ನೇಮಕಾತಿ ಪರೀಕ್ಷೆಯಲ್ಲಿ ಮಂಗಳಸೂತ್ರ ನಿಷೇಧ ಕೈಬಿಟ್ಟ ರೈಲ್ವೆ ಸಚಿವಾಲಯ

| Published : Apr 28 2025, 11:52 PM IST

ನೇಮಕಾತಿ ಪರೀಕ್ಷೆಯಲ್ಲಿ ಮಂಗಳಸೂತ್ರ ನಿಷೇಧ ಕೈಬಿಟ್ಟ ರೈಲ್ವೆ ಸಚಿವಾಲಯ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆಗೆ ಧಾರ್ಮಿಕ ಚಿಹ್ನೆಗಳು ಧರಿಸದಂತೆ ಸೂಚನೆಯ ವಿವಾದವನ್ನು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ವಿ. ಸೋಮಣ್ಣ, ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಮಂಗಳಸೂತ್ರ, ಜನಿವಾರ ತೆಗೆಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಮಂಗಳಸೂತ್ರ, ಜನಿವಾರಕ್ಕೆ ನಿಷೇಧ ಹೇರಿದ ವಿಚಾರ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಈ ನಿಷೇಧವನ್ನು ರೈಲ್ವೆ ಸಚಿವಾಲಯ ವಾಪಸ್ ತೆಗೆದುಕೊಂಡಿದೆ.

ರೈಲ್ವೆ ಇಲಾಖೆಯ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಹುದ್ದೆಗೆ ಏ.29ರಂದು ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದ್ದು, ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳು ಸೇರಿದಂತೆ ದೇಶಾದ್ಯಂತ ಪರೀಕ್ಷೆಗೆ ಸಿದ್ಧತೆ ನಡೆದಿದೆ. ಈ ನಡುವೆ ಅಭ್ಯರ್ಥಿಗಳಿಗೆ ನೀಡಲಾದ ಪ್ರವೇಶ ಪತ್ರದಲ್ಲಿ ಮಂಗಳಸೂತ್ರ ಹಾಗೂ ಧಾರ್ಮಿಕ ಚಿಹ್ನೆಗಳನ್ನು ಪರೀಕ್ಷಾ ಕೇಂದ್ರದೊಳಗೆ ಧರಿಸುವಂತಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಲಾಗಿದ್ದು, ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

ಈ ವಿಚಾರವನ್ನು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ವಿ. ಸೋಮಣ್ಣ, ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಮಂಗಳಸೂತ್ರ, ಜನಿವಾರ ತೆಗೆಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಾದ ಬಳಿಕ ಸೋಮಣ್ಣ ರೈಲ್ವೆ ಅಧಿಕಾರಿಗಳ ಸಭೆ ನಡೆಸಿದ್ದು, ರೈಲ್ವೆ ಸಚಿವಾಲಯವು ಈ ನಿಷೇಧವನ್ನು ಹಿಂಪಡೆಯುವ ಪರಿಷ್ಕೃತ ಆದೇಶ ಹೊರಡಿಸಿದೆ.

ರೈಲ್ವೆ ಸಚಿವಾಲಯದ ಪತಿಷ್ಕೃತ ಆದೇಶ ಪತ್ರವನ್ನು ಕ್ಯಾ.ಚೌಟ ಅವರು ತಮ್ಮ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರದೊಳಗೆ ಧಾರ್ಮಿಕ ಚಿಹ್ನೆಗಳು, ಬಳೆ, ಮಂಗಳಸೂತ್ರ, ಬ್ರೇಸ್ ಲೆಟ್ ಇತ್ಯಾದಿಗಳನ್ನು ಧರಿಸಬಹುದು ಎಂದು ಪರಿಷ್ಕೃತ ಆದೇಶದಲ್ಲಿ ಉಲ್ಲೇಖಿಸಲಾಗಿದೆ.