ಸಾರಾಂಶ
ಹುಬ್ಬಳ್ಳಿ:
ರಾಜ್ಯ ಸರ್ಕಾರ ಭೂಮಿಯನ್ನು ಸಕಾಲಕ್ಕೆ ನೀಡದೇ ಇರುವುದರಿಂದ ರೈಲ್ವೆ ಯೋಜನೆಗಳು ವಿಳಂಬವಾಗಿವೆ. ಇನ್ನಾದರೂ ಸರ್ಕಾರ ನಮಗೆ ಸಕಾಲಕ್ಕೆ ಭೂಮಿ ನೀಡಲಿ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಇಲ್ಲಿನ ರೈಲು ಸೌಧದಲ್ಲಿ ಗುರುವಾರ ನೈಋತ್ಯ ರೈಲ್ವೆ ವಲಯದ ಹಿಂದಿನ, ಹೊಸ ಯೋಜನೆಗಳು ಹಾಗೂ ಈ ಭಾಗದ ಪ್ರಮುಖ ಬೇಡಿಕೆಗಳ ಕುರಿತು ಅಧಿಕಾರಿಗಳು, ವಿವಿಧ ಸಂಘ- ಸಂಸ್ಥೆಗಳ ಪ್ರಮುಖರ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಹೊಸ ರೈಲ್ವೆ ಯೋಜನೆಗೆ ಬೇಕಾದ ಭೂಮಿಯನ್ನು ಸಕಾಲಕ್ಕೆ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಹಿಂದೆ ಭೂಮಿ ನೀಡುವಲ್ಲಿ ಸಾಕಷ್ಟು ವಿಳಂಬವಾಗಿದ್ದರಿಂದ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಇನ್ನಾದರೂ ರಾಜ್ಯ ಸರ್ಕಾರ ನಮಗೆ ಬೇಕಾದ ಭೂಮಿ ನೀಡಿದರೆ ಇಲಾಖೆಯೇ ಯೋಜನೆಯ ವೆಚ್ಚ ಭರಿಸಲಿದೆ ಎಂದ ಸೋಮಣ್ಣ, ಹಿಂದಿನ ಕಾರ್ಯವೈಖರಿ ಹೇಗಿತ್ತೋ ಗೊತ್ತಿಲ್ಲ. ನಾನು ಬಂದ ಮೇಲೆ ರಾಜ್ಯದ ಯೋಜನೆಗಳಿಗೆ ವೇಗ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ನಾಲ್ಕು ತಿಂಗಳಿಗೊಮ್ಮೆ ನೈಋತ್ಯ ರೈಲ್ವೆ ವಲಯದ ಸಭೆ ಮಾಡಲಾಗುವುದು ಎಂದರು.ಸಹಕಾರ ದೊರೆಯುತ್ತಿದೆ:
ರಾಜ್ಯದ ಯೋಜನೆಗಳ ಕುರಿತಾಗಿ 4 ಬಾರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ತಕ್ಷಣ ರೈಲ್ವೆ ಇಲಾಖೆಗೆ ಅಗತ್ಯವಿರುವ ಭೂಮಿ ನೀಡುವಂತೆ ಮುಖ್ಯಮಂತ್ರಿ ಗಳು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸಕರಾತ್ಮಕ ಸಹಕಾರ ದೊರೆತಿದೆ. ವಿನಾಕಾರಣ ಇನ್ನೊಂದು ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸೋಮಣ್ಣ ಹೇಳಿದರು.ಹುಬ್ಬಳ್ಳಿ-ಅಂಕೋಲಾ ಯೋಜನೆ ದಶಕದ ಬೇಡಿಕೆಯಾಗಿದ್ದು, ಇದಕ್ಕೆ ಹೊಸ ರೂಪ ನೀಡುವುದು ನನ್ನ ಗುರಿಯಾಗಿದೆ. ಆದಷ್ಟು ಬೇಗ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪರವಾನಗಿ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ನಾನೇ ಮುಂದೆ ನಿಂತು ಪೂರ್ಣಗೊಳಿಸುವ ಕೆಲಸ ಮಾಡಲಾಗುವುದು ಎಂದರು.
3 ಗಂಟೆ ಚರ್ಚೆ:ಸುಮಾರು 3 ಗಂಟೆ ನಡೆದ ಸಭೆಯಲ್ಲಿ ಈ ಭಾಗದ ಹಳೆಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಪ್ರತಿಯೊಂದು ಯೋಜನೆಗಳ ವಿವರಗಳನ್ನು ಪಡೆದುಕೊಂಡಿದ್ದೇನೆ. ಯಾವ ಕಾರಣಕ್ಕೆ ವಿಳಂಬವಾಗಿದೆ, ಮುಂದೇನು ಮಾಡಬೇಕು? ಎಂಬುವುದರ ಬಗ್ಗೆ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದ್ದೇನೆ. ಮುಂದಿನ ಸಭೆಯಲ್ಲಿ ಇವುಗಳ ಪ್ರಗತಿಯ ಬಗ್ಗೆ ಪರಿಶೀಲಿಸಲಾಗುವುದು. ದೊರಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಈ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾತ್ಸವ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳಿದ್ದರು.ಸಾಕಷ್ಟು ಯೋಜನೆ ಕೈಗೊಂಡಿದೆ:
ರೈಲ್ವೆ ಮೂಲ ಸೌಕರ್ಯ ಮತ್ತು ಸುರಕ್ಷತಾ ಯೋಜನೆಗಳಿಗೆ 2009-14ರ ವರೆಗೆ ₹ 835 ಕೋಟಿ ನೀಡಿದ್ದರು. 2014-24ರಲ್ಲಿ ₹ 3926 ಕೋಟಿ ತಲುಪಿದೆ. ಈ ವರ್ಷದ ಬಜೆಟ್‌ನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ ₹ 6493.87 ಕೋಟಿ ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 831 ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಿಸಲಾಗಿದೆ. 48 ಜೋಡಿ ಹೊಸ ರೈಲು, 44 ರೈಲುಗಳ ಸೇವೆ ವಿಸ್ತರಣೆ, 10 ಜೋಡಿ ವಂದೇ ಭಾರತ ರೈಲು, 1 ಜೋಡಿ ಅಮೃತ ಭಾರತ ರೈಲು ಬಂದಿವೆ. ಬೈಯಪ್ಪನಹಳ್ಳಿ-ಹೊಸೂರು (48.5 ಕಿಮೀ) ಚತುಷ್ಪಥ ಮಾರ್ಗದ ಅಂದಾಜು ₹19,400 ಕೋಟಿ ವೆಚ್ಚದ ಅಂತಿಮ ಸ್ಥಳ ಸಮೀಕ್ಷೆ, ರೈಲ್ವೆ ಮಂಡಳಿಗೆ ಅಂತಿಮ ವರದಿ ಸಲ್ಲಿಸಲಾಗಿದೆ. ರೈಲ್ವೆ ನಿಲ್ದಾಣಗಳ ಬದಲಾವಣೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.2027ರ ಜೂನ್ ಒಳಗೆ ಯೋಜನೆ ಪೂರ್ಣ:
ಹೊಸ ಮಾರ್ಗಗಳಾದ ಗಿಣಿಗೇರಾ-ರಾಯಚೂರು, ಕಡೂರು-ಚಿಕ್ಕಮಗಳೂರು, ಬಾಗಲಕೋಟೆ-ಕುಡಚಿ, ಧಾರವಾಡ-ಬೆಳಗಾವಿ, ಹುಬ್ಬಳ್ಳಿ-ಅಂಕೋಲಾ, ರಾಯದುರ್ಗ-ತುಮಕೂರು, ಗದಗ-ವಾಡಿ, ತುಮಕೂರು- ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ-ಕುಡಚಿ, ಹಾಸನ-ಬೇಲೂರು, ಶಿವಮೊಗ್ಗ-ಶಿಕಾರಿಪುರ- ರಾಣಿಬೆನ್ನೂರ ಹಾಗೂ ಹೊಟಗಿ-ಕುಡ್ಗಿ-ಗದಗ ದ್ವಿಪಥ, ಭೂಸ್ವಾಧೀನ, ಡಿಪಿಆರ್, ಟೆಂಡರ್ ಪ್ರಗತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮತ್ತು ಆದ್ಯತೆಯ ಆಧಾರದ ಮೇಲೆ 2027ರ ಜೂನ್ ಒಳಗೆ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು.