ಅಂಕಗಳಿಂದ ವಿದ್ಯಾರ್ಥಿಗಳ ಗುಣಮಟ್ಟ ಅಳೆಯಬಾರದು: ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ

| Published : Jun 29 2024, 12:32 AM IST

ಅಂಕಗಳಿಂದ ವಿದ್ಯಾರ್ಥಿಗಳ ಗುಣಮಟ್ಟ ಅಳೆಯಬಾರದು: ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಣೇಹಳ್ಳಿಯಲ್ಲಿ ನಡೆದ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಿರಿಯೂರು ಬಿಇ ಒ ತಿಪ್ಪೇಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಕೇವಲ ಅಂಕಗಳಿಂದಲೇ ವಿದ್ಯಾರ್ಥಿ ಗುಣಮಟ್ಟ ಅಳೆಯುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿಗಳು ಬೌದ್ಧಿಕ ಮಟ್ಟ ಎತ್ತರಿಸಿಕೊಳ್ಳಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರೌಢಶಾಲೆ ಎಷ್ಟು ಮುಖ್ಯವೋ ಪ್ರಾಥಮಿಕ ಶಾಲೆಯೂ ಅಷ್ಟೇ ಮುಖ್ಯ. ಅಧ್ಯಾಪಕರು ಇನ್ನು ಹೆಚ್ಚಿನ ಆಸಕ್ತಿ ವಹಿಸಿ ಬೋಧನೆ ಮಾಡಬೇಕು. ಶಿಕ್ಷಕರು ಬೌದ್ಧಿಕ ಮಟ್ಟ ಹೆಚ್ಚಿಸಿ ಕೊಳ್ಳಬೇಕು. ಅಧ್ಯಾಪಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪಾಠ ಕೇಳಬೇಕು. ಬೋಧನೆ ಮಾಡಿದ ವಿಷಯ ಮನಸ್ಸಿನ ಆಳಕ್ಕೆ ಇಳಿಸಿಕೊಳ್ಳಬೇಕು. ಶ್ರವಣ, ಮನನ, ನಿದಿದ್ಯಾಸನ ಮಾಡಿದಾಗ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದುವರಿಯಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಓದಿನ ಜೊತೆ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಶಾಲೆಯಲ್ಲಿ ಓದುವುದು ಮುಖ್ಯವಲ್ಲ. ಹೊರಗಡೆ ನಮ್ಮ ನಡಾವಳಿಕೆಗಳು ಹೇಗಿವೆ ಎನ್ನುವುದು ಮುಖ್ಯ. ಆ ನಡಾವಳಿಕೆ ಮೂಲಕ ನಮ್ಮ ವ್ಯಕ್ತಿತ್ವ ಅರಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಇಂದು ದೊಡ್ಡ-ದೊಡ್ಡ ಸ್ಥಾನಗಳಲ್ಲಿರುವವರೇ ಅಡ್ಡ ದಾರಿ ಹಿಡಿದು ಬದುಕಿನಲ್ಲಿ ವಿಫಲರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಮುಖ್ಯವಾದ ಕಾರಣ ಮನೆ ಮತ್ತು ಶಾಲೆಗಳಲ್ಲಿ ಸಕಾರಾತ್ಮಕವಾದ ಸಂಸ್ಕಾರ ದೊರೆಯದೇ ಇರುವುದು. ಮನೆಯಲ್ಲಿ ತಂದೆ-ತಾಯಿ- ಬಂದು ಭಾಂಧವರು ಮತ್ತು ಶಾಲೆಯಲ್ಲಿ ಶಿಕ್ಷಕರು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡುವ ಕೆಲಸವನ್ನೂ ಮಾಡಬೇಕು ಎಂದರು.

ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯ ನೆರವೇರಿಸಿದ ಹಿರಿಯೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾರ್ಥಿ ಸಂಘಗಳ ಉದ್ದೇಶ ಪರಸ್ಪರ ಪ್ರೀತಿ ವಿಶ್ವಾಸದಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು. ನಾಯಕ ಗುಣ ಬೆಳೆಸಿಕೊಳ್ಳುವುದು. ಎಲ್ಲ ಪೋಷಕರಲ್ಲೂ ಇಂಗ್ಲಿಷ್ ಮೀಡಿಯಂ ಸೇರಿಸುವ ಧಾವಂತದಲ್ಲಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇಂಗ್ಲಿಷ್ ಮೀಡಿಯಂ ಅಥವಾ ಹೆಚ್ಚು ಫೀ ತೆಗೆದುಕೊಳ್ಳುವುದೇ ಒಳ್ಳೆಯ ಶಾಲೆಯಲ್ಲ. ಸಾಣೇಹಳ್ಳಿ ಶಾಲೆ ಉತ್ತಮ ನಾಗರಿಕತೆ ಸಂಸ್ಕೃತಿ ಕಲಿಸುತ್ತದೆ. ಶಿಕ್ಷಕರಿಗೆ ಉತ್ತಮ ಧ್ಯೇಯ ಇದ್ದಾಗ ಮಾತ್ರ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೇರಿಸಲು ಸಾಧ್ಯ. ಇಲ್ಲಿ ಕಲಿತ ಮಕ್ಕಳ ಮುಂದೆ ಎಲ್ಲ ಜವಾಬ್ದಾರಿ ಹೊರಲಿಕ್ಕೆ ಸಿದ್ಧರಾಗಿರುತ್ತಾರೆ. ಈ ವರ್ಷ 10ನೆ ತರಗತಿ ಪರೀಕ್ಷೆ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆ. ಇದು ಸರಿಯಾದ ದಾರಿಯಲ್ಲಿ ಹೋಗಲಿಕ್ಕೆ ಒಂದು ಮಾರ್ಗ ಹಾಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶಿವಕುಮಾರ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷ ಡಿ ವಿ ಗಂಗಾಧರಪ್ಪ, ಕೆ ಸಿ ಶಿವಮೂರ್ತಿ ಮಾತನಾಡಿದರು.

ಗುರುಪಾದೇಶ್ವರ ಪ್ರೌಢಶಾಲೆ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ ಸಿ ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆ ಮೇಲೆ ಮುಖ್ಯೋಪಾಧ್ಯಾಯರಾದ ಕೆ.ಆರ್.ಬಸವರಾಜ, ಬಿ.ಎಸ್.ಶಿವಕುಮಾರ್ ಮತ್ತು ಎ.ಎಸ್.ಶಿಲ್ಪಾ ಇದ್ದರು. ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ವಿದ್ಯಾರ್ಥಿಗಳು ವಚನಗೀತೆ ಮತ್ತು ಸಾಮೂಹಿಕ ಪ್ರಾರ್ಥನೆ ಆಕರ್ಷಕ ನೃತ್ಯರೂಪಕ ನಡೆಸಿಕೊಟ್ಟರು. ಕರಿಬಸಮ್ಮ ಸಿ ಸ್ವಾಗತಿಸಿದರೆ, ಲಂಕೇಶ್ ವಂದಿಸಿದರು. ಜ್ಞಾನೇಶ್ ಕಾರ್ಯಕ್ರಮ ನಡೆಸಿಕೊಟ್ಟರು.