ಚಿಕ್ಕಮಗಳೂರುರಾಜ್ಯದಲ್ಲಿ ಮುಂದಿನ ಎರಡು ವರ್ಷದಲ್ಲಿ ರೈಲ್ವೆ ಕ್ರಾಂತಿ ಯೊಂದಿಗೆ ರೈಲ್ವೆ ಗೇಟ್ ಗಳು ಮುಕ್ತವಾಗಿ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣವಾಗಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಅಜ್ಜಂಪುರದಲ್ಲಿ ₹58.48 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ (ಆರ್ ಒಬಿ) ನಿರ್ಮಾಣ‌ಕ್ಕೆ ಶಂಕು‌ಸ್ಥಾಪನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯದಲ್ಲಿ ಮುಂದಿನ ಎರಡು ವರ್ಷದಲ್ಲಿ ರೈಲ್ವೆ ಕ್ರಾಂತಿ ಯೊಂದಿಗೆ ರೈಲ್ವೆ ಗೇಟ್ ಗಳು ಮುಕ್ತವಾಗಿ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣವಾಗಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 138ರಲ್ಲಿ ₹58.48 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ (ಆರ್ ಒಬಿ) ನಿರ್ಮಾಣ‌ ಕಾಮಗಾರಿಗೆ ಭಾನುವಾರ ಶಂಕು‌ಸ್ಥಾಪನೆ ನೆರವೇರಿಸಿ ಮಾತನಾಡಿ ಇದೇ ವರ್ಷ ಡಿಸೆಂಬರ್‌ 27ಕ್ಕೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.

ಯಾವ ಸರ್ಕಾರ, ಯಾವ ಪಕ್ಷ ಎಂಬುದನ್ನು ಹೊರತು ಪಡಿಸಿ ಪಕ್ಷಾತೀತವಾಗಿ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ. ರೈಲ್ವೆ ಅಭಿವೃದ್ಧಿ ರಾಷ್ಟ್ರದ ಅಭಿವೃದ್ಧಿ ಎಂಬುದು ಪ್ರಧಾನಿ ನರೇಂದ್ರ ಮೋದಿ ಸಂದೇಶ ಎಂದರು.

ಅಜ್ಜಂಪುರದ ಮೇಲ್ಸೇತುವೆ ನಿರ್ಮಾಣಕ್ಕೆ ಸೀಮಿತವಾಗಿಲ್ಲ.‌ ಇನ್ನೂ 2-3 ಯೋಜ‌ನೆ ಅನುಷ್ಠಾನ ಮಾಡುತ್ತೇವೆ. ಸ್ಥಳೀಯರ ಬೇಡಿಕೆಯನ್ನು ಹಂತ ಹಂತವಾಗಿ ಪರಿಹರಿಸುವ ಕೆಲಸ ಮಾಡಲಾಗುವುದು. ಚಿಕ್ಕಮಗಳೂರು-ಬೀರೂರು ಮಾರ್ಗದ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ₹70 ಕೋಟಿ ವೆಚ್ಚದ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ಹಾಗೆಯೇ ₹22 ಕೋಟಿ ವೆಚ್ಚದಲ್ಲಿ ಚಿಕ್ಕಮಗಳೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.ಅಜ್ಜಂಪುರ ರೈಲ್ವೆ ನಿಲ್ದಾಣಗಳಲ್ಲಿ ಅಂಗವಿಕಲರಿಗೆ ಸುಲಭ ಓಡಾಟಕ್ಕೆ ಪ್ಲಾಟ್‌ಫಾರಂ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ₹1.25 ಕೋಟಿ ಅನುದಾನ ನೀಡಲಾಗಿದೆ. ಈ ಎಲ್ಲ ಕಾಮಗಾರಿಯನ್ನು 2026ರ ಸೆಪ್ಟೆಂಬರ್ ಒಳಗೆ ಮುಗಿಸಲು ಗಡುವು ನೀಡಲಾಗಿದೆ ಎಂದರು.2 ಭಾಗವಾದ ಪಟ್ಟಣ ಸೇತುವೆ ಮೂಲಕ ಒಂದು:ರೈಲ್ವೆ ಹಳಿಯಿಂದ ಎರಡು ಭಾಗವಾಗಿದ್ದ ಬೀರೂರು ಪಟ್ಟಣದ ಜನರ ಬಹುಕಾಲದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಬೀರೂರಿನ ಪಾದಚಾರಿ ಮೇಲ್ಸೇತುವೆ ಕಾಮಗಾರಿಗೆ ₹5.50 ಕೋಟಿ ಮಂಜೂರು ಮಾಡಿದ್ದು ಶೀಘ್ರ ಚಾಲನೆ ನೀಡಲಾ ಗುವುದು. ಈ ಮೂಲಕ ಎರಡೂ ಊರುಗಳನ್ನು ಜೋಡಿಸುವ ಕೆಲಸವಾಗಲಿದೆ. ಬೀರೂರು ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಅಭಿವೃದ್ಧಿ ಮತ್ತು ಲೈಟಿಂಗ್ ವ್ಯವಸ್ಥೆಗೆ ₹8 -10 ಕೋಟಿ ಅನುದಾನದಡಿ ಕಾಮಗಾರಿ ಪ್ರಗತಿಯಲ್ಲಿದೆ. ಕಡೂರು-ಬೀರೂರು ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ದೇವನೂರು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ₹3.20 ಕೋಟಿ ಹಾಗೂ ಚಿಕ್ಕಮಗಳೂರು ನಿಲ್ದಾಣದಲ್ಲಿ ಇನ್ನೂ ಎರಡು ಪ್ಲಾಟ್‌ಫಾರ್ಮ್‌ಗಳನ್ನು ವಿಸ್ತರಿಸಲು ₹1.85 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ ಕೇವಲ ಒಂದೂವರೆ ವರ್ಷದಲ್ಲಿ ಅಜ್ಜಂಪುರದ ಮೇಲ್ಸೇತುವೆ ನಿರ್ಮಾಣದ ಟೆಂಡರ್ ಆಗಿ ಕಾಮಗಾರಿ ಆರಂಭಗೊಂಡಿರುವುದು. ಸೋಮಣ್ಣ ಅವರ ಕಾರ್ಯವೈಖರಿಗೆ ಸಾಕ್ಷಿ ಎಂದರು.ಅಜ್ಜಂಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ, ವಾಹನ ಪಾರ್ಕಿಂಗ್ ಗೆ ಅವಕಾಶ ಇಲ್ಲ. ಅಜ್ಜಂಪುರದಲ್ಲಿ ವಾಸ್ಕೋ, ಗೋಲ್ ಗುಂಬಜ್ ಸೇರಿ ನಾಲ್ಕೈದು ರೈಲು ನಿಲುಗಡೆಗೆ ಅವಕಾಶ ನೀಡಬೇಕೆಂದು ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ಮಂಜೂರಾತಿ ನೀಡಬೇಕೆಂದು ಒತ್ತಾಯಿಸಿದ ಅವರು, ಜಲಶಕ್ತಿ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಅನುದಾನ ನೀಡಬೇಕೆಂದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ತರೀಕೆರೆ ಮಾಜಿ ಶಾಸಕ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ, ಅಜ್ಜಂಪುರ ಪಪಂ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಕವಿತಾ ಕೇಶವಮೂರ್ತಿ ಹಾಗೂ ರೈಲ್ವೆ ಇಲಾಖೆ ಡಿಆರ್‌ಎಂ ಮುದ್ರಾ ಮಿತ್ತಲ್ ಉಪಸ್ಥಿತರಿದ್ದರು.-- ಬಾಕ್ಸ್...ಹಲವು ಬೇಡಿಕೆ ಸಲ್ಲಿಸಿದ ತರೀಕೆರೆ ಶ್ರೀನಿವಾಸ್:ಅಭಿವೃದ್ಧಿ ವಿಚಾರದಲ್ಲಿ ವಿ.ಸೋಮಣ್ಣ ರಾಜಕೀಯ ಮಾಡುವುದಿಲ್ಲ. ಸೋಮಣ್ಣ ರೈಲ್ವೆ ಸಚಿವರಾದ ಬಳಿಕ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಯಾಗಿವೆ ಎಂದು ತರೀಕೆರೆ ಶಾಸಕ ಜಿ.ಎಚ್.ಶ್ರೀ‌ನಿವಾಸ್ ಹೇಳಿದರು.ಶಿವನಿ‌ ನಿಲ್ದಾಣದಲ್ಲಿ ಹೊಸಪೇಟೆ ಎಕ್ಸ್‌ಪ್ರೆಸ್ ರೈಲು‌ ನಿಲುಗಡೆಗೆ ಸೋಮಣ್ಣ ಕ್ರಮ ಕೈಗೊಳ್ಳಬೇಕಿದೆ. ತರೀಕೆರೆ ರೈಲ್ವೆ‌ ನಿಲ್ದಾಣದ ಆಧುನೀಕರಣಕ್ಕೆ ಕೇವಲ ₹20 ಕೋಟಿಮಾತ್ರ ಬೇಕಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದರು.ಅಜ್ಜಂಪುರ ರೈಲ್ವೆ ನಿಲ್ದಾಣ ಅಭಿವೃದ್ಧಿ, ತರೀಕೆರೆಯಿಂದ ಅಳಿಲು ಮಾರ್ಗದಲ್ಲಿ ಮೇಲ್ಸೇತುವೆ, ಅಜ್ಜಂಪುರ‌ದ ಮಾಳೇನಹಳ್ಳಿಗೆ ಪ್ರವೇಶಕ್ಕೆ ರೈಲ್ವೆ ಅಂಡರ್ ಪಾಸ್, ಹೊಸೂರು ಕ್ರಾಸ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣದೊಂದಿಗೆ ತಾಲೂಕು ಕೇಂದ್ರ ವಾಸ ಅಜ್ಜಂಪುರದಲ್ಲಿ ಹೆಚ್ಚಿನ ಸಂಖ್ಯೆ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಇನ್ನು ಜೆಜೆಎಂ ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್ಲು ಬಾಕಿ ಇದ್ದು, ತ್ವರಿತವಾಗಿ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಜತೆಗೆ, ಜಲಶಕ್ತಿ ಯೋಜನೆಯಡಿ ಅಜ್ಜಂಪುರ ಭಾಗದ ಕೆರೆಗಳ ಅಭಿವೃದ್ಧಿ ಅನುದಾನ ನೀಡುವಂತೆ ಮನವಿ ಮಾಡಿದರು.-- ಬಾಕ್ಸ್...ತರೀಕೆರೆ ನಿಲ್ದಾಣ ಅಭಿವೃದ್ಧಿ ಕ್ರಮ: ಸೋಮಣ್ಣಶಾಸಕ‌ ಶ್ರೀ‌ನಿವಾಸ್ ಮನವಿಯಂತೆ ಈಗಾಗಲೇ ತರೀಕೆರೆ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಸಂಭಂದಿಸಿದಂತೆ ರೈಲ್ವೆ ಡಿಆರ್ ಎಂ ಭೇಟಿ‌ ನೀಡಿ ಪರಿಶೀಲನೆಗೆ ಆಗಮಿಸಿದ್ದು, ಗತಿಶಕ್ತಿ ಅಥವಾ ಇತರ ಯೋಜನೆಯಡಿ ತರೀಕೆರೆ ರೈಲ್ವೆ ನಿಲ್ದಾಣವನ್ನು ಮುಂದಿನ 15- 20 ತಿಂಗಳಲ್ಲಿ ಮೇಲ್ದರ್ಜೆಗೇರಿಸುವ ಕೆಲಸ ಮಾಡಲಿದ್ದಾರೆ ಎಂದು ವಿ.ಸೋಮಣ್ಣ ಭರವಸೆ ನೀಡಿದರು.ಜತೆಗೆ, ತರೀಕೆರೆ ನಿಲ್ದಾಣದಲ್ಲಿ ಸುಸಜ್ಜಿತ ವಿಶ್ರಾಂತಿ ಕೊಠಡಿ (ವೇಟಿಂಗ್ ಹಾಲ್) ನಿರ್ಮಾಣಕ್ಕೆ ₹1.01 ಕೋಟಿ ಮಂಜೂರಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.....ಬಾಕ್ಸ್....ಮಲೆನಾಡಿನ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ:ಚಿಕ್ಕಮಗಳೂರಿನಿಂದ ತಿರುಪತಿಗೆ ಇತ್ತೀಚೆಗೆ ಆರಂಭಿಸಲಾದ ಹೊಸ ರೈಲಿಗೆ ಭಕ್ತರಿಂದ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ದಿನನಿತ್ಯ ಈ ರೈಲು ಸಂಚರಿಸಿದರೂ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ರೈಲಿನ ಸೇವೆ ಇನ್ನಷ್ಟು ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಈ ಕುರಿತು ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಸಕಾರಾತ್ಮಕ ತೀರ್ಮಾನದೊಂದಿಗೆ‌ ಶುಭ ಸುದ್ದಿ ನೀಡಲಿದ್ದೇವೆ ಎಂದು ತಿಳಿಸಿದರು.....ಬಾಕ್ಸ್...*ತರೀಕೆರೆ ಶಾಸಕರ ಆಪ್ತ ಸಹಾಯಕ ಸೇರಿ ಹಲವರ ವಿರುದ್ಧ ಸೋಮಣ್ಣ ಗರಂ*ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮೊದಲು ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆಗೆ ಸುಮಾರು ಅರ್ಧ ತಾಸು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗಾಗಿ ಕಾದು ನಿಂತ ಸಚಿವ ವಿ.ಸೋಮಣ್ಣ, ಪೂಜಾರಿ ಆಗಮಿಸುತ್ತಿದಂತೆ ಸಂಸದರಿಗೆ ಆರತಿ ಮಾಡುವಂತೆ ಪುರೋಹಿತರಿಗೆ ಸೂಚಿಸಿದ ಘಟನೆ ನಡೆಯಿತು. ಇನ್ನೂ ಸೋಮಣ್ಣ ಭಾಷಣದ ವೇಳೆ, ಅಧಿಕಾರಿಯೊಬ್ಬರ ಫೋನ್ ರಿಂಗ್ ಆಯಿತು. ಆಗ ಅಧಿಕಾರಿ ವಿರುದ್ಧ ಗರಂ ಆದಾ ಸೋಮಣ್ಣ ಯಾಕ್ ರೀ ಇಲ್ಲಿಗೆ ಬರುತ್ತೀರಾ ನೀವು ಎಂದು ಗದರಿದರು. ತರೀಕೆರೆ ಶಾಸಕ ಶ್ರೀನಿವಾಸ್ ಕ್ಷೇತ್ರದ ಕುರಿತು ಸೋಮಣ್ಣ‌ ಮಾತನಾಡುವ ಸರಿಯಾದ ಸಮಯಕ್ಕೆ ಶಾಸಕರ ಆಪ್ತ ಸಹಾಯಕ, ಶ್ರೀನಿವಾಸ್ ಅವರಿಗೆ ಕಿವಿಯಲ್ಲಿ ಏನೋ ಹೇಳುತ್ತಿದ್ದನ್ನು ಗಮನಿಸಿದ ಸೋಮಣ್ಣ, ಶಾಸಕರ ಅವರ ಆಪ್ತ ಸಹಾಯಕನ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು.-- ಬಾಕ್ಸ್...2 ರಿಂದ‌ 3 ತಿಂಗಳಲ್ಲಿ ರೈಲು ಸಂಚಾರ: ಸೋಮಣ್ಣ ಕಡೂರು-ಚಿಕ್ಕಮಗಳೂರು-ಬೇಲೂರು ಮಾರ್ಗದ 68 ಕಿ.ಮೀ. ರೈಲು ಯೋಜನೆಗೆ 2012-13ರಲ್ಲೇ ಅನುಮೋದನೆ ಸಿಕ್ಕರೂ, ಕಾಮಗಾರಿ ವೇಗ ಪಡೆದಿದ್ದು ಮೋದಿ ಪ್ರಧಾನಿಯಾದ ಬಳಿಕವೇ. ಈಗಾಗಲೇ ₹535 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣ ಗೊಳ್ಳುವ ಹಂತಕ್ಕೆ ಬಂದಿದೆ. ಮುಂದಿನ 2 ರಿಂದ 3ತಿಂಗಳಲ್ಲಿ ಕಡೂರು-ಚಿಕ್ಕಮಗಳೂರು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.----ಕೋಟ್ ----ಅಜ್ಜಂಪುರ ಭಾಗದಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಅಜ್ಜಂಪುರದಲ್ಲಿ ಯಾವ ಯಾವ ರೈಲು‌ ನಿಲುಗಡೆ ಆಗಬೇಕೆಂದು ಮುಂಬರುವ ಲೋಕಸಭಾ ಅಧಿವೇಶನದ ಸಮಯದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಜೊತೆಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ.-ವಿ.ಸೋಮಣ್ಣ, ರೈಲ್ವೆ ರಾಜ್ಯ ಖಾತೆ ಕೇಂದ್ರ‌ ಸಚಿವ

--ಫೋಟೋ---

ರೈಲ್ವೆ ಇಲಾಖೆಯಿಂದ ಅಜ್ಜಂಪುರದಲ್ಲಿ ಭಾನುವಾರ ಆಯೋಜಿಸಿದ್ದ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆಯನ್ನು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ನೆರವೇರಿಸಿದರು. ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ, ಶಾಸಕ ಜಿ.ಎಚ್‌. ಶ್ರೀನಿವಾಸ್‌, ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಮಾಜಿ ಶಾಸಕ ಸುರೇಶ್‌ ಮೊದಲಾದವರಿದ್ದರು.