ಬಳ್ಳಾರಿಯಲ್ಲಿ ಮಳೆ ಬಿಡುವು: ಬಿತ್ತನೆ ಕಾರ್ಯ ಚುರುಕು

| Published : Jun 26 2024, 12:35 AM IST

ಬಳ್ಳಾರಿಯಲ್ಲಿ ಮಳೆ ಬಿಡುವು: ಬಿತ್ತನೆ ಕಾರ್ಯ ಚುರುಕು
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ವೇಗ ಪಡೆದಿದೆ. ಕಳೆದ ವರ್ಷ ಮುಂಗಾರು, ಹಿಂಗಾರಿನಲ್ಲಿ ರೈತರು ಬೆಳೆನಷ್ಟಗೊಂಡಿದ್ದರು.

ಬಳ್ಳಾರಿ: ಸತತ ಸುರಿಯುತ್ತಿದ್ದ ಮಳೆ ಒಂದಷ್ಟು ಬಿಡುವು ನೀಡುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ಬಿತ್ತನೆ ಕಾರ್ಯ ಚುರುಕು ಪಡೆದಿದೆ.ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ವೇಗ ಪಡೆದಿದೆ. ಕಳೆದ ವರ್ಷ ಮುಂಗಾರು, ಹಿಂಗಾರಿನಲ್ಲಿ ರೈತರು ಬೆಳೆನಷ್ಟಗೊಂಡಿದ್ದರು. ಆದರೆ, ಈ ಬಾರಿಯ ಪೂರ್ವ ಮುಂಗಾರು ಉತ್ತಮ ಆರಂಭ ನೀಡಿದ್ದು ರೈತರಲ್ಲಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ.

ನೀರಾವರಿ ಪ್ರದೇಶದ ರೈತರು ಮಾತ್ರ ತುಂಗಭದ್ರಾ ಜಲಾಶಯದ ಭರ್ತಿಗಾಗಿ ಎದುರು ನೋಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದು ಜಲಾಶಯದ ನೀರಿಗಾಗಿ ಕಾಯುವುದು ಅನಿವಾರ್ಯವಾಗಿದೆ.

ಪೂರ್ವ ಮುಂಗಾರು ಮಳೆ ಶುರುಗೊಳ್ಳುತ್ತಿದ್ದಂತೆಯೇ ಕೃಷಿ ಇಲಾಖೆ ಬಿತ್ತನೆ ಬೀಜ ಅಗತ್ಯ ದಾಸ್ತಾನು ಮಾಡಿಕೊಂಡು ಆಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಿದ್ದು, ಮಳೆ ಬೀಳುತ್ತಿದ್ದಂತೆಯೇ ಬಿತ್ತನೆ ಕಾರ್ಯಕ್ಕೆ ಮುಂದಾಗುವ ರೈತರಿಗೆ ಅನುಕೂಲ ಒದಗಿಸಿದೆ.

ಬಿತ್ತನೆ ಪ್ರಮಾಣ ಎಲ್ಲೆಲ್ಲಿ? ಎಷ್ಟೆಷ್ಟು?:

ಜಿಲ್ಲೆಯಲ್ಲಿ 1,08,943 ಹೆಕ್ಟೇರ್ ಪ್ರದೇಶ ನೀರಾವರಿ ಸೇರಿದಂತೆ ಒಟ್ಟು 1,73,897 ಹೆಕ್ಟೇರ್ ಪ್ರದೇಶವಿದೆ. ಈ ಪೈಕಿ 3570 ಹೆಕ್ಟೇರ್ ನ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಶುರುವಾಗಿದೆ. 17895 ಹೆಕ್ಟೇರ್‌ನ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಜೂ.21ವರೆಗೆ ಜಿಲ್ಲೆಯಲ್ಲಿ 21,465 ಹೆಕ್ಟೇರ್‌ ಬಿತ್ತನೆಯಾಗಿದೆ. ಶೇ.12 ಬಿತ್ತನೆಯಾಗಿದೆ.

ಸಂಡೂರು ತಾಲೂಕಿನ ಶೇ.24.72, ಸಿರುಗುಪ್ಪ ಶೇ.18.73, ಕುರುಗೋಡು ಶೇ.4.65, ಕಂಪ್ಲಿ ಶೇ.1.45, ಬಳ್ಳಾರಿ ತಾಲೂಕಿನಲ್ಲಿ ಶೇ.0.75 ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾಗುತ್ತಿರುವ ಬೆಳೆಗಳ ಪೈಕಿ (ಮಳೆಯಾಶ್ರಿತ ಜಮೀನು) ಜೋಳ, ಮುಸುಕಿನಜೋಳ, ಸಜ್ಜೆ, ಶೇಂಗಾ, ಸೂರ್ಯಕಾಂತಿ, ಕುಸುಬೆ, ಹತ್ತಿ ಬೆಳೆಗಳ ಬಿತ್ತನೆ ಕಾರ್ಯ ಚುರುಕಾಗಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 17,38,897 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಇಟ್ಟುಕೊಂಡಿದೆ.

ಜಿಂಕೆ ಹಾವಳಿಗೆ ರೈತರು ಕಂಗಾಲು:

ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದು ಸಸಿಯಾಗುವ ಹಂತದಲ್ಲೇ ಜಿಂಕೆಗಳು ತಿಂದು ನಾಶ ಮಾಡುತ್ತಿರುವುದು ರೈತರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಮೆಕ್ಕೆಜೋಳ, ಶೇಂಗಾ, ಹೆಸರು, ತೊಗರಿ, ಹಲಸಂದಿ, ಉದ್ದು ಸೇರಿ ವಿವಿಧ ಬೆಳೆಗಳನ್ನು ಬೇರು ಸಮೇತ ಕಿತ್ತು ತಿನ್ನುತ್ತಿವೆ. ಇವುಗಳ ನಿಯಂತ್ರಣ ಕಷ್ಟಸಾಧ್ಯ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ಬಿತ್ತನೆ ಬೀಜ ದಾಸ್ತಾನಿದೆ. ರೈತ ಸಂಪರ್ಕ ಕೇಂದ್ರಗಳಿಂದ ಖರೀದಿಸಿ ಬಿತ್ತನೆ ಮಾಡುತ್ತಿದ್ದಾರೆ. ಬಿತ್ತನೆಬೀಜ, ರಸಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.

ಕೃಷಿ ಕಾರ್ಮಿಕರಿಗೆ ಹೆಚ್ಚಿದ ಬೇಡಿಕೆ:ಮಳೆಯಾಶ್ರಿತ ಪ್ರದೇಶದಲ್ಲಿ ಏಕಕಾಲಕ್ಕೆ ಬಿತ್ತನೆ ಕಾರ್ಯ ಶುರುಗೊಂಡಿರುವುದರಿಂದ ಕೃಷಿ ಕಾರ್ಮಿಕರಿಗೆ ಬೇಡಿಕೆ ಬಂದಿದೆ. ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆ ನಡುವೆಯೂ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ. ಮಳೆಯಿಲ್ಲದೆ ಬದುಕು ಕಟ್ಟಿಕೊಳ್ಳಲು ಬೆಂಗಳೂರು, ಹೈದ್ರಾಬಾದ್ ಸೇರಿ ವಿವಿಧೆಡೆ ತೆರಳಿದ್ದ ಕೃಷಿ ಕಾರ್ಮಿಕರು ಮತ್ತೆ ಹಳ್ಳಿಗಳಿಗೆ ಮರಳುತ್ತಿದ್ದಾರೆ.

ಉತ್ತಮ ಮಳೆಯಿಂದಾಗಿ ಬಿತ್ತನೆ ಶುರುವಾಗಿದೆ. ಬಿತ್ತನೆ ಬೀಜ ಕೊರತೆಯಿಲ್ಲ. ಆದರೆ, ನಮ್ಮ ಭಾಗದಲ್ಲಿ ಜಿಂಕೆ ಕಾಟವಿದೆ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕು ಎನ್ನುತ್ತಾರೆ ಕಾರೆಕಲ್ಲು ವೀರಾಪುರ (ಬಳ್ಳಾರಿ ತಾಲೂಕು) ರೈತ ಹನುಮನಗೌಡ.