ಜಮೀರ್‌ಗೆ ₹2 ಕೋಟಿ ಸಾಲ ಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ

| N/A | Published : Sep 01 2025, 01:04 AM IST / Updated: Sep 01 2025, 11:40 AM IST

Radhika Kumaraswamy
ಜಮೀರ್‌ಗೆ ₹2 ಕೋಟಿ ಸಾಲ ಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದಶಕದ ಹಿಂದೆ ಆರ್ಥಿಕ ಸಂಕಷ್ಟದಲ್ಲಿದ್ದ ರಾಜ್ಯ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್‌ ಅವರಿಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ₹2 ಕೋಟಿ ಸಾಲ ಕೊಟ್ಟಿದ್ದರು ಎಂಬ ವಿಷಯ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ದಶಕದ ಹಿಂದೆ ಆರ್ಥಿಕ ಸಂಕಷ್ಟದಲ್ಲಿದ್ದ ರಾಜ್ಯ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್‌ ಅವರಿಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ₹2 ಕೋಟಿ ಸಾಲ ಕೊಟ್ಟಿದ್ದರು ಎಂಬ ವಿಷಯ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು, ವಸತಿ ಸಚಿವರ ಆದಾಯದ ಮೂಲಗಳನ್ನು ಶೋಧಿಸಿದಾಗ ಸಾಲ ಕೊಟ್ಟವರ ಪಟ್ಟಿ ಸಿಕ್ಕಿದೆ. ಇದರಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ರಾಧಿಕಾ ಕುಮಾರಸ್ವಾಮಿ ಅವರಿಂದ ಲೋಕಾಯುಕ್ತ ಪೊಲೀಸರು ವಿವರಣೆ ಸಹ ಪಡೆದುಕೊಂಡಿದ್ದಾರೆ. ತಾವು ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಅವರು ಒಪ್ಪಿಕೊಂಡು ಅಧಿಕೃತ ಹೇಳಿಕೆ ಸಹ ದಾಖಲಿಸಿದ್ದಾರೆ.

ಏನಿದು ಪ್ರಕರಣ?:

2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಾಗ ಆ ವಂಚಕ ಕಂಪನಿ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಜಮೀರ್‌ ಖಾನ್‌ ಅವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿತ್ತು. ಬಳಿಕ ಇ.ಡಿ ವರದಿ ಆಧರಿಸಿ ಆಗಿನ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿದ್ದ ಜಮೀರ್ ಖಾನ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಂದು ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪ್ರಕರಣ ದಾಖಲಿಸಿತ್ತು. ಎಸಿಬಿ ರದ್ದುಗೊಂಡ ಬಳಿಕ ಪ್ರಕರಣದ ತನಿಖೆಯೂ ಲೋಕಾಯುಕ್ತ ಪೊಲೀಸರಿಗೆ ವರ್ಗವಾಯಿತು. ಈಗ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸಚಿವ ಜಮೀರ್ ಸೇರಿ ಹಲವು ಜನರ ವಿಚಾರಣೆ ಸಹ ನಡೆದಿದೆ. 

ಲಕ್ಕಿ ಸಿನಿಮಾದ ಲಾಭದ ಹಣ-ರಾಧಿಕಾ:

ತಾವು ಯಾರಿಂದೆಲ್ಲ ಸಾಲ ಪಡೆದಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಲಿಖಿತವಾಗಿ ಸಚಿವ ಜಮೀರ್ ಪಟ್ಟಿ ಕೊಟ್ಟಿದ್ದರು. ಇದರಲ್ಲಿ ತಾವು ನಟಿ ರಾಧಿಕಾ ಕುಮಾರಸ್ವಾಮಿ ಅವರಿಂದ ಎರಡು ಕೋಟಿ ರು. ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದರು. ಅಂತೆಯೇ ಲೋಕಾಯುಕ್ತ ಪೊಲೀಸರು ರಾಧಿಕಾ ಅವರಿಗೆ ನೋಟಿಸ್ ನೀಡಿ ಹಣದ ವಿವರ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯಕ್ತ ಪೊಲೀಸರ ಮುಂದೆ ಹಾಜರಾದ ಅವರು, ಜಮೀರ್ ಖಾನ್‌ ಅವರಿಗೆ ಸಂಕಷ್ಟ ಸಂದರ್ಭದಲ್ಲಿ ಆರ್ಥಿಕ ನೆರವಿನ ರೂಪದಲ್ಲಿ ಸಾಲ ಕೊಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ.

‘ನಾನು 2012ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಮ್ಯಾ ಅಭಿನಯದಲ್ಲಿ ಶಮಿಕಾ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದೆ. ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ವಿನಿಂದ ಸಂಪಾದಿಸಿದ ಹಣದಲ್ಲಿ ₹2 ಕೋಟಿಯನ್ನು ಸಚಿವರಿಗೆ ನೀಡಿದ್ದೆ’ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಈ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ತಮ್ಮ ಹೇಳಿಕೆಗೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ರಾಧಿಕಾ ಅವರಿಗೆ ಸೂಚಿಸಿದ್ದಾರೆ. ಇದಕ್ಕೊಪ್ಪಿದ ಅವರು, ಕೆಲವೇ ದಿನಗಳಲ್ಲಿ ಸಚಿವರಿಗೆ ನೀಡಿದ್ದ ಹಣದ ಕುರಿತು ಮತ್ತಷ್ಟು ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

₹1 ಕೋಟಿ ಕೊಟ್ಟಿದ್ದ ಕುಪ್ಪೇಂದ್ರ ರೆಡ್ಡಿ

ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟವರ ಪಟ್ಟಿಯಲ್ಲಿ ಮಾಜಿ ಸಂಸದ ಹಾಗೂ ಜೆಡಿಎಸ್‌ ಮುಖಂಡ ಕುಪ್ಪೇಂದ್ರ ರೆಡ್ಡಿ ಅವರ ಹೆಸರೂ ಇದೆ. ಈಗಾಗಲೇ ಮಾಜಿ ಸಂಸದರಿಗೂ ಹಣದ ಲೆಕ್ಕ ನೀಡುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಆದರೆ ಈವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದು ಬಂದಿದೆ.

ತಮ್ಮ ಸಾರಿಗೆ ಸೇರಿ ಇತರೆ ಉದ್ಯಮಕ್ಕಾಗಿ ನಟಿ ರಾಧಿಕಾ ಹಾಗೂ ಕುಪ್ಪೇಂದ್ರ ರೆಡ್ಡಿ ಅವರು ಮಾತ್ರವಲ್ಲದೆ, ಹಲವು ಜನರಿಂದ ಸಚಿವರು ಸಾಲ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

Read more Articles on