ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದೆ. ವಿಜಯಪುರದಲ್ಲಿ ದಿಢೀರ್ ಡೋಣಿ ನದಿ ನೀರಿನ ಮಟ್ಟ ಏರಿಕೆಯಾಗಿ ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದರೆ, ಕರಾವಳಿಯ ಪ್ರಸಿದ್ಧ ಯಾತ್ರಾ ಸ್ಥಳ ಗೋಕರ್ಣದ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೂ ಮಳೆ ನೀರು ನುಗ್ಗಿ ಭಕ್ತರು ಕೆಲಕಾಲ ಪರದಾಡುವಂತಾಗಿದೆ.ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಬೆಂಗಳೂರು, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಗೋಕರ್ಣದಲ್ಲಿ ಮಳೆ ಆರ್ಭಟಕ್ಕೆ ಸಂಗಮನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭಗುಡಿಗೆ ನುಗ್ಗಿ ಮಹಾಪೂಜೆಗೆ ಅಡ್ಡಿಯಾಯಿತು. ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು(ಮರಳ ದಿನ್ನೆ) ಮಂದಿರದ ಸಿಬ್ಬಂದಿ ಸತತ ಎರಡು ತಾಸಿಗೂ ಅಧಿಕ ಕಾಲ ಕಡಿದು ನೀರು ಸರಾಗವಾಗಿ ಹೋಗುವಂತೆ ಮಾಡಿದ ಬಳಿಕ ದೇವಸ್ಥಾನದಲ್ಲಿ ನೀರಿನಪ್ರಮಾಣ ಇಳಿಕೆಯಾಯಿತು.ಯಲ್ಲಮ್ಮ ದೇಗುಲಕ್ಕೂ ನೀರು: ಬೆಳಗಾವಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಸವದತ್ತಿ ತಾಲೂಕಿನ ಯಲ್ಲಮ್ಮಗುಡ್ಡದಲ್ಲಿ ದೇವಸ್ಥಾನ ಆವರಣದಲ್ಲೇ ನೀರು ಹರಿದಿದೆ. ಇದರಿಂದಾಗಿ ಭಕ್ತರು ದೇವಿ ದರ್ಶನ ಪಡೆಯಲು ಪರದಾಡಬೇಕಾಯಿತು.
ಇನ್ನು ಹಿರೇಬಾಗೇವಾಡಿಯಲ್ಲಿ ಬೈಲಹೊಂಗಲ ರಾಜ್ಯ ಹೆದ್ದಾರಿ ಮೇಲೆಯೇ ಮಳೆ ನೀರು ನಿಂತಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಗೋಕಾಕ-ಕೊಣ್ಣೂರು ರಸ್ತೆಗೆ ಬೆಟ್ಟದ ಮೇಲಿಂದ ಬಂಡೆಗಳು ಉರುಳಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.ಆಲಮಟ್ಟಿ: ವರ್ಷದ ಮೊದಲ ಒಳಹರಿವು ಆರಂಭಆಲಮಟ್ಟಿ: ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಈ ವರ್ಷದ ಮೊದಲ ಒಳಹರಿವು ಆರಂಭವಾಗಿದ್ದು,1,768 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬಂದಿದೆ. ಕಳೆದ ವರ್ಷ ಜೂನ್ ಕಳೆದರೂ ಒಳಹರಿವು ಇರಲಿಲ್ಲ. ಆದರೆ ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದ ಈ ಒಳಹರಿವು ಬಂದಿದೆ.
ಮಳೆಯಲ್ಲಿ ಜಪಕ್ಕೆ ಕೂತ ವ್ಯಕ್ತಿಧಾರವಾಡ: ಧಾರಾಕಾರದಲ್ಲಿ ಸುರಿಯುವ ಮಳೆಯಲ್ಲೇ ವ್ಯಕ್ತಿಯೊಬ್ಬ ಧಾರವಾಡ ನಗರ ಬಸ್ ನಿಲ್ದಾಣದ ಎದುರು ಜಪ ಮಾಡುತ್ತಾ ಕುಳಿತಿರುವ ವಿಚಿತ್ರ ಘಟನೆ ನಡೆದಿದೆ. ಮಧ್ಯಾಹ್ನ ಈ ವ್ಯಕ್ತಿ ದಿಢೀರ್ ಆಗಿ ಸುರಿಯುವ ಮಳೆಯಲ್ಲೇ ಜಪಕ್ಕೆ ಕೂತಿದ್ದು, ಇದನ್ನು ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ. ಈತನ ಗುರುತು ಪತ್ತೆಯಾಗಿಲ್ಲ.ಕೋಡಿ ಬಿದ್ದ ಕೆರೆ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಮಳೆಯಿಂದಾಗಿ ಕೆರೆಕಟ್ಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಜಾಗೀರ ಬುಡ್ಡೆನಹಳ್ಳಿಯಲ್ಲಿ ಚೆಕ್ ಡ್ಯಾಮ್ ಒಡೆದು ಮನೆಗಳಿಗೆ ನೀರು ನುಗ್ಗಿದ್ದು 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇದರಿಂದ ಮನೆಗಳಲ್ಲಿದ್ದ ದವಸ ಧಾನ್ಯ ಬಟ್ಟೆ ಬರೆ, ಅಗತ್ಯ ವಸ್ತುಗಳು ನೀರು ಪಾಲಾಗಿದ್ದು ಲಕ್ಷಾಂತರ ರು. ಹಾನಿಯಾಗಿದೆ.
ಪುರಸಭಾ ಸದಸ್ಯನ ರಕ್ಷಣೆತಾಳಿಕೋಟೆ: ವಿಜಯಪುರ ಜಿಲ್ಲೆ ತಾಳಿಕೋಟೆ ಪಟ್ಟಣದ ಬಸ್ ಘಟಕದ ಮುಖ್ಯ ರಸ್ತೆಯ ಜಾನಕಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ದಾಟುತ್ತಿದ್ದಾಗ ಪುರಸಭೆ ಸದಸ್ಯರೊಬ್ಬರು ಬೈಕ್ ಸಮೇತ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.
ರಾತ್ರಿ ೧೧.೪೦ರ ಸುಮಾರಿಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಪುರಸಭಾ ಸದಸ್ಯ ನಿಂಗಪ್ಪ ಗುರಲಿಂಗಪ್ಪ ಕುಂಟೋಜಿ ಅವರು ಹಳ್ಳದ ನೀರಿನಲ್ಲಿ ಸಿಲುಕಿದ್ದರು. ನೀರಿನ ಪ್ರಮಾಣವನ್ನು ರಾತ್ರಿ ವೇಳೆ ಸರಿಯಾಗಿ ಅಂದಾಜು ಮಾಡದೆ ಹಳ್ಳ ದಾಟಲು ಹೋದಾಗ ಪ್ರವಾಹದಲ್ಲಿ ಸಿಕ್ಕಿಹಾಕೊಂಡಿದ್ದು, ತಕ್ಷಣ ಸ್ಥಳೀಯರೊಬ್ಬರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ತಿಳಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳದವರು ಹಗ್ಗದ ಸಹಾಯದಿಂದ ಪುರಸಭೆ ಸದಸ್ಯನನ್ನು ರಕ್ಷಣೆ ಮಾಡಿದ್ದಾರೆ.