ರೈಲ್ವೆ ಇಲಾಖೆ ಮೇಲ್ಪಂಕ್ತಿ ಜೊತೆ ಅಭಿವೃದ್ಧಿಯತ್ತ ಸಾಗುತ್ತಿದೆ: ಸಚಿವ ವಿ.ಸೋಮಣ್ಣ

| Published : Sep 27 2024, 01:26 AM IST

ರೈಲ್ವೆ ಇಲಾಖೆ ಮೇಲ್ಪಂಕ್ತಿ ಜೊತೆ ಅಭಿವೃದ್ಧಿಯತ್ತ ಸಾಗುತ್ತಿದೆ: ಸಚಿವ ವಿ.ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ 75 ವರ್ಷಗಳಲ್ಲಿ ದೇಶದಲ್ಲಿ ಆಗದ ಕ್ರಾಂತಿಕಾರಿ ಬೆಳವಣಿಗೆ ಕೇವಲ10 ವರ್ಷಗಳಲ್ಲಿ ನಡೆದು ಅಭಿವೃದ್ಧಿ ಜೊತೆ ರೈಲ್ವೆ ಇಲಾಖೆ ಸಹ ಮೇಲ್ಪಂಕ್ತಿ ಸಾದಿಸಿದೆ ಎಂದು ರಾಜ್ಯ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ಬೀರೂರಿನ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ: ಕುಶಲೋಪರಿ ವಿಚಾರಿಸಿದ ಸಚಿವ

ಕನ್ನಡಪ್ರಭ ವಾರ್ತೆ, ಬೀರೂರುಪ್ರಧಾನಿ ಮೋದಿಯವರ ನೇತೃತ್ವದಲ್ಲಿ 75 ವರ್ಷಗಳಲ್ಲಿ ದೇಶದಲ್ಲಿ ಆಗದ ಕ್ರಾಂತಿಕಾರಿ ಬೆಳವಣಿಗೆ ಕೇವಲ10 ವರ್ಷಗಳಲ್ಲಿ ನಡೆದು ಅಭಿವೃದ್ಧಿ ಜೊತೆ ರೈಲ್ವೆ ಇಲಾಖೆ ಸಹ ಮೇಲ್ಪಂಕ್ತಿ ಸಾದಿಸಿದೆ ಎಂದು ರಾಜ್ಯ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಗುರುವಾರ ಸಂಜೆ ಪಟ್ಟಣದ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿ ಪತ್ರಕರ್ತರೊಂದಿಗೆ ಮಾತನಾಡಿದರು. ಕಡೂರು-ಬೀರೂರು ರೈಲ್ವೆ ನಿಲ್ದಾಣಗಳನ್ನು ಗತಿಶಕ್ತಿ ಯೋಜನೆಯಡಿ ಸೇರಿಸಿ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದೇನೆ. ತುಮಕೂರು-ದಾವಣಗೆರೆ-ಚಿತ್ರದುರ್ಗ ರೈಲ್ವೆ ನಿಲ್ದಾಣಗಳಿಗೆ ಡೈರೆಕ್ಟ್ ಲೈನ್ ಗೆ ₹4500 ಕೋಟಿಯಾಗಿದ್ದು, ನಾನು ಸದ್ಯ ₹1500ಕೋಟಿ ಈಗಾಗಲೇ ಬಿಡುಗಡೆ ಮಾಡಿಸಿದ್ದೇನೆ. ರಾಯದುರ್ಗ, ಬಡಗಸಿರ, ಪಾವಗಡ, ಮಧುಗಿರಿ, ಕೊರಟಗೆರೆ ಇದರ ಮೂಲಕ ಆಂದ್ರ ಪ್ರದೇಶಕ್ಕೆ ಹೋಗುವ ಮಾರ್ಗ ಸಿದ್ಧವಾಗುತ್ತಿದೆ. ದಡಕು ಮತ್ತು ವಾಡಿಲು ಸೇರಿ ₹45ಸಾವಿರ ಕೋಟಿ ಬಿಡುಗಡೆಯಾಗಿದೆ. ರಾಜ್ಯದಲ್ಲಿ ರೈಲ್ವೆ ಇಲಾಖೆ ಏನೇನು ಕೆಲಸ ನಿಂತಿತ್ತು ಅವುಗಳನ್ನೆಲ್ಲ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ರಾಜ್ಯ ಸಚಿವರು ಕಡೂರು ಕ್ಷೇತ್ರಕ್ಕೆ ಬಂದಿರುವುದು ಸಂತಸವಾಗಿದೆ. ಕಡೂರು ಅಭಿವೃದ್ಧಿಗೆ ನಿಮ್ಮ ಸಹಕಾರ ಹೆಚ್ಚಿನದ್ದಾಗಿರಲಿ, ಬೀರೂರು ಸಮೀಪದ ಬಿ.ಕೋಡಿಹಳ್ಳಿಗೆ ತೆರಳಲು ರೈಲ್ವೆ ಅಂಡರ್ ಪಾಸ್ ಚಿಕ್ಕದಾಗಿದ್ದು ಅದನ್ನು ಅಗಲೀಕರಣ ಮಾಡಬೇಕೆಂದು ಮನವಿ ಮಾಡಿದರು. ಚಿಕ್ಕಮಗಳೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ಅಸೋಸಿಯೇಶನ್ ಪರವಾಗಿ ಸಚಿವರಿಗೆ ಮನವಿ ಸಲ್ಲಿಸಿದ ವಿ.ಜಿ.ಒಡೆಯರ್ ಮಾತನಾಡಿ, ಬೀರೂರು ಜಂಕ್ಷನ್ ಗೆ 108 ವರ್ಷಗಳ ಇತಿಹಾಸವಿದ್ದು, ಹೆಚ್ಚು ಭೂಮಿ ರೈಲ್ವೆ ಇಲಾಖೆ ಹೊಂದಿದೆ. ಈ ನಿಲ್ದಾಣ ಹಲವು ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿದ್ದು, ಮೈಸೂರು ರೈಲ್ವೆ ವಿಭಾಗಕ್ಕೆ ಹೆಚ್ಚಿನ ಆದಾಯ ತಂದುಕೊಡುವ ನಿಲ್ದಾಣ. ಆದ್ದರಿಂದ ಇಲ್ಲಿ ಯಶವಂತಪುರ-ಹಜರತ್ ನಿಜಾಮುದ್ದಿನ್ ಕರ್ನಾಟಕ ಸಂಪರ್ಕ ಕ್ರಾಂತಿ ಏಕ್ಸ್ ಪ್ರೆಸ್, ಯಶವಂತಪುರ-ಚಂಡಿಘಡ ಏಕ್ಸ್ ಪ್ರೆಸ್, ಬೆಂಗಳೂರು-ಬೆಳಗಾವಿ ಸೂಪರ್ ಫಾಸ್ಟ್ ಏಕ್ಸ್ ಪ್ರೆಸ್ ಸೇರಿ ಮತ್ತಿತರ ರೈಲುಗಳನ್ನು ನಿಲುಗಡೆಗೊಳಿಸಬೇಕು. ಈ ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆ 2 ನೇ ಹಂತದಲ್ಲಿ ಸೇರ್ಪಡೆ ಗೊಳಿಸಿ ಅಭಿವೃದ್ಧಿ ಜೊತೆ ಪ್ಲಾಟ್ ಫಾರಂ 4 ಮತ್ತು 5ಕ್ಕೆ ಲಿಫ್ಟ್‌ ಅಳವಡಿಸಬೇಕು. ಆರ್.ಪಿ.ಎಫ್ ಮತ್ತು ಜಿ.ಆರ್.ಪಿ.ಎಫ್ ಆರಕ್ಷಕ ಠಾಣೆ ನಿಲ್ದಾಣದ ಮೇಲ್ಭಾಗದಲ್ಲಿದ್ದು ಇದರಿಂದ ಪ್ರಯಾಣಿಕರಿಗೆ ಅಪರಾಧಗಳು ನಡೆದಾಗ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ . ಕೂಡಲೆ ಈ ಠಾಣೆಯನ್ನು ಪ್ಲಾಟ್ ಫಾರಂಗೆ ವರ್ಗಾಹಿಸುವಂತೆ ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಸಚಿವರು ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ವನಿತಾ ಮಧು ಸಚಿವರಿಗೆ ಸಂತೆ ಮೈದಾನದಿಂದ ಮಾರ್ಗದ ಕ್ಯಾಂಪಿನ ಕಡೆ ತೆರಳಲು ರೈಲ್ವೆ ಮಾರ್ಗವಿದೆ. ಸಾವಿರಾರು ಜನ ಪಟ್ಟಣದ ಹೃದಯಭಾಗಕ್ಕೆ ತೆರಳಲು ಸುತ್ತು ಹಾಕಿಕೊಂಡು ಬರುವ ಪರಿಸ್ಥಿತಿ ಇದ್ದು ಇದಕ್ಕೆ ಶಾಶ್ವತ ಪರಿಹಾರವಾಗಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣಮಾಡುವಂತೆ ಮನವಿ ಮಾಡಿದರು.ಸಚಿವರ ನೋಡಲು ಮುಗಿ ಬಿದ್ದ ಜನ:ರಾಜ್ಯ ರೈಲ್ವೆ ಖಾತೆ ಸಚಿವರು 4ಗಂಟೆಗೆ ಬರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಅವರನ್ನು ನೋಡಲು ಮಾಜಿ ಶಾಸಕರ ಮನೆಗೆ ಹೆಚ್ಚಿನ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಸಚಿವರು ಸಂಜೆ 6ಕ್ಕೆ ಆಗಮಿಸಿದಾಗ ಜೈಕಾರ ಹಾಕಿ ಸೆಲ್ಫಿಗೆ ಮುಗಿಬಿದ್ದರು. ಅದಕ್ಕೆ ಸಚಿವರು ನಿಮ್ಮ ಮತ್ತು ಕೆಬಿಎಂ ಅಭಿಮಾನಿಗಳಿಗೆ ನಾನು ಚಿರಋಣಿ. ಉತ್ತಮ ಆಡಳಿತ ನೀಡುವ ಮೂಲಕ ದೇಶ ದೇವೆ ಮಾಡಿ ನಿಮ್ಮ ಋಣ ತೀರಿಸುತ್ತೇನೆ ಎಂದರು.ಕೆ.ಬಿ.ಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸಚಿವ:ಕೆ.ಬಿ.ಮಲ್ಲಿಕಾರ್ಜುನ್ ಮನೆಗೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ, ಅಂದಿನ ಕಾಲಘಟ್ಟದಲ್ಲಿ ನನಗೆ ರಾಜಕೀಯದಲ್ಲಿ ಬಹಳಷ್ಟು ನೆರವು ನೀಡಿದ್ದೀರಿ, ಅದನ್ನು ನಾನೆಂದು ಮರೆಯಲ್ಲ. ಹಾಗಾಗಿ ನಿಮ್ಮ ನೋಡಲು ಬಂದೆ ಎಂದರು. ನಿಮ್ಮ ಹುಟ್ಟು ಹಬ್ಬ ನಾಳೆ ಇದೆ. ದೇವರು ನಿಮ್ಮನ್ನು ಸುಖವಾಗಿ ಟ್ಟರಲಿ. ನನಗೆ ಯಾಕೋ ನಿಮ್ಮನ್ನು ಬಿಟ್ಟು ಹೋಗಲು ಮನಸ್ಸು ಕಷ್ಟವಾಗುತ್ತಿದೆ. ನಿಮ್ಮ ಎಲ್ಲಾ ಕುಟುಂಬದವರ ಜೊತೆ ನನಗೆ ಒಂದು ಪೋಟೋ ಬೇಕು ಎಂದು ಕೆ.ಬಿ.ಎಂ ಕಾಲಿಗೆ ನಮಸ್ಕರಿಸಿ ಪೋಟೋ ತೆಗೆಸಿಕೊಂಡು ನನಗೆ ಈಗ ಸಮಧಾನವಾಯಿತು ಎಂದು ಹೊರಟರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬೆಳ್ಳಿಪ್ರಕಾಶ್ , ಬೀರೂರು ದೇವರಾಜ್, ತಹಸೀಲ್ದಾರ್ ಪೂರ್ಣಿಮ ಪುರಸಭೆ ಸದಸ್ಯರು ಅಭಿಮಾನಿಗಳು ಇದ್ದರು.26 ಬೀರೂರು 1ಬೀರೂರು ಪಟ್ಟಣದ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮನೆಗೆ ರಾಜ್ಯ ಜಲಶಕ್ತಿ ಮತ್ತು ರೈಲ್ವೆ ಸಚಿವ ವಿ.ಸೋಮಣ್ಣ ಭೇಟಿ ನೀಡಿದರು. ಶಾಸಕ ಆನಂದ್, ಮಾಜಿ ಶಾಸಕ ಬೆಳ್ಳಿಪ್ರಕಾಶ್ ಸೇರಿದಂತೆ ಮತ್ತಿತರರು ಇದ್ದರು.