ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯ

| Published : Nov 15 2025, 02:30 AM IST

ಸಾರಾಂಶ

ವಿದ್ಯಾರ್ಥಿಗಳ ಶಿಕ್ಷಣ, ಶಾಲಾ ಸೌಲಭ್ಯಗಳ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳ ಕುರಿತು ಹಲವು ಪ್ರಮುಖ ವಿಚಾರಗಳು ಚರ್ಚಿಸಲ್ಪಟ್ಟವು.

ಕಂಪ್ಲಿ: ತಾಲೂಕಿನ ಮೆಟ್ರಿ ಕ್ಲಸ್ಟರ್‌ಗೆ ಸೇರಿದ ಮೆಟ್ರಿ ಹಾಗೂ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಸಹಿಪ್ರಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶುಕ್ರವಾರ ಪೋಷಕರ ಮತ್ತು ಶಿಕ್ಷಕರ ಮಹಾಸಭೆ ನಡೆಯಿತು.

ವಿದ್ಯಾರ್ಥಿಗಳ ಶಿಕ್ಷಣ, ಶಾಲಾ ಸೌಲಭ್ಯಗಳ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳ ಕುರಿತು ಹಲವು ಪ್ರಮುಖ ವಿಚಾರಗಳು ಚರ್ಚಿಸಲ್ಪಟ್ಟವು.

ಮೆಟ್ರಿಯಲ್ಲಿ ನಡೆದ ಕಾರ್ಯಕ್ರಮ:

ಮೆಟ್ರಿ ಹೊನ್ನಳ್ಳಿ ಸಿದ್ಧಪ್ಪನವರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಚ್. ನಿರ್ಮಲಾ ಮಾತನಾಡಿ, ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸುವುದರಿಂದ ಗುಣಮಟ್ಟದ ಶಿಕ್ಷಣವಷ್ಟೇ ಅಲ್ಲ, ಸರ್ಕಾರದಿಂದ ದೊರೆಯುವ 26ಕ್ಕೂ ಅಧಿಕ ಯೋಜನೆಗಳ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ. ಉತ್ತಮ ಪದವಿ ಮತ್ತು ತರಬೇತಿ ಪಡೆದ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪೋಷಕರು ಮಕ್ಕಳ ಭವಿಷ್ಯದ ಹಿತಕ್ಕಾಗಿ ಸರ್ಕಾರೀ ಶಾಲೆಗೆ ದಾಖಲಿಸಲು ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಿಪ್ರಾ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಮುಖ್ಯಮಂತ್ರಿ ಕೆ. ರಂಜಿತಾ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯಶಿಕ್ಷಕ ವಿ.ಆರ್. ಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಹುಲುಗಪ್ಪ, ಉಪಾಧ್ಯಕ್ಷೆ ಅಂಬಿಕಾ ಬಸವರಾಜ ಹಾಗೂ ಶಿಕ್ಷಕರಾದ ಚಂದ್ರಪ್ಪ ಕಂಬಳಿ, ರೇಖಾ, ಮಡಿವಾಳಪ್ಪ, ಅನುಸೂಯ, ಎ.ಪಿ. ಶಿಲ್ಪಾ, ಪಿ. ರಾಜೇಶ್ವರಿ, ಜಿ.ಎಂ. ಕಾವ್ಯಾ, ಹಂಪಾರೆಡ್ಡಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದೇವಲಾಪುರದಲ್ಲಿ ಕಾರ್ಯಕ್ರಮ :

ದೇವಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ನಿರಂತರವಾಗಿ ಶಾಲೆಗೆ ಗೈರಾಗುತ್ತಿರುವ 12 ಮಕ್ಕಳ ವಿಚಾರ ಪ್ರಾಧಾನ್ಯ ಪಡೆದಿತ್ತು. ಮುಖ್ಯಶಿಕ್ಷಕ ನಂದಕಿಶೋರ್ ಮಾತನಾಡಿ ಶಾಲೆಗೆ ಗೈರಾಗಿರುವ ಮಕ್ಕಳನ್ನು ಮತ್ತೆ ವಿದ್ಯಾಭ್ಯಾಸದ ಕಲಿಕಾಪಥಕ್ಕೆ ಕರೆತರುವ ಜವಾಬ್ದಾರಿಯಲ್ಲಿ ಗ್ರಾಮಾಡಳಿತ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಅವರು ಗ್ರಾಪಂ ಅಧ್ಯಕ್ಷೆ ಪೂಜಾರಿ ಈರಮ್ಮ ರಮೇಶ್ ಹಾಗೂ ಪಿಡಿಒ ಮಲ್ಲಿಕಾರ್ಜುನರಿಗೆ ಅಧಿಕೃತ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು, ಆರ್‌ಟಿಇ, ಬಾಲ ಕಾರ್ಮಿಕ ನಿಷೇಧ, ಬಾಲ್ಯ ವಿವಾಹ ತಡೆ ಸೇರಿದಂತೆ ಮಕ್ಕಳ ಸುರಕ್ಷತೆ ಮತ್ತು ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಹಲವು ಸ್ಪರ್ಧೆಗಳು ಜರುಗಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಸಭೆಗೆ ಸೊಬಗು ಹೆಚ್ಚಿತು.

ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜಕುಮಾರ್, ದೇವರಮನೆ ಪಂಪಯ್ಯ, ಮುಖ್ಯಶಿಕ್ಷಕ ಎಚ್.ಪಿ. ಸೋಮಶೇಖರ, ಗ್ರಾಪಂ ಉಪಾಧ್ಯಕ್ಷ ಎನ್. ನಾಗರಾಜ, ಸದಸ್ಯರಾದ ದೇವರಮನೆ ಮಲ್ಲಿಕಾರ್ಜುನ, ಉಪ್ಪಾರಹಳ್ಳಿ ಸತ್ಯಣ್ಣ, ಕುಂಬಾರ ವಿರುಪಾಕ್ಷಪ್ಪ, ಬೂದಾಳ್ ರವಿಕುಮಾರ್, ಒಡೆಯರ ಸವಾಮಿ, ಗುಡ್ರು ಓಂಕಾರಪ್ಪ, ವಡ್ರು ಜಡೆಪ್ಪ, ಸೊಸೈಟಿ ಅಧ್ಯಕ್ಷ ಗೌಡ್ರು ಸಿದ್ದಪ್ಪ, ಸಿಂಡಿಕೇಟ್ ಸದಸ್ಯ ಕೆ. ಶಿವಕುಮಾರ್ ಸೇರಿದಂತೆ ಹಲವು ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.