ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರೆಡ್ ಕ್ರಾಸ್ ಸಂಸ್ಥೆ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯವಾಗಿ ಬೇಕಾಗಿರುವ ಕಟ್ಟಡ ನಿರ್ಮಾಣಕ್ಕೆ ಶೀಘ್ರ ನಿವೇಶನ ದೊರಕಿಸಿಕೊಡವುದಾಗಿ ಜಿಲ್ಲಾಧಿಕಾರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಟಿ.ವೆಂಕಟೇಶ್ ಹೇಳಿದರು.ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ರೆಡ್‍ಕ್ರಾಸ್ ಸಂಸ್ಥೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ರೆಡ್‍ಕ್ರಾಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನೊಂದವರ ಧ್ವನಿಯಾಗಿ ಅವರ ಕಷ್ಟಗಳಿಗೆ ಸ್ಪಂಧಿಸುತ್ತಿದೆ. ಕರೋನ ಸಮಯದಲ್ಲಿ ಉತ್ತಮವಾದ ಕೆಲಸ ಮಾಡಿ ಜನ ಮನ್ನಣೆ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಉಪ ವಿಭಾಗಾಧಿಕಾರಿ ಅವಧಿಯಿಂದ ಗಮನಿಸುತ್ತಿದ್ದೇನೆ. ಚಿತ್ರದುರ್ಗದಲ್ಲಿ ರೆಡ್ ಕ್ರಾಸ್ ಗೆ ಕಟ್ಟಡದ ಕೊರತೆ ಇದೆ. ನಿವೇಶನ ನೋಡಲು ಅಧಿಕಾರಿಗಳಿ ಸೂಚಿಸಿದ್ದೇನೆ. ಶೀಘ್ರ ನಿವೇಶನ ದೊರಕಿಸಿಕೊಡಲಾಗುವುದು.ಚಿತ್ರದುರ್ಗ ರಾಜ್ಯದ ಮಧ್ಯ ಭಾಗದಲ್ಲಿದ್ದು ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿವೆ. ಅಪಘಾತಗಳ ಪ್ರಮಾಣ ಹೆಚ್ಚಾಗಿದ್ದು, ಈ ಹಿನ್ನೆಲೆ ರೆಡ್ ಕ್ರಾಸ್ ಜವಾಬ್ದಾರಿ ಇಮ್ಮಡಿಯಾಗಿದೆ. ಸೂಕ್ತ ಕಾರ್ಯನಿರ್ವಹಣೆಗೆ ಸಹಕಾರ ನೀಡುವುದಾಗಿ ವೆಂಕಟೇಶ್ ಭರವಸೆ ನೀಡಿದರು.
ರೆಡ್‍ಕ್ರಾಸ್ ಸಂಸ್ಥೆ ಸಭಾಪತಿ ಗಾಯತ್ರಿ ಶಿವರಾಂ ಮಾತನಾಡಿ, ರೆಡ್‍ಕ್ರಾಸ್ ಗೆ ದೇಶದಲ್ಲಿ ರಾಷ್ಟ್ರಪತಿಗಳು, ರಾಜ್ಯದಲ್ಲಿ ರಾಜ್ಯಪಾಲರು, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಈ ಮುಂಚೆ ಸಣ್ಣದಾಗಿ ಪ್ರಾರಂಭವಾದ ಈ ಸಂಸ್ಥೆ ಈಗ 220 ದೇಶಗಳಲ್ಲಿ ಇದೆ. 1920ರಲ್ಲಿ ಭಾರತಕ್ಕೆ ಬಂದ ಈ ಸಂಸ್ಥೆ 1921ರಲ್ಲಿ ಕರ್ನಾಟಕ ಹಾಗೂ 2000 ದಲ್ಲಿ ಚಿತ್ರದುರ್ಗ ಪ್ರವೇಶಿಸಿದೆ. ಸಂಸ್ಥೆ ಕಾಲು ಶತಮಾನದ ಹೊಸ್ತಿಲಲ್ಲಿ ಇದ್ದು ಸ್ವಂತ ಕಟ್ಟಡ ಹೊಂದುವ ಉದ್ದೇಶವಿದೆ. ದಾನಿಗಳು ಕೊಟ್ಟ ವಸ್ತುಗಳ ಸಂಗ್ರಹಿಸಿಡಲು ಸ್ಥಳವಿಲ್ಲದಂತಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಜಾಗದ ಸಮಸ್ಯೆ ನೀಗಿಸಬೇಕೆಂದು ವಿನಂತಿಸಿದರು.ರೆಡ್ ಕ್ರಾಸ್‌ನಿಂದ ಆರೋಗ್ಯ, ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ಅಂಗವಿಕಲರಿಗೆ ವಿವಿಧ ರೀತಿಯ ಸಲಕರಣೆಗಳ ವಿತರಣೆ ಮಾಡಲಾಗಿದೆ. ರಕ್ತದಾನ ಶಿಬಿರಗಳ ಮೂಲಕ ರಕ್ತನಿಧಿ ಕೇಂದ್ರಕ್ಕೆ ರಕ್ತ ಸಂಗ್ರಹ ಮಾಡಿ ನೀಡಲಾಗಿದೆ. ಈ ಉತ್ತಮ ಕೆಲಸಗಳಿಗಾಗಿ ಸಂಸ್ಥೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕೋವಿಡ್ ಸಮಯದಲ್ಲಿ 108 ದಿನಗಳ ಕಾಲ ಆಸ್ಪತ್ರೆಗೆ ಬಂದ ರೋಗಿಗಳಿಗೆ ಮತ್ತು ಸಂಬಂಧಿಗಳಿಗೆ ಆಹಾರವನ್ನು ವಿತರಣೆ ಮಾಡಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಹೈಜನಿಕ್ ಕಿಟ್ ಹಾಗೂ ಕೋವಿಡ್ ಸಮಯದಲ್ಲಿ ಮೃತ ಪಟ್ಟ ಓರ್ವ ಕುಟುಂಬಕ್ಕೆ ಹೊಲಿಗೆ ಯಂತ್ರ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ಸದಸ್ಯರಿಗೆ ಐಡಿ ಕಾರ್ಡಗಳನ್ನು ವಿತರಣೆ ಮಾಡಲಾಯಿತು.ರೆಡ್ ಕ್ರಾಸ್ ಕಾರ್ಯದರ್ಶಿ ಮಜಹರುಲ್ಲಾ. ಉಪ ಸಭಾಪತಿ ಅರುಣ್ ಕುಮಾರ್, ನಿರ್ದೇಶಕರಾದ ಮಹಮದ್ ಆಲಿ, ಕಾರ್ತಿಕ್,ಸುರೇಶ್ ಬಾಬು, ಸಾದಾ ಸುರೇಶ್, ಶಿವರಾಮ್, ಚೇತನ್, ಹನುಮಂತಪ್ಪ ಪೂಜಾರ್, ಸದಸ್ಯರಾದ ಗುರುಮೂರ್ತಿ, ಮಂಜುನಾಥ್ ಭಾಗವತ್, ಸುರೇಶ್ ಬಾಫ್ನ, ಎಂ.ಸಿ.ಶಂಕರ್, ವೀಣಾ ಜಯರಾಮ್, ರೀನಾ, ಮಹಂತಮ್ಮ, ಹನುಮಂತ ರೆಡ್ಡಿ, ಶಿವಣ್ಣ ಇದ್ದರು.