ಸಾರಾಂಶ
Raid near city government bus stand: 3 kg ganja seized
-ಒಂದೂವರೆ ಲಕ್ಷ ಮೌಲ್ಯದ 3 ಕೆಜಿಗೂ ಹೆಚ್ಚು ಗಾಂಜಾ, ಮೊಬೈಲ್ ವಶಪಡಿಸಿಕೊಂಡ ಸಿಇಎನ್ ಪೊಲೀಸರು
-----ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಚಿತ್ರದುರ್ಗದ ಸಿಇಎನ್ ಠಾಣೆಯ ಪಿಐಎನ್ ವೆಂಕಟೇಶ್ ಅವರ ತಂಡ ಒಂದು ಲಕ್ಷದ 50 ಸಾವಿರದ ಐದುನೂರು ರು. ಬೆಲೆ ಬಾಳುವ 3 ಕೆಜಿ 110 ಗ್ರಾಂ ಗಾಂಜಾ ವಶಪಡಿಸಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ 4:10 ರ ಸಮಯದಲ್ಲಿ ನಡೆದಿದೆ.ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ತಂಡ ಬೆಂಗಳೂರಿನಿಂದ ದರ್ಶನ್ ರಾಜ್ ಎನ್ನುವವನು ಕೆಎ 17, ಎಫ್ 2079 ನೇ ಸಂಖ್ಯೆಯ ಸರ್ಕಾರಿ ಬಸ್ ನಲ್ಲಿ ಹಿರಿಯೂರು ನಗರಕ್ಕೆ ಮಾರಾಟ ಮಾಡಲು ತರುತ್ತಿದ್ದ ಎನ್ನಲಾದ ಒಂದೂವರೆ ಲಕ್ಷ ಮೌಲ್ಯದ 3 ಕೆಜಿಗೂ ಹೆಚ್ಚು ಗಾಂಜಾ ಮತ್ತು ಮೊಬೈಲ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಬೆಂಗಳೂರಿನ ಜಹೀರ್ ಎಂಬುವವನಿಂದ ಗಾಂಜಾ ತೆಗೆದುಕೊಂಡು ಬಂದಿದ್ದೇನೆ ಎಂದಿದ್ದಾನೆ.
ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಹೆಗ್ಗೆರೆ ಮಂಜುನಾಥ್ ಪ್ರತಿಕ್ರಿಯಿಸಿ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಿದ್ದು ಯುವಕರು, ವಿದ್ಯಾರ್ಥಿಗಳು ಸಹ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈಗಾಗಲೇ ಗಾಂಜಾ ಸೇವನೆ ಮಾಡುತ್ತಿದ್ದರು ಎಂದು ಹಲವು ಪ್ರಕರಣ ದಾಖಲಾಗಿವೆಯೇ ಹೊರತು ಅವರಿಗೆ ಆ ಗಾಂಜಾ ಎಲ್ಲಿಂದ ಬಂತು ಎಂದು ಪತ್ತೆಯಾಗಿಲ್ಲ. ನಗರದ ಗಾರೆ ದಿಂಡು, ಹರಿಶ್ಚಂದ್ರ ಘಾಟ್, ಲಕ್ಕವ್ವನಹಳ್ಳಿ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ, ಶಿವಮೂರ್ತಿ ಲೇಔಟ್ ಬಳಿ ಗಾಂಜಾ ಸೇವನೆಗೆಂದೇ ಹೋಗುವವರಿದ್ದಾರೆ. ನಗರದಲ್ಲಿ ಗಾಂಜಾ ವ್ಯಾಪಾರ ಮಾಡುವವರಾರು ಎಂಬುದನ್ನು ಪತ್ತೆ ಹಚ್ಚಿ ನೂರಾರು ಯುವಕರ ಭವಿಷ್ಯ ಉಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.--------ಫೋಟೊ: 1, 2
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಮಂಗಳವಾರ ಬೆಳಗಿನ ಜಾವ ದಾಳಿ ನಡೆಸಿ 3 ಕೆಜಿ ಗಾಂಜಾ ವಶಪಡಿಸಿಕೊಂಡ ಸಿಇಎನ್ ಪೊಲೀಸರು.