ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯ ಮತ್ತು ಹೊರ ರಾಜ್ಯಗಳ ಮಾರುಕಟ್ಟೆಯಲ್ಲಿ ನಂದಿನಿ ಹಾಲು ಪ್ರಗತಿ ಸಾಧಿಸಬೇಕಾದರೆ ಉತ್ಪಾದಕರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದು ಒಕ್ಕೂಟದ ನಿರ್ದೇಶಕ ಎಂ.ಕೆ.ಹರೀಶ್ ಬಾಬು ಸೋಮವಾರ ಹೇಳಿದರು.

ತಾಲೂಕಿನ ವಳಗೆರೆದೊಡ್ಡಿ ಗ್ರಾಮದಲ್ಲಿ 17.34 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಹಿಳಾ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಾಲು ಒಕ್ಕೂಟ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಡೇರಿಗಳ ಪೈಪೋಟಿ ನಡುವೆ ಸಹ ಗ್ರಾಹಕರಿಗೆ ಗುಣಮಟ್ಟದ ಹಾಲು ಮಾರಾಟ ಮಾಡುತ್ತಿದೆ. ಒಕ್ಕೂಟ ಉತ್ತರ ಭಾರತದ ಸೇರಿದಂತೆ ಕರ್ನಾಟಕದ ಮಾರುಕಟ್ಟೆಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಹರೀಶ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪ ವ್ಯವಸ್ಥಾಪಕ ಡಾ.ಮಂಜೇಶ್ ಗೌಡ ಮಾತನಾಡಿ, ಮಹಿಳಾ ಸಂಘದ ಕಟ್ಟಡ ನಿರ್ಮಾಣಕ್ಕೆ ಕೆಎಂಎಫ್‌ನಿಂದ 4.50 ಲಕ್ಷ, ಜಿಲ್ಲಾ ಹಾಲು ಒಕ್ಕೂಟದಿಂದ 3. ಲಕ್ಷ, ಸಂಘದ ಕಟ್ಟಡದ ನಿಧಿಯಿಂದ 1.60 ಲಕ್ಷ, ಆಪತ್ತು ನಿಧಿಯಿಂದ 1.24 ಲಕ್ಷ, ಶಾಸಕರ ಅನುದಾನ 5 ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ರಸ್ತೆಯಿಂದ 2 ಲಕ್ಷ ಸಹಾಯಧನ ಸೇರಿದಂತೆ ಒಟ್ಟು 17.34 ಲಕ್ಷ ವೆಚ್ಚದಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಮುಂದಿನ 4 ತಿಂಗಳಲ್ಲಿ ಪೂರ್ಣಗೊಳಿಗೊಳ್ಳಲಿದೆ ಎಂದರು.


ಸಂಘದ ಅಧ್ಯಕ್ಷೆ ನಿರ್ಮಲ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಮಾಜಿ ನಿರ್ದೇಶಕ ಲಿಂಗನದೊಡ್ಡಿ ರಾಮಕೃಷ್ಣ, ವಿಸ್ತರಣಾಧಿಕಾರಿ ದಿಲ್ವಾರ್ ಸಾಬ್ ಮಸ್ತಾನ, ಗ್ರಾಪಂ ಮಾಜಿ ಅಧ್ಯಕ್ಷ ರಾಧಾ ವಿ.ಕೆ.ನಾಗೇಶ್, ವಿ.ಕೆ.ದಿನೇಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿ.ಕೆ.ರಾಜೇಶ್, ಸಂಘದ ಕಾರ್ಯದರ್ಶಿ ಎಂ.ಈ.ಸೌಭಾಗ್ಯ ಹಾಲು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಇದ್ದರು.