ರಾಘವೇಂದ್ರ ಗೆಲುವು ಶತ ಸಿದ್ಧ: ಆರಗ ಜ್ಞಾನೇಂದ್ರ

| Published : Mar 26 2024, 01:00 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಯ ಆಧಾರದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಬಿ.ವೈ.ರಾಘವೇಂದ್ರ ಗೆಲುವು ಶತಸಿದ್ಧ.

ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಯ ಆಧಾರದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಬಿ.ವೈ.ರಾಘವೇಂದ್ರ ಗೆಲುವು ಶತಸಿದ್ಧವಾಗಿದ್ದು, ಇದನ್ನು ತಡೆಯಲು ಯಾರಿಂದಲೂ ಅಸಾಧ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಪಟ್ಟಣದ ಕುವೆಂಪು ಮಾರ್ಗದಲ್ಲಿರುವ ಬಂಟರ ಭವನದಲ್ಲಿ ಬಿಜೆಪಿ ಪಕ್ಷದ ಚುನಾವಣಾ ಕಚೇರಿ ಉಧ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಅಭಿವೃದ್ಧಿಯ ಮಹಾಪೂರವೇ ಹರಿದು ಬಂದಿದೆ. ವಿಶೇಷವಾಗಿ ತಾಲೂಕಿಗೆ ಸುಮಾರು 1500 ಕೋಟಿಯಷ್ಟು ಅನುದಾನ ಲಭಿಸಿದೆ ಎಂದು ಹೇಳಿದರು.

ಕಳೆದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಸೇತುವೆ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಸಮಾಜದ ಎಲ್ಲಾ ವರ್ಗಗಳ ಸಮುದಾಯ ಭವನಗಳ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಮಸ್ಯೆ ಪರಿಹರಿಸಲು ಅಸಡ್ಡೆ ತೋರದೇ ವಿಶೇಷ ಪ್ರಯತ್ನ ಮಾಡಲಾಗಿದೆ ಎಂದರು.

ಕೆ.ಎಸ್.ಈಶ್ವರಪ್ಪ ಅವರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ತಮ್ಮ ಮಗನಿಗೆ ಟಿಕೆಟ್ ಕೊಡಲಿಲ್ಲಾ ಎಂಬ ಒಂದೇ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಈಶ್ವರಪ್ಪನವರ ತೀರ್ಮಾನ ವಿಷಾದನೀಯ. ಈ ವಿಚಾರದಲ್ಲಿ ಈಶ್ವರಪ್ಪನವರು ಮರುಪರಿಶೀಲನೆ ಮಾಡುವರೆಂಬ ನಿರೀಕ್ಷೆ ಇದೆ. ಒಂದೊಮ್ಮೆ ಸ್ಪರ್ಧೆ ಮಾಡಿದಲ್ಲಿ ನಷ್ಟವಾಗುವುದು ಕಾಂಗ್ರೆಸ್‍ಗೆ ಹೊರತು ಬಿಜೆಪಿಗಿಲ್ಲಾ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿತ್ತು. ಬಿಜೆಪಿ ಪಕ್ಷಕ್ಕೆ ಯಡ್ಯೂರಪ್ಪನವರ ಯೋಗದಾನ ದೊಡ್ಡದಿದೆ ಎಂದು ಹೇಳಿದರು.

ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಮುಖಂಡರಾದ ಕೆ.ನಾಗರಾಜ ಶೆಟ್ಟಿ, ರಾಘವೇಂದ್ರ ನಾಯಕ್, ಕೆ.ಎಂ.ಮೋಹನ್, ಪ್ರಶಾಂತ್ ಕುಕ್ಕೆ, ಸೊಪ್ಪುಗುಡ್ಡೆ ರಾಘವೇಂದ್ರ, ಶಂಕರನಾರಾಯಣ ಐತಾಳ್,ರಕ್ಷಿತ್ ಮೇಗರವಳ್ಳಿ ಮೋಹನ ಭಟ್ ಇದ್ದರು.