ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿ ಪ್ರದೇಶದಲ್ಲಿ ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗಿದ್ದ ಕಾಡಾನೆಗಳ ಕಾರ್ಯಾಚರಣೆಯ ಅಂತಿಮ ಘಟ್ಟವಾಗಿ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಿವುದರ ಮೂಲಕ ಮುಕ್ತಾಯಗೊಂಡಿದೆ.ಕಾನಹಳ್ಳಿ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಲು ಕಂಕಣಬದ್ಧರಾದ ಅರಣ್ಯಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ತೆರಳಿ ಕಾಡಾನೆ ಇರುವ ಸ್ಥಳವನ್ನು ಪತ್ತೆ ಹಚ್ಚಲು ಕಾರ್ಯೋನ್ಮುಖರಾದರು. ಕಾನಹಳ್ಳಿ ಅರಣ್ಯ ಪ್ರದೇಶದ ಹತ್ತಿರದಲ್ಲಿರುವ ಶಿರಗುರ ಎಂಬಲ್ಲಿ ಕಾಡಾನೆಯನ್ನು ಪತ್ತೆಹಚ್ಚಲಾಯಿತು. ಕಾಡಾನೆಯನ್ನು ಅನುಭವಿ ವೈದ್ಯರ ತಂಡ ಹಿಂಬಾಲಿಸಿತ್ತು. ಶಿರಗುರದಲ್ಲಿ ಬೆಳಗ್ಗೆ ಪತ್ತೆಯಾದ ಕಾಡಾನೆಯು ಒಂದೆಡೆ ನಿಲ್ಲದೇ ನೇರಲಕಟ್ಟೆ, ಕುಂಬಾರಹಳ್ಳಿ,ಶಿರಗುರ, ಸೂಳೇಗುಡ್ಡಕ್ಕೆ ತೆರಳಿತು. ಇದರಿಂದ ಸಿಬ್ಬಂದಿಯನ್ನು ಹೈರಾಣಾದರು. ಕೊನೆಗೆ ನೇರಲಮಕ್ಕಿಯ ಕಾನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗೆ ಚುಚ್ಚುಮದ್ದನ್ನು ನೀಡಿ ರೇಡಿಯೋ ಕಾಲರ್‌ ಅಳವಡಿಸಿದರು.ಸತತವಾಗಿ ನಾಲ್ಕು ದಿನಗಳಿಂದ ಕಾಡಾನೆಯನ್ನು ಹಿಡಿಯುವ ಹಾಗೂ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಾಕಾನೆಗಳಾದ ಭೀಮ, ಶ್ರೀಕಂಠ ಆನೆಗಳನ್ನು ಮತ್ತಿಗೋಡು ಶಿಬಿರಕ್ಕೆ ಹಾಗೂ ಹರ್ಷ, ಧನಂಜಯ, ಶ್ರೀರಾಮ, ಅಯ್ಯಪ್ಪ ಎಂಬ ಆನೆಗಳನ್ನು ದುಬಾರೆಯ ಶಿಬಿರಕ್ಕೆ ವಾಪಸ್ ಕಳುಹಿಸಲಾಯಿತು. ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯಲ್ಲಿ ಡಿಎಫ್‌ಒ ಸೌರಭ್ ಕುಮಾರ್‌, ಎಸಿಎಫ್ (ಇಟಿಎಫ್) ಉಮಾಪತಿ, ಆರ್‌ಎಫ್‌ಒ ಯತೀಶ್ ಹಾಗೂ ಸಿಬ್ಬಂದಿ ಇದ್ದರು.