ಯಡ್ರಾಮಿ, ಜೇವರ್ಗಿಯಲ್ಲಿ ಮಳೆ: ಬಿತ್ತನೆಗೆ ಸಜ್ಜಾದ ರೈತರು

| Published : Jun 08 2024, 12:37 AM IST

ಯಡ್ರಾಮಿ, ಜೇವರ್ಗಿಯಲ್ಲಿ ಮಳೆ: ಬಿತ್ತನೆಗೆ ಸಜ್ಜಾದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

18100 ಟನ್ ಯೂರಿಯಾ, 6955 ಟನ್ ಡಿಎಪಿ ರಸಗೊಬ್ಬರ ಸೇರಿದಂತೆ ಕೀಟನಾಶಕವನ್ನು ದಾಸ್ತಾನು ಮಾಡಲಾಗಿದೆ. ಯಡ್ರಾಮಿ ಹಾಗೂ ಜೇವರ್ಗಿ ತಾಲೂಕುಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಿರುವುದಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಬ್ದುಲ್ ಮಾಜೀದ್ ತಿಳಿಸಿದ್ದಾರೆ.

ಯಡ್ರಾಮಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನಲ್ಲಿ ವಾಡಿಕೆ ಅನುಸಾರ ಉತ್ತಮ ಮಳೆಯಾಗಿದೆ. ರೈತರು ಬಿತ್ತನೆ ಸಿದ್ಧತೆಯಲ್ಲಿ ತೊಡಗಿದ್ದು ಉಭಯ ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 1,59,899 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ್ದು, ಉಭಯ ತಾಲೂಕಿನಲ್ಲಿ ಮುಂದಿನ ವಾರ ಬಹುತೇಕ ರೈತರು ಮುಂಗಾರು ಬಿತ್ತನೆ ಮಾಡುವ ಸಂಭವವಿರುತ್ತದೆ. ಪ್ರಸಕ್ತ ಹಂಗಾಮಿನಲ್ಲಿ 1,57,699 ಹೆಕ್ಟೇರ್‌ ಒಣ ಪ್ರದೇಶದ ಹಾಗೂ 2200 ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ. ಕೃಷಿ ಇಲಾಖೆಯಿಂದ ಅಗತ್ಯ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಸಜ್ಜೆ, ಸೂರ್ಯಕಾಂತಿ, ಮೆಕ್ಕೆ ಜೋಳ, ಹೆಸರು, ಎಳ್ಳು ಸೇರಿದಂತೆ 1469 ಕ್ವಿಂಟಲ್ ಬೀಜ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಮಾಣಿತ ಬಿತ್ತನೆ ಬೀಜದ ದಾಸ್ತಾನನ್ನು ಮಾಡಿಕೊಳ್ಳಲಾಗಿದೆ.

18100 ಟನ್ ಯೂರಿಯಾ, 6955 ಟನ್ ಡಿಎಪಿ ರಸಗೊಬ್ಬರ ಸೇರಿದಂತೆ ಕೀಟನಾಶಕವನ್ನು ದಾಸ್ತಾನು ಮಾಡಲಾಗಿದೆ. ಯಡ್ರಾಮಿ ಹಾಗೂ ಜೇವರ್ಗಿ ತಾಲೂಕುಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಿರುವುದಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಬ್ದುಲ್ ಮಾಜೀದ್ ತಿಳಿಸಿದ್ದಾರೆ.

ರೈತರು ಅಧಿಕೃತ ಮಾರಾಟಗಾರರಿಂದ ಬಿತ್ತನೆ ಬೀಜ, ಕೀಟನಾಶಕ ಹಾಗೂ ರಸಗೊಬ್ಬರ ಖರೀದಿಸಬೇಕು ಹಾಗೂ ಖರೀದಿ ಮಾಡಿದ ಪರಿಕರದ ರಸೀದಿಯನ್ನು ಕಡ್ಡಾಯವಾಗಿ ಪಡೆದುಕೊಂಡು ಹಂಗಾಮು ಮುಗಿಯುವವರೆಗೂ ಕಾಯ್ದಿರಿಸಬೇಕು. ಅನಧಿಕೃತ, ಕಳಪೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕೃಷಿ ಅಧಿಕಾರಿಗಳಿಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.