ಸಾರಾಂಶ
ಮಂಗಳೂರು ಮಹಾನಗರ ಪಾಲಿಕೆಯ ವಾರ್ಡಿನ ಕೆಲವು ಭಾಗಗಳಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪಾಲಿಕೆ ಅಧಿಕಾರಿಗಳು ರೈಲ್ವೆ ಇಲಾಖೆಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸುವುದು, ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುವುದು, ಹಾಗೂ ರಸ್ತೆಗಳನ್ನು ನಿರ್ಮಿಸುವುದು ಇತ್ಯಾದಿ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಇರುವ ವಿವಿಧ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರದ ನಿಟ್ಟಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸೌಪರ್ಣಿಕ ಸಭಾಂಗಣದಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಯಿತು.ರೈಲ್ವೆ ಲೇನ್ ಹಾದು ಹೋಗುವ ಕೊಂಗೂರು ಮಠದ ರಸ್ತೆ, ಅತ್ತಾವರದ ಸೈಕಲ್ ಟ್ರ್ಯಾಕ್ ರಸ್ತೆ, ಸಿಲ್ವರ್ ಗೇಟ್ ರಸ್ತೆ, ಅಳಪೆ ಮಠ, ಸೂರ್ಯ ನಗರ, ನೂಜಿ, ಹೊಯ್ಗೆ ಬಜಾರ್, ಮಹಾಕಾಳಿ ಪಡ್ಪು, ಆದರ್ಶ ನಗರ, ಬೋಳಾರ ಹಾಗೂ ಜೆಪ್ಪು ವಾರ್ಡಿನ ಕೆಲವು ಭಾಗಗಳಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪಾಲಿಕೆ ಅಧಿಕಾರಿಗಳು ರೈಲ್ವೆ ಇಲಾಖೆಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸುವುದು, ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುವುದು, ಹಾಗೂ ರಸ್ತೆಗಳನ್ನು ನಿರ್ಮಿಸುವುದು ಇತ್ಯಾದಿ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಇತ್ತೀಚೆಗೆ ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ರೈಲ್ವೆ ಸಮಸ್ಯೆಗಳ ನಿವಾರಣಾ ಸಭೆಯಲ್ಲಿ ಪ್ರಸ್ತಾಪಿಸಿದಂತೆ ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳ ಇತ್ಯರ್ಥಕ್ಕೆ ಈ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಪಾಲಕ್ಕಾಡ್ ರೈಲ್ವೆ ವಿಭಾಗದ ಅಸಿಸ್ಟೆಂಟ್ ಡಿವಿಜಿನಲ್ ಎಂಜಿನಿಯರ್ ವಿಜಯ್ ಸುಂದರ್, ರೈಲ್ವೆ ಅಧಿಕಾರಿಗಳಾದ ರಂಜಿತ್, ಸುದೀಪ್, ವೀಣಾ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸದಸ್ಯರಾದ ಶೋಭಾ ಪೂಜಾರಿ, ಭಾನುಮತಿ, ಕಿಶೋರ್ ಕೊಟ್ಟಾರಿ, ರೂಪಶ್ರೀ ಪೂಜಾರಿ, ಶೈಲೇಶ್ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂದೀಪ್ ಗರೋಡಿ, ಅಜಯ್ ಕುಲಶೇಖರ, ತೇಜಸ್ ಕುಲಶೇಖರ ಇದ್ದರು.