ಸಾರಾಂಶ
ಜಿಂದಾಲ್ ಕಂಪನಿ ಬಳಿಕ ದೇವದಾರಿ ಅರಣ್ಯ ಪ್ರದೇಶವನ್ನು ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಗಣಿಗಾರಿಕೆ ಗುತ್ತಿಗೆ ನೀಡಿರುವುದನ್ನು ಖಂಡಿಸಿ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿಗೆ ರಕ್ತದಿಂದ ಪತ್ರ
ರಾಯಚೂರು : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ಕಂಪನಿ ಬಳಿಕ ದೇವದಾರಿ ಅರಣ್ಯ ಪ್ರದೇಶವನ್ನು ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಗಣಿಗಾರಿಕೆ ಗುತ್ತಿಗೆ ನೀಡಿರುವುದನ್ನು ಖಂಡಿಸಿ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿಗೆ ರಕ್ತದಿಂದ ಪತ್ರ ಬರೆದಿರುವುದಾಗಿ ಎಂದು ರಾಯಚೂರಿನ ಸಾಮಾಜಿಕ ಕಾರ್ಯಕರ್ತ ರವಿಗೌಡ ಮಲ್ಲದಗುಡ್ಡ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರಿನಿಂದ ಕೂಡಿದ 401 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡಿದ್ದು ಖಂಡನೀಯ. ಈ ಪ್ರದೇಶ ‘ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್’ ಎಂದು ಐತಿಹಾಸಿಕ ಖ್ಯಾತಿ ಪಡೆದಿದೆ. ಇಲ್ಲಿ ಗಣಿಗಾರಿಕೆ ಶುರು ಮಾಡಿದರೆ ಸುಮಾರು 99,330 ಮರಗಳು ನಾಶವಾಗಲಿದೆ. ಅಪರೂಪದ ವನ್ಯ ಜೀವಿಗಳು, ಸಸ್ಯ ಸಂಪತ್ತಿಗೆ ಹಾನಿಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡದೆ ಎಚ್.ಡಿ.ಕುಮಾರಸ್ವಾಮಿ ತಮ್ಮ ನಿಲುವು ಬದಲಿಸಬೇಕು. ಈಗಾಗಲೇ ಈ ಕುರಿತು ಸಮಾಜ ಪರಿವರ್ತನಾ ಸಮಿತಿಯ ಎಸ್.ಆರ್ ಹಿರೇಮಠ ಅವರು ರಾಜ್ಯ ಸಚಿವ ಈಶ್ವರ ಖಂಡ್ರೆಗೆ ಮನವಿ ಸಲ್ಲಿಸಿದ್ದು, ಪ್ರಗತಿಪರ ಚಿಂತಕರು, ಹೋರಾಟಗಾರರು ಇದರ ವಿರುದ್ಧ ಬೀದಿಗಿಳಿದು ಹೋರಾಡಬೇಕು ಎಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡ ವಿರೂಪಾಕ್ಷಿ ಇದ್ದರು.