ಸಾರಾಂಶ
ಜನರಿಗೆ ಸಾಲು ಸಾಲು ರಜೆ ಇರುವ ಕಾರಣ ಜನರು, ಬೆಂಗಳೂರು ಬಿಟ್ಟು ಹೊರ ಹೋಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆಯಿದ್ದು, ಶುಕ್ರವಾರ ರಾತ್ರಿ ಊರಿಗೆ ತೆರಳುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾದ ಪರಿಣಾಮ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು.ಎರಡನೇ ಶನಿವಾರ, ಭಾನುವಾರ ವಾರಾಂತ್ಯದ ರಜೆ ಹಾಗೂ ಸೋಮವಾರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆಯಿದೆ. ಹೀಗೆ ಮೂರು ದಿನಗಳ ರಜೆ ಇರುವ ಕಾರಣದಿಂದಾಗಿ, ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಊರಿಗೆ ತೆರಳುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅದರಿಂದಾಗಿ ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿತ್ತು. ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದ ಕೆಎಸ್ಸಾರ್ಟಿಸಿ, 500ಕ್ಕೂ ಹೆಚ್ಚಿನ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಅಲ್ಲದೆ, ಕೆಎಸ್ಸಾರ್ಟಿಸಿ ಸಿಬ್ಬಂದಿ, ಅಧಿಕಾರಿಗಳು ತಡರಾತ್ರಿವರೆಗೆ ಬಸ್ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಿದರು.
ಪ್ರಯಾಣಿಕರು ಏಕಕಾಲಕ್ಕೆ ಬಸ್ ನಿಲ್ದಾಣಗಳತ್ತ ಬಂದ ಪರಿಣಾಮ ಮೆಜೆಸ್ಟಿಕ್, ಮಲ್ಲೇಶ್ವರ, ಶಾಂತಿನಗರ ಡಬಲ್‌ರಸ್ತೆ, ಮೈಸೂರು ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚುವಂತಾಗಿತ್ತು. ಅಲ್ಲದೆ, ನಗರದ ವಿವಿಧ ಬಡಾವಣೆಗಳಿಂದ ಜನರನ್ನು ಕರೆತರಲು ಬಿಎಂಟಿಸಿ ಕೂಡ ರಾತ್ರಿ ವೇಳೆ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.