ವಿಭೂತಿಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ

| Published : Sep 03 2024, 01:42 AM IST

ಸಾರಾಂಶ

Queenliness Meera in Vibhutihalli Village

-ಅಧಿಕಾರಿಗಳ ಉಡಾಫೆ ಉತ್ತರ

----

- ಬಾವಿಯಲ್ಲಿ ಚರಂಡಿ ನೀರು । ಕಳಪೆ ಮಟ್ಟದ ಜೆಜೆಎಂ ಕಾಮಗಾರಿ । ಪಂಚಾಯ್ತಿ ಅನುದಾನದಡಿ ಕೈಗೊಂಡ ಕಾಮಗಾರಿ ತನಿಖೆಗೆ ಗ್ರಾಮಸ್ಥರು ಆಗ್ರಹ

------

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ ಮಂಜೂರು ಮಾಡಿದರೂ ಹಳ್ಳಿಗಳು ಅಭಿವೃದ್ಧಿಯಾಗುತ್ತಿಲ್ಲ ಎಂಬುದಕ್ಕೆ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿಭೂತಿಹಳ್ಳಿ ಗ್ರಾಮವೇ ಸಾಕ್ಷಿಯಾಗಿದೆ.

ಶಹಾಪುರ ನಗರದಿಂದ ಅನತಿ ದೂರದಲ್ಲಿ ರಾಜ್ಯ ಹೆದ್ದಾರಿ ಮೇಲೆ ಇರುವ ವಿಭೂತಿಹಳ್ಳಿ ಗ್ರಾಮದಲ್ಲಿ 450 ಮನೆಗಳು ಇದ್ದು, 2 ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿರುವ ಈ ಗ್ರಾಮದಲ್ಲಿ ಚರಂಡಿಗಳೇ ನಿರ್ಮಾಣ ಮಾಡಿಲ್ಲ. ಕೆಲವೊಂದು ಕಡೆ ಇರುವ ಚರಂಡಿಗಳು ಇದ್ದರೂ ಇಲ್ಲದಂತಾಗಿವೆ. ಮನೆಗಳಿಂದ ಹೊರಬರುವ ಕೊಚ್ಚೆ ನೀರು ರಸ್ತೆಗಳಲ್ಲಿ ಹರಿದು ದುರ್ವಾಸನೆ ಬಿರುತ್ತಿದೆ. ಇದರಿಂದ ಗ್ರಾಮಸ್ಥರು ಮಕ್ಕಳು ಸಾಂಕ್ರಾಮಿಕರೋಗಗಳಿಂದ ನರುಳುತ್ತಿದ್ದಾರೆ.

ಚರಂಡಿ ಮತ್ತು ನೀರಿನ ಸಮಸ್ಯೆ:

ಸಮಯಕ್ಕೆ ಸರಿಯಾಗಿ ಕುಡಿವ ನೀರು ಸಿಗುತ್ತಿಲ್ಲ. ನೀರಿಗಾಗಿ ಊರ ಹೊರಗಿನ ಬೋರವೆಲ್ ಆಶ್ರಯಿಸಬೇಕಿದೆ. ನೀರಿನ ಸಮಸ್ಯೆ ಕುರಿತು ಪಿಡಿಒ ಗಮನಕ್ಕೆ ಹಲವಾರು ಬಾರಿ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಜನರು. ಅಲ್ಲದೇ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡದೆ ನಿರ್ಲಕ್ಷ್ಯ ವಹಿಸಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

* ಬಾವಿಗೆ ಚರಂಡಿ ನೀರು: ಬಹಳ ವರ್ಷಗಳಿಂದ ಈ ಬಾವಿಯ ನೀರನ್ನೆ ಜನ-ಜಾನುವಾರುಗಳಿಗೆ ಮತ್ತು ಬಳಕೆಗೆ ಬಳಸುತ್ತಿದ್ದೇವು. ಆದರೆ, ಚರಂಡಿ ನೀರು ನೇರವಾಗಿ ಬಾವಿಗೆ ಸೇರುತ್ತಿರುವುದರಿಂದ ನೀರು ಬಳಸುತ್ತಿಲ್ಲ. ಭಾವಿ ಸುತ್ತಲೂ ಸ್ವಚ್ಛ ಮಾಡಿ ಕೊಡುವಂತೆ ಅನೇಕ ಬಾರಿ ಪಿಡಿಒಗೆ ಕೇಳಿಕೊಂಡರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಗ್ರಾಮದ ಸಿದ್ದಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

* ತನಿಖೆಗೆ ಆಗ್ರಹ: ವಿಭೂತಿ ಹಳ್ಳಿಗ್ರಾಮಕ್ಕೆ ಕಳೆದ 5 ವರ್ಷದಿಂದ ಎಷ್ಟು ಅನುದಾನ ಬಂದಿದೆ ಮತ್ತು ಯಾವುದಕ್ಕೆ ಖರ್ಚಾಗಿದೆ. ಕೈಗೊಂಡ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಜಿಲ್ಲಾ ದಲಿತ ಹಾಗೂ ಕಾರ್ಮಿಕ ಮುಖಂಡ ನಿಂಗಣ್ಣ ನಾಟೆಕಾರ ಅವರು ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ಮನವಿ ಮಾಡಿದ್ದಾರೆ.

* ಬಯಲಲ್ಲೇ ಬಹಿರ್ದೆಸೆ: ಸಾರ್ವಜನಿಕ ಶೌಚಾಲಯಗಳು ಇಲ್ಲದ ಕಾರಣ ಅಂಗವಿಕಲರು, ಗರ್ಭಿಣಿಯರು, ರೋಗಿಗಳು, ವಯೋವೃದ್ಧರು, ಮಕ್ಕಳು ನಿತ್ಯ ಸಂಕಷ್ಟ ಪಡುವಂತಾಗಿದೆ. ಕೈಯಲ್ಲಿ ಚೆಂಬು ಹಿಡಿದುಕೊಂಡು ಮುಳ್ಳು ಕಂಟಿ ಕಡೆ ಹೋಗುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಗ್ರಾಮದ ಮಹಿಳೆ ಮಾಳಮ್ಮ.

* ಹಳ್ಳ ಹಿಡಿದ ಜೆಜೆಎಂ ಯೋಜನೆ: ಗ್ರಾಮದಲ್ಲಿ ಕಳಪೆ ಕಾಮಗಾರಿಯಿಂದ ಜಲ ನಿರ್ಮಲ ಯೋಜನೆಯ ಕುಡಿವ ನೀರಿನ ಯೋಜನೆ ಹಳ್ಳ ಹಿಡಿದಿದ್ದು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿ. ನೀರು ಗ್ರಾಮದ ನಲ್ಲಿಗಳಿಗೆ ಬರಲಿಲ್ಲ. ಇದರಿಂದ ಯೋಜನೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಮನೆ ಮುಂದೆ ಅಳವಡಿಸಲಾದ ನಳಗಳು ನೀರು ಬರುವ ಮೊದಲೇ ಹಾಳಾಗಿ ಹೋಗಿವೆ. ಇನ್ನು ಕಳಪೆ ಕಾಮಗಾರಿ ನಡೆಸಿದ ಇಂಜಿನಿಯರ್‌ ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

.........ಕೋಟ್.........ಗ್ರಾಮ ಪಂಚಾಯ್ತಿ ಅಧಿಕಾರಿಗಳು ವಸೂಲಿಗೆ ಮಾತ್ರ ಬಂದು ಹೋಗುತ್ತಾರೆ. ಸಮಸ್ಯೆಗಳ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ಪಿಡಿಒ ಅವರಿಗೆ ಏನಾದರೂ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಸ್ವಚ್ಛತೆ ಮರೀಚಿಕೆಯಾಗಿದೆ.

- ಪರ್ವತ ರೆಡ್ಡಿ, ವಿಭೂತಿಹಳ್ಳಿ ಗ್ರಾಮದ ಯುವ ಮುಖಂಡ.

----------

2ವೈಡಿಆರ್5: ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಬಾವಿ ಸುತ್ತಲು ಚರಂಡಿ ನೀರು ತುಂಬಿಕೊಂಡಿರುವುದು.

---------

2ವೈಡಿಆರ್6: ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು.