ರೈಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲೇ ಆರಂಭ

| Published : Jun 30 2024, 12:53 AM IST

ಸಾರಾಂಶ

ಬಂಗಾರಪೇಟೆ ಪಟ್ಟಣದ ರೈಲ್ವೆ ನಿಲ್ದಾಣವನ್ನು ಮೇಲ್ದೆರ್ಜೆಗೆ ಏರಿಸಲು ಈಗಾಗಲೇ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಒಂದು ಸುಂದರ ರೈಲ್ವೆ ನಿಲ್ದಾಣವನ್ನು ನೋಡಬಹುದಾಗಿದೆ. ಮೇಲ್ಸೇತುವೆ ಕಾಮಗಾರಿಗೆ ಕ್ರಮ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬಹುವರ್ಷಗಳಿಂದ ಬೇಡಿಕೆಯಿರುವ ಕಾಮಸಮುದ್ರ ರೈಲ್ವೆ ಹಳಿ ಬಳಿಯ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲಾಗುತ್ತದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು. ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಗಂಗಮ್ಮದೇವಿಯ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜನರ ಆಶೀರ್ವಾದಿಂದ ಸಂಸದನಾಗಿ ಆಯ್ಕೆಯಾಗಿ, ೫ ವರ್ಷಗಳ ಕಾಲ ಎಲ್ಲಿಯೂ ಭ್ರಷ್ಟಾಚರವನ್ನು ಎಸಗದೆ ಉತ್ತಮ ಕೆಲಸಗಳನ್ನು ಮಾಡಿದ್ದೇನೆ ಎಂದರು.

ರೈಲು ನಿಲ್ದಾಣ ಮೇಲ್ದರ್ಜೆಗೆ

ಬಂಗಾರಪೇಟೆ ಪಟ್ಟಣದ ರೈಲ್ವೆ ನಿಲ್ದಾಣವನ್ನು ಮೇಲ್ದೆರ್ಜೆಗೆ ಏರಿಸಲು ಈಗಾಗಲೇ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಒಂದು ಸುಂದರ ರೈಲ್ವೆ ನಿಲ್ದಾಣವನ್ನು ನೋಡಬಹುದಾಗಿದೆ. ಬೂದಿಕೋಟೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಹಲವು ವರ್ಷಗಳಿಂದ ಸಮಸ್ಯೆ ಇತ್ತು ಅದನ್ನು ಬಗೆಹರಿಸಲು ಯಾರೂ ಸಹ ಮುಂದಾಗಲಿಲ್ಲ. ಸಂಸದನಾಗಿ ಆಯ್ಕೆಯಾದ ನಂತರ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಸಹ ಆರಂಭಿಸಲಾಗಿದೆ ಎಂದರು.

ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸವಾರರ ಸಮಸ್ಯೆಯನ್ನು ನಿವಾರಿಸಲಾಗುತ್ತದೆ. ಕಾಮಸಮುದ್ರ ಮೂಲಕ ಚೆನ್ನೈ ಸೇರಿದಂತೆ ಇತರೆ ಮಾರ್ಗಗಳಿಗೆ ನಿತ್ಯ ನೂರಾರು ರೈಲುಗಳು ಸಂಚರಿಸುತ್ತವೆ. ಇಲ್ಲಿ ಒಮ್ಮೆ ಗೇಟ್ ಹಾಕಿದರೆ ಒಮ್ಮೊಮ್ಮೆ ಎರಡು ಮೂರು ರೈಲುಗಳು ಸಂಚರಿಸುವುದರಿಂದ ಸುಮಾರು ೧೦ ರಿಂದ ೧೫ ನಿಮಿಷ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದರು.

ಮೇಲ್ಸೇತುವೆ ನಿರ್ಮಾಣ

ಈ ಸಮಸ್ಯೆಯನ್ನು ಬಗೆ ಹರಿಸಲು ಮೇಲ್ಸೇತುವೆ ಬೇಕೆಂದು ಜನರು ಬೇಡಿಕೆ ಇಟ್ಟಿದ್ದರು. ಅದರಂತೆ ರೈಲ್ವೆ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಚರ್ಚಿಸಿ ಮೇಲ್ಸೇತುವೆ ನಿರ್ಮಿಸಲು ಮಣ್ಣಿನ ಪರೀಕ್ಷೆಯನ್ನು ಮಾಡಿಸಲಾಗಿದೆ. ನೂತನ ಸಂಸದ ಮಲ್ಲೇಶ್ ಬಾಬು ಜೊತೆ ಗೂಡಿ ಶೀಘ್ರವಾಗಿ ಮೇಲ್ಸೇತುವೆ ಕಾಮಗಾರಿಯನ್ನು ಸಹ ಆರಂಭಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೆ.ಚಂದ್ರಾರೆಡ್ಡಿ, ಗ್ರಾಪಂ ಅಧ್ಯಕ್ಷ ಆದಿನಾರಾಯಣ (ಕುಟ್ಟಿ), ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಮುಖಂಡರಾದ ಜೆಸಿಬಿ ನಾರಾಯಣಪ್ಪ, ವಿ.ಮಾರ್ಕಂಡೇಗೌಡ, ಕಪಾಲಿ ಶಂಕರ್, ಅಮರೇಶ್, ಕೃಷ್ಣಮೂರ್ತಿ, ಹೊಸರಾಯಪ್ಪ ಮುಂತಾದವರು ಹಾಜರಿದ್ದರು.