ಸಾರಾಂಶ
ಉಪರಾಷ್ಟ್ರಪತಿಗಳು 2 ಗಂಟೆಗೆ ನೇರ ದೇವಸ್ಥಾನಕ್ಕೆ ತೆರಳಿ ಡಾ. ವೀರೇಂದ್ರ ಹೆಗ್ಗಡೆಯವರೊಂದಿಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ 2.15ಕ್ಕೆ ನೂತನವಾಗಿ ನಿರ್ಮಿಸಲಾಗಿರುವ ಆಕರ್ಷಕ ಕ್ಯೂ ಕಾಂಪ್ಲೆಕ್ಸ್‌ನ್ನು ದೀಪಬೆಳಗಿಸಿ ಉದ್ಘಾಟಿಸಿದರಲ್ಲದೆ ಎರಡು ಸಸಿಗಳನ್ನು ನೆಟ್ಟು ನೀರೆರೆದರು.
ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ 800 ವರ್ಷಗಳ ಇತಿಹಾಸ ಹೊಂದಿದೆ. ಅನ್ನದಾನ, ವಿದ್ಯಾದಾನ, ಔಷಧದಾನ ಹಾಗೂ ಅಭಯದಾನವೇ ಮೊದಲಾದ ನಾಲ್ಕು ವಿಧದ ದಾನಗಳಿಗೆ ಪ್ರಸಿದ್ಧಿ ಪಡೆದಿದೆ. ಪ್ರತಿಯೊಬ್ಬ ಭಕ್ತರನ್ನು ದೇವರಂತೆ ಕಾಣಲಾಗುತ್ತಿದೆ. ಸರತಿ ಸಾಲಿನಲ್ಲಿ ಕಾಯುವ ಅವಧಿಯಲ್ಲಿ ಭಕ್ತರಿಗೆ ಇನ್ನೂ ಹೆಚ್ಚಿನ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ವಿಶೇಷ ವೈಶಿಷ್ಟ್ಯಗಳೊಂದಿಗೆ ಹೊಸ ಸರತಿ ಸಾಲಿನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ ನಿರ್ಮಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ‘ಶ್ರೀಸಾನ್ನಿಧ್ಯ’ ಕ್ಯೂಕಾಂಪ್ಲೆಕ್ಸ್ ಉದ್ಘಾಟನೆ, 2024-25ರ ಸಾಲಿನ ಜ್ಞಾನದೀಪ ಕಾರ್ಯಕ್ರಮ ಶುಭಾರಂಭ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
ಸಮುದಾಯ ಅಭಿವೃದ್ಧಿಗೆ ಜ್ಞಾನದೀಪ: ಇದೇ ಸಂದರ್ಭ ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವುದು ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅದರಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಶಾಲೆಗಳ ಮೂಲಕ ಗುಣಮಟ್ಟದ ಗ್ರಾಮೀಣ ಶಿಕ್ಷಣವನ್ನು ನೀಡಲು ಪ್ರಯತ್ನಗಳನ್ನು ಮಾಡುತ್ತಿವೆ. ನಾನಾ ಕಾರಣಗಳಿಂದ ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ, ಆಟದ ಮೈದಾನಗಳು, ಶೌಚಾಲಯಗಳು ಮತ್ತು ಇತರ- ಸೌಲಭ್ಯಗಳ ಕೊರತೆ ಇರುವುದನ್ನು ಗಮನಿಸಿ, ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಶಿಕ್ಷಣವನ್ನು ಬಲಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಡಾ.ಹೆಗ್ಗಡೆ ಹೇಳಿದರು.
ಪ್ರಸ್ತುತ ಸಾಲಿನಲ್ಲಿ ನಮ್ಮ ಸ್ವಸಹಾಯ ಗುಂಪುಗಳ ಸದಸ್ಯರ ಮಕ್ಕಳ ಪೈಕಿ ಸುಮಾರು 65,000 ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನವನ್ನು ನೀಡಲು ಬಜೆಟ್ ನಿಗದಿಪಡಿಸಲಾಗಿದೆ. ಗ್ರಾಮೀಣ ಶಾಲೆಗಳಿಗೆ 1,028 ಶಿಕ್ಷಕರನ್ನು ನೇಮಿಸಲಾಗಿದೆ. ಇದುವರೆಗೆ 9278 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಗ್ರಾಮೀಣ ಶಾಲೆಗಳಿಗೆ 4,000 ಬೆಂಚ್-ಡೆಸ್ಕ್‌ಗಳ ವಿತರಣೆಯನ್ನು ಮಾಡಲಾಗಿದೆ. ಇದುವರೆಗೆ 71,454 ಜೊತೆ ಬೆಂಚ್-ಡೆಸ್ಕ್‌ಗಳನ್ನು ವಿತರಿಸಲಾಗಿದೆ. ಪೀಠೋಪಕರಣಗಳ ಕೊರತೆ ಇರುತ ಪ್ರತೀ ಶಾಲೆಗೆ 8-10 ಜೊತೆ ಬೆಂಚ್ ಡೆಸ್ಕ್‌ಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಇದುವರೆಗೆ 6,821 ಪ್ರಾಥಮಿಕ ಶಾಲೆಗಳು, 1,019 ಅಂಗನವಾಡಿಗಳು/ಬಾಲವಾಡಿಗಳು, 4,982 ಆಟ ಮೈದಾನಗಳು, 787 ಶೌಚಾಲಯಗಳು ಇತ್ಯಾದಿಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಕ್ಕಳ ಶಿಕ್ಷಣದ ಮಹತ್ವ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಹಾಗೂ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಧರ್ಮಸ್ಥಳದಲ್ಲಿ ಸಮಾನತೆ ದರ್ಶನ: ಕಾಂಪ್ಲೆಕ್ಸ್ ಉದ್ಘಾಟಿಸಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮಾತನಾಡಿ, ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಗೆ ಹೆಚ್ಚಿನ ಸ್ಥಾನ ನೀಡಬಾರದು. ಇದು ದೈವತ್ವಕ್ಕೆ ವಿರುದ್ಧವಾಗಿದೆ. ಧಾರ್ಮಿಕ ಸಂಸ್ಥೆಗಳು ಸಮುದಾಯ ಸೇವೆಯ ಕೇಂದ್ರಗಳಾಗಿವೆ. ಧರ್ಮಸ್ಥಳ ಕ್ಷೇತ್ರವು ಗ್ರಾಮೀಣ ಭಾರತಕ್ಕೆ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ, ಸಮಾನತೆಯನ್ನು ತರಬೇಕು. ಈ ಕಾರ್ಯದಲ್ಲಿ ಧರ್ಮಸ್ಥಳದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರು.
ಧರ್ಮಸ್ಥಳದಲ್ಲಿ ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಿದ್ದಾರೆ. ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಿರುತ್ತಾರೆ. ಭಕ್ತರು ನಿಲ್ಲುವುದಕ್ಕಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಲಾಗಿದೆ. ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ. ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು ಸಮಾನತೆಯನ್ನು ತೋರಿಸುತ್ತದೆ ಎಂದು ಉಪ ರಾಷ್ಟ್ರಪತಿ ಮುಕ್ತ ಕಂಠದಿಂದ ಶ್ಲಾಘಿಸಿದರು.
ಉಪರಾಷ್ಟ್ರಪತಿಗೆ ಆತ್ಮೀಯ ಸ್ವಾಗತ, ಮಂಜುನಾಥ ಸ್ವಾಮಿ ದರ್ಶನ-ಮಂಗಳವಾರ ಮಧ್ಯಾಹ್ನ 1.26 ನಿಮಿಷಕ್ಕೆ ಧರ್ಮಸ್ಥಳದ ಹೆಲಿಪ್ಯಾಡ್‌ನಲ್ಲಿ ಪತ್ನಿ ಸಮೇತರಾಗಿ ಇಳಿದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಧರ್ಮಸ್ಥಳದ ಸುರೇಂದ್ರ ಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಈ ಸಂದರ್ಭದಲ್ಲಿದ್ದರು.-ಅಲ್ಲಿಂದ ಉಪರಾಷ್ಟ್ರಪತಿಗಳು ರಸ್ತೆಯ ಮೂಲಕ ಹೆಗ್ಗಡೆ ಬೀಡುಗೆ ಆಗಮಿಸಿ ಅಲ್ಲಿಂದ ಅವರು 2 ಗಂಟೆಗೆ ನೇರ ದೇವಸ್ಥಾನಕ್ಕೆ ತೆರಳಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರೊಂದಿಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ 2.15ಕ್ಕೆ ನೂತನವಾಗಿ ನಿರ್ಮಿಸಲಾಗಿರುವ ಆಕರ್ಷಕ ಕ್ಯೂ ಕಾಂಪ್ಲೆಕ್ಸ್‌ನ್ನು ದೀಪಬೆಳಗಿಸಿ ಉದ್ಘಾಟಿಸಿದರಲ್ಲದೆ ಎರಡು ಸಸಿಗಳನ್ನು ನೆಟ್ಟು ನೀರೆರೆದರು.-
ಉದ್ಘಾಟನಾ ಕಾರ್ಯಕ್ರಮದ ಬಳಿಕ ಅಮೃತವರ್ಷಿಣಿ ಸಭಾಭವನಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳು ವಾಲಗ ನುಡಿಸುತ್ತಿದ್ದವರೊಂದಿಗೆ ಸೇರಿ ಕೊಂಡು ಅವರಲ್ಲಿದ್ದ ದೊಡ್ಡ ಹಿತ್ತಾಳೆಯ ತಾಳವಾದ್ಯವನ್ನು ಪಡೆದು ತಾವು ತಾಳ ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಅವರೊಂದಿಗೆ ಅವರ ಪತ್ನಿ ಡಾ. ಸುದೇಶ ಧನ್ಕರ್ ಕೂಡ ತಾಳವಾದ್ಯವನ್ನು ಹಿಡಿದು ವಾದನಕ್ಕೆ ತಕ್ಕಂತೆ ತಾಳ ಹಾಕಿ ಖುಷಿಪಟ್ಟರು. ಚೆಂಡೆವಾದನದ ಮೂಲಕ ಹಾಗೂ ಯಕ್ಷಗಾನ ವೇಷಧಾರಿಗಳು ಉಪರಾಷ್ಟ್ರಪತಿ ದಂಪತಿಯನ್ನು ಸ್ವಾಗತಿಸಿದರು. ಡಾ. ಹೆಗ್ಗಡೆಯವರು ಕ್ಷೇತ್ರದ ಸಂಪ್ರದಾಯದಂತೆ ಶಾಲು, ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಿದರು.-
2.41ಕ್ಕೆ ಭಾಷಣ ಆರಂಭಿಸಿ 3.08ಕ್ಕೆ ಮುಕ್ತಾಯಗೊಳಿಸಿದರು. ಬಳಿಕ ರಾಷ್ಟ್ರಗೀತೆ ನುಡಿಸಲಾಯಿತು. ಅಲ್ಲಿಂದ ನೇರವಾಗಿ ಹೆಲಿಪ್ಯಾಡ್ಡ್‌ಗೆ ತೆರಳಿ 3.20ಕ್ಕೆ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿದರು. ಕಾರ್ಯಕ್ರಮ ಅತ್ಯಂತ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಜ್ಞಾನವಿಕಾಸದ ಮಹಿಳೆಯರು ಸಮವಸ್ತ್ರದೊಂದಿಗೆ ಕಾಣಿಸಿಕೊಂಡರು. ಸಾಂಕೇತಿವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಉಪ ರಾಷ್ಟ್ರಪತಿಗಳು ಜ್ಞಾನದೀಪ ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಿದರು.