ಸಾರಾಂಶ
ಗುರುವಾರ ಹಾಗೂ ಶುಕ್ರವಾರ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ತಗ್ಗು ಪ್ರದೇಶಗಳು ಜಲಾವೃತ । ಸಂತಸಗೊಂಡ ರೈತರು
ಕನ್ನಡಪ್ರಭ ವಾರ್ತೆ ಕನಕಗಿರಿಗುರುವಾರ ಹಾಗೂ ಶುಕ್ರವಾರ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕಳೆದ ತಿಂಗಳಿಂದ ಮುನಿಸಿಕೊಂಡಿದ್ದ ಮಳೆರಾಯ ಕಳೆದೆರಡು ದಿನಗಳಿಂದ ಅಬ್ಬರಿಸಿದ್ದಾನೆ. ಗುಡುಗು ಸಿಡಿಲು ಸಹಿತ ಪಟ್ಟಣ ಸೇರಿ ತಾಲೂಕಿನಾದ್ಯಂತ ಮಳೆಯಾಗಿದ್ದು, ಜಮೀನುಗಳಲ್ಲಿನ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.ಜಮೀನುಗಳಲ್ಲಿರುವ ಒಡ್ಡುಗಳಲ್ಲಿ ನೀರು ನಿಂತಿದ್ದು, ಅಂತರ್ಜಲ ವೃದ್ಧಿಯಾದಂತಾಗಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ.
ಗುರುವಾರ ರಾತ್ರಿ ಎರಡು ತಾಸು, ಶುಕ್ರವಾರ ಇಡೀ ರಾತ್ರಿ ಜಿಟಿಜಿಟಿ ಮಳೆಯಾಗಿದ್ದರಿಂದ ತಾಲೂಕಿನ ಕನ್ನೇರಮಡು ಗ್ರಾಮದ ಮಲ್ಲಮ್ಮ ಈಳಿಗೇರ ಎಂಬವರಿಗೆ ಸೇರಿದ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯವರು ಅಂಗಳದಲ್ಲಿ ಮಲಗಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆಯೊಳಗಿದ್ದ ಪಾತ್ರೆ ಹಾಗೂ ದವಸ, ಧಾನ್ಯಗಳು ಜಖಂಗೊಂಡಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಆಡಳಿತಾಧಿಕಾರಿ ರಾಜು ಚವ್ಹಾಣ ತಿಳಿಸಿದ್ದಾರೆ.ಅಲ್ಲದೇ ಬಸರಿಹಾಳ ಗ್ರಾಪಂ ವ್ಯಾಪ್ತಿಯ ಸೋಮಸಾಗರ ಗ್ರಾಮದ ಮಲಿಯಮ್ಮ ದೇವಸ್ಥಾನದ ಬಳಿ ಇದ್ದ ಸುಮಾರು 75 ವರ್ಷದ ಮರವೊಂದು ನೆಲಸಮಗೊಂಡಿದ್ದರಿಂದ ಕೆಲ ಗಂಟೆಗಳ ಕಾಲ ಕನಕಗಿರಿ-ಕೊಪ್ಪಳ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಜೆಸಿಬಿ, ಟ್ರ್ಯಾಕ್ಟರ್‌ಗಳ ಮೂಲಕ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಚಿವ ತಂಗಡಗಿ ಗೃಹ ಕಚೇರಿ ಜಲಾವೃತ:
ಪಟ್ಟಣದ 5ನೇ ವಾರ್ಡಿನಲ್ಲಿರುವ ಸಚಿವ ಶಿವರಾಜ ತಂಗಡಗಿಯವರ ಗೃಹ ಕಚೇರಿಯು ಮಳೆ ನೀರಿನಿಂದ ಜಲಾವೃತವಾಗಿರುವುದು ಕಂಡು ಬಂತು.ಸಚಿವರ ಮನೆಯ ಹಿಂಭಾಗ ಹಾಗೂ ಮುಂಭಾಗದ ಮೂಲಕ ಸಾರ್ವಜನಿಕರ ಸಂಚಾರ ತೊಂದರೆಯಾಗಿತ್ತು. ಕಚೇರಿ ಸಹಾಯಕರು
ನೀರನ್ನು ಬೇರೆಡೆ ವಾಲಿಸಿದ್ದರಿಂದ ಐದಾರು ತಾಸುಗಳ ನಂತರ ಸಂಚಾರ ಶುರುವಾಯಿತು. ಸಚಿವರ ಕಚೇರಿ ಹೀಗಾದರೆ ಇನ್ನೂ ಸಾರ್ವಜನಿಕರ ಸಮಸ್ಯೆಗಳಿಗೆ ಪಪಂ ಸ್ಪಂಧಿಸುತ್ತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.