯಮಿ ಬಲರಾಮ ಆಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು, ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಶ್ರೀ ಯು ಪೂವಪ್ಪ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಜು.೬ರಂದು ಸಪ್ತಾಹ ಸಮಾರೋಪ ಸಮಾರಂಭ ನಡೆಯಲಿದ್ದು, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಈ ಸಂದರ್ಭದಲ್ಲಿ ಹೊನ್ನಾವರ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ , ಕೆರೆಮನೆ-ಗುಣವಂತೆ ಹಾಗೂ ಹಿರಿಯ ಸ್ತ್ರೀ ವೇಷಧಾರಿ ಕೊಕ್ಕಡ ಈಶ್ವರ ಭಟ್ಟ ಅವರಿಗೆ ‘ಕುರಿಯ ಪ್ರಶಸ್ತಿ’ ಪ್ರದಾನ ಹಾಗೂ ಬೆಂಗಳೂರಿನ ಉದ್ಯಮಿ, ಕಲಾಪೋಷಕ ಉದ್ಯಮಿ ಆರ್.ಕೆ.ಭಟ್ಟ ಅವರಿಗೆ ‘ಕುರಿಯ ಸ್ಮೃತಿ ಗೌರವ’ ನೀಡಲಾಗುವುದು.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ಉದ್ಯಮಿ ಗೋಪಾಲಕೃಷ್ಣ ಭಟ್ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿರುತ್ತಾರೆ. ಕೀರ್ತಿಶೇಷ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರ ಸಂಸ್ಮರಣೆಯನ್ನು ಹಿರಿಯ ಅರ್ಥದಾರಿ ವೆಂಕಟರಾಮ ಭಟ್ ಸುಳ್ಯ ಮಾಡಲಿದ್ದಾರೆ.ಜೂನ್ ೩೦ರಿಂದ ಜುಲೈ ೬ ರನಕ ಅನುಕ್ರಮವಾಗಿ ತರಣಿಸೇನ ಕಾಳಗ, ಶಲ್ಯ ಸಾರಥ್ಯ, ದಕ್ಷಾಧ್ವರ, ದಮಯಂತಿ ಪುನಃ ಸ್ವಯಂವರ, ಕೃಷ್ಣಾರ್ಜುನ ಕಾಳಗ, ವಾಲಿ ವಧೆ, ಗುರುದಕ್ಷಿಣೆ ಪ್ರಸಂಗಗಳ ತಾಳಮದ್ದಳೆ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.