ಬೆಳೆ ನಿರ್ವಹಣೆಗೆ ಮಳೆ ಅಡ್ಡಿ: ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಸ್ತಬ್ದ

| Published : Jul 26 2024, 01:34 AM IST

ಬೆಳೆ ನಿರ್ವಹಣೆಗೆ ಮಳೆ ಅಡ್ಡಿ: ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಸ್ತಬ್ದ
Share this Article
  • FB
  • TW
  • Linkdin
  • Email

ಸಾರಾಂಶ

ಬಿತ್ತಿ ವಾರವಾಗಿತ್ತು. ಮಳೆ ಬರುತ್ತಿರೋದು ನಮ್ಮ ಫಸಲಿಗೆ ಅನುಕೂಲವಾಗಿದೆ. ಆದರೆ ಬೆಳೆ ಸಂರಕ್ಷಣೆಯ ಮುಂದಿನ ಕೃಷಿ ಚಟುವಟಿಕೆಗಳಿಗೆ ಮಳೆ ನಿಂತರಷ್ಟೆ ದಾರಿ, ಇಲ್ಲದೆ ಹೋದರೆ ತೊಂದರೆ ಕಾಡಲಿದೆ ಎನ್ನುತ್ತಿರುವ ರೈತರು ಮಳೆ ನಿಲ್ಲೋದು ಯಾವಾಗ ಎಂದು ಮುಗಿಲು ನೋಡುತ್ತ ಕುಳಿತುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.

ರೈತ ಸಮೂಹ ಮಳೆ ಅದ್ಯಾವಾಗ ಬಿಡುವು ನೀಡುವುದೋ ಎಂಬ ನಿರೀಕ್ಷೆಯಲ್ಲಿದ್ದಾರೆ. ಏಕೆಂದರೆ ಈಗಾಗಲೇ ಹೆಸರು, ಉದ್ದು, ತೊಗರಿ, ಅಲಸಂದಿ ಸೇರಿದಂತೆ ಬಿತ್ತನೆಯಾಗಿರುವ ತರಹೇವಾರಿ ಫಸಲು ನಳನಳಿಸುತ್ತಿದೆ. ತುಂತುರು ಮಳೆ ಈ ಫಸಲಿಗೆ ತುಂಬ ಅನುಕೂಲವಾಗಿದೆ. ಆದರೆ ಕಳೆ ಕೀಳುವ, ಎಡೆ ಹೊಡೆಯುವ ಸೇರಿದಂತೆ ಹಲವಾರು ಕೃಷಿ ಕೆಲಸಗಳಿಗೆ ಮಳೆಯೇ ಅಡ್ಡಿಯಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ.

ಬಿತ್ತಿ ವಾರವಾಗಿತ್ತು. ಮಳೆ ಬರುತ್ತಿರೋದು ನಮ್ಮ ಫಸಲಿಗೆ ಅನುಕೂಲವಾಗಿದೆ. ಆದರೆ ಬೆಳೆ ಸಂರಕ್ಷಣೆಯ ಮುಂದಿನ ಕೃಷಿ ಚಟುವಟಿಕೆಗಳಿಗೆ ಮಳೆ ನಿಂತರಷ್ಟೆ ದಾರಿ, ಇಲ್ಲದೆ ಹೋದರೆ ತೊಂದರೆ ಕಾಡಲಿದೆ ಎನ್ನುತ್ತಿರುವ ರೈತರು ಮಳೆ ನಿಲ್ಲೋದು ಯಾವಾಗ ಎಂದು ಮುಗಿಲು ನೋಡುತ್ತ ಕುಳಿತುಕೊಂಡಿದ್ದಾರೆ.

ಇತ್ತ ಮುಸಲಧಾರೆಯಂತೆ ಮಲೆ ಜಿಟಿಜಿಟಿ ಸುರಿಯುತ್ತಿದೆ. ಜಿಲ್ಲಾದ್ಯಂತ ದಟ್ಟ ಮೋಡ ಕವಿದ ವಾತಾವರಣವಿದೆ, ಮಳೆ ಬರೋದು, ನಿಲ್ಲೋದು ಮಾಡುತ್ತಿದೆ. ಇದರಿಂದಾಗಿ ರೈತರಿಗೆ ಹೊಲಕ್ಕೆ ಹೋಗಬೇಕೋ, ಬೇಡವೋ ಗೊತ್ತಾಗದೆ ಮಳೆ ಸಂಪೂರ್ಣ ನಿಲ್ಲುವವರೆಗೂ ಕಾಯುವಂತಾಗಿದೆ.

ಬಿತ್ತನೆ ಕೈಗೊಂಡಿರುವ ರೈತರ ಜಮೀನಲ್ಲಿ ಬೆಳೆ ಉತ್ತಮವಾಗಿದ್ದು, ಔಷಧಿ, ಗೊಬ್ಬರ, ನಿರ್ವಹಣೆಗೆ ಸಕಾಲಕ್ಕೆ ಉಪಚಾರ ಕೈಗೊಳ್ಳಲು ಮಳೆ ಬಿಡುವು ನೀಡಬೇಕು, ಅಂದಾಗಾ ಮಾತ್ರವೇ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಆಳಂದ, ಅಫಜಲ್ಪುರ, ಚಿತ್ತಾಪುರ, ಕಲಬುರಗಿ ಭಾಗದಲ್ಲಿ ಬಿತ್ತನೆಯಾಗಿರುವ ಉದ್ದು, ಹೆಸರು, ಸೋಯಾ ಬೆಳೆಗೆ ಹೇನಿನ ಬಾಧೆ ಆವರಿಸಿದ್ದು ಬೆಳೆ ಉಳಿಸಿಕೊಳ್ಳಲು ಮತ್ತು ಬೆಳೆಯಲ್ಲಿನ ಕಳೆ ಅಳಿಸಲು ಔಷಧಿ ಸಿಂಪರಣೆಗೆ ಆಗಾಗಾ ಸುರಿಯುತ್ತಿರುವ ತುಂತುರ ಮಳೆ ಅಡ್ಡಿಯಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ.

ಜು. 22 ರಿಂದ 24ರವರೆಗೆ ಏಳು ಮಳೆಮಾಪನ ಕೇಂದ್ರ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿರುವ ಅಂಕಿ ಸಂಖ್ಯೆ ದೊರಕಿದೆ. ಎಲ್ಲೂ 25 ಕ್ಕಿಂತ ಹೆಚ್ಚಿನ ಎಂಎಂ ಮಳೆಯಾಗಿಲ್ಲ. ಹಳ್ಳ, ನಾಲಾಗಳಲ್ಲಿ ಮಳೆಗಾಲದ ಸಾಮಾನ್ಯ ನೀರಿನ ಹರಿವು ಮುಂದಿವರೆದಿದೆ. ಹಿಂದಿನ ಜೂನ್ ಹಾಗೂ ಜುಲೈ ಮೊದಲು ವಾರದಲ್ಲಿ ಬಿದ್ದ ಮಳೆ ಅನೇಕ ಕೆರೆಗಳು ಭರ್ತಿಯಾಗಿದ್ದವು. ಅಮರ್ಜಾ ಅಣೆಕಟ್ಟೆಗೆ ಸಣ್ಣ ಪ್ರಮಾಣದ ನೀರಿನ ಒಳಹರಿವು ಇದೆ.

ಬೆಳೆವಿಮೆ ನೋಂದಣಿಗೆ ಜು. 31 ಕೊನೆಯ ದಿನ: 2024- 25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿಯಲ್ಲಿ ಹೆಸರು ಬೆಳೆಗೆ ಜು. 15 ಹಾಗೂ ಉದ್ದು ತೊಗರಿ ಮತ್ತು ಇತರೆ ಬೆಳೆಗಳಿಗೆ ವಿಮಾ ನೋಂದಣಿಗೆ ಜು.31 ಕೊನೆ ದಿನವಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಅಥವಾ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಹಾಗೂ ಗುಡುಗು ಮಿಂಚುಗಳಿAದ ಉಂಟಾಗುವ ಬೆಂಕಿ ಅವಘಡದಿಂದ ಬೆಳೆ ನಷ್ಟವುಂಟಾದರೆ ವಿಮೆ ಸದುಪಯೋಗ ಪಡೆದುಕೊಳ್ಳಬಹುದು.