ಸಾರಾಂಶ
ನೀರು ಪೂರೈಸಲು ಪೈಪ್‌ಲೈನ್ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ. ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸುತ್ತಮುತ್ತಲಿನ ಏರಿಯಾಗಳಿಗೆ ಹೋಗಿ ನೀರು ತಂದು ಜೀವನ ನಡೆಸಬೇಕಾಗಿದೆ. ಬೇಸಿಗೆಯಲ್ಲಿಯೂ ನೀರು ಇಲ್ಲದೆ ಜೀವನ ನಡೆಸುವುದಾದರೂ ಹೇಗೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ:
ಇಲ್ಲಿನ ಕಾಳಿದಾಸ ನಗರಕ್ಕೆ ಕಳೆದ ಆರು ತಿಂಗಳಿಂದ ಕುಡಿಯುವ ನೀರು ಪೂರೈಸಿಲ್ಲ ಎಂದು ಆರೋಪಿಸಿರುವ ನಿವಾಸಿಗಳು ಗುರುವಾರ ಕುಷ್ಟಗಿ ರಸ್ತೆಯ ರೈಲ್ವೆ ಸೇತುವೆ ಬಂದ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೀರು ಪೂರೈಸಲು ಪೈಪ್‌ಲೈನ್ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ. ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸುತ್ತಮುತ್ತಲಿನ ಏರಿಯಾಗಳಿಗೆ ಹೋಗಿ ನೀರು ತಂದು ಜೀವನ ನಡೆಸಬೇಕಾಗಿದೆ. ಬೇಸಿಗೆಯಲ್ಲಿಯೂ ನೀರು ಇಲ್ಲದೆ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ನಿವಾಸಿಗಳು, ಇದೀಗ ರೈಲ್ವೆ ಸೇತುವೆ ಮಾರ್ಗವನ್ನೇ ಬಂದ್ ಮಾಡಿ ಪ್ರತಿಭಟಿಸುವಂತೆ ಆಗಿದೆ. ಯಾರು ಬಂದರೂ ಪ್ರತಿಭಟನೆಯಿಂದ ಹಿಂದೇ ಸರಿಯುವುದಿಲ್ಲ. ನಮಗೆ ನೀರು ಕೊಟ್ಟ ಮೇಲೆಯೇ ತೆರವು ಮಾಡುತ್ತೇವೆಂದು ಪಟ್ಟು ಹಿಡಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಬೇಸಿಗೆಯಲ್ಲಿ ನೀರಿಲ್ಲದೇ ಹೇಗೆ ಬದುಕಬೇಕು. 6 ತಿಂಗಳಿಂದ ನೀರು ಪೂರೈಸಲು ನಿಮ್ಮಿಂದ ಆಗಿಲ್ಲ ಎಂದರೆ ಹೇಗೆ. ನಗರಸಭೆಗೆ ಬಂದು ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು. ಆಗ ಅಧಿಕಾರಿಗಳು ಪೈಪ್‌ಲೈನ್ ದುರಸ್ತಿ ಆಗುವವರೆಗೂ ಟ್ಯಾಂಕರ್ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.