ಮಳೆಯಿಂದ ಕೊಳೆ ರೋಗಕ್ಕೆ ತುತ್ತಾದ ಅಡಕೆ: ರೈತರ ಬದುಕು ಅತಂತ್ರ

| Published : Sep 10 2024, 01:31 AM IST

ಸಾರಾಂಶ

ಶೃಂಗೇರಿ, ಅಡಕೆ ಮಲೆನಾಡಿನ ಜನರ ಪ್ರಮುಖ ವಾಣಿಜ್ಯ ಬೆಳೆ ಮಾತ್ರವಲ್ಲ ಇಲ್ಲಿನ ರೈತರ ಜೀವನಾಧಾರ ಕಸುಬು. ಮಲೆನಾಡಿನ ಆರ್ಥಿಕತೆಯೂ ಅಡಕೆ ಬೆಳೆ ಮೇಲೆ ಅವಲಂಬಿಸಿದೆ. ವಾಣಿಜ್ಯ, ವ್ಯಾಪಾರ ಚಟುವಟಿಕೆ ಎಲ್ಲವೂ ಬಹುತೇಕ ಅಡಕೆ ಬೆಳೆ ಮೇಲೆ ಆಧರಿಸಿದೆ. ಆದರೆ ಎಲೆಚುಕ್ಕೆ ರೋಗ ಮತ್ತು ಹಳದಿ ಎಲೆರೋಗದಿಂದ ಅಡಕೆ ಬೆಳೆಗಾರರು ತೊಂದರೆಗೆ ಸಿಲುಕಿದ್ದ ಈ ಸಂದರ್ಭದಲ್ಲೆ ಹೆಚ್ಚಾದ ಮಳೆಯಿಂದ ಕೊಳೆರೋಗವೂ ತಗುಲಿ ರೈತರನ್ನು ಅತಂತ್ರಗೊಳಿಸಿದೆ.

ತೆರಗೆಲೆಗಳಂತೆ ಉದುರುತ್ತಿರುವ ಅಡಕೆ ಕಾಯಿಗಳು । ಕೊಳೆಯುತ್ತಿರುವ ಕಾಫಿ, ಕಾಳು ಮೆಣಸು

ನೆಮ್ಮಾರ್ ಅಬೂಬಕರ್.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಅಡಕೆ ಮಲೆನಾಡಿನ ಜನರ ಪ್ರಮುಖ ವಾಣಿಜ್ಯ ಬೆಳೆ ಮಾತ್ರವಲ್ಲ ಇಲ್ಲಿನ ರೈತರ ಜೀವನಾಧಾರ ಕಸುಬು. ಮಲೆನಾಡಿನ ಆರ್ಥಿಕತೆಯೂ ಅಡಕೆ ಬೆಳೆ ಮೇಲೆ ಅವಲಂಬಿಸಿದೆ. ವಾಣಿಜ್ಯ, ವ್ಯಾಪಾರ ಚಟುವಟಿಕೆ ಎಲ್ಲವೂ ಬಹುತೇಕ ಅಡಕೆ ಬೆಳೆ ಮೇಲೆ ಆಧರಿಸಿದೆ. ಆದರೆ ಎಲೆಚುಕ್ಕೆ ರೋಗ ಮತ್ತು ಹಳದಿ ಎಲೆರೋಗದಿಂದ ಅಡಕೆ ಬೆಳೆಗಾರರು ತೊಂದರೆಗೆ ಸಿಲುಕಿದ್ದ ಈ ಸಂದರ್ಭದಲ್ಲೆ ಹೆಚ್ಚಾದ ಮಳೆಯಿಂದ ಕೊಳೆರೋಗವೂ ತಗುಲಿ ರೈತರನ್ನು ಅತಂತ್ರಗೊಳಿಸಿದೆ.

ರೈತರು ತಲೆ ತಲಾಂತರದಿಂದ ಜೀವನಕ್ಕೆ ಅಡಕೆ ಕೃಷಿಯನ್ನೇ ಅವಲಂಭಿಸಿದ್ದಾರೆ. ಅಡಕೆ ಜೊತೆಗೆ ಉಪ ಬೆಳೆ ಗಳಾಗಿ ಕಾಫಿ, ಕಾಳುಮೆಣನ್ನು ಬೆಳೆಯುತ್ತಾರೆ. ಒಟ್ಟಾರೆ ತಾಲೂಕಿನಲ್ಲಿ 3720 ಹೆಕ್ಟೆರ್ ಅಡಕೆ ಬೆಳೆ, ಸುಮಾರು 800 ಹೆಕ್ಟೆರ್ ನಲ್ಲಿ ಕಾಳು ಮೆಣಸು ಬೆಳೆಯಲಾಗುತ್ತಿದೆ. ಆದರೆ ಕಳೆದೊಂದು ದಶಕದಿಂದ ಅಡಕೆ ತೋಟಗಳಿಗೆ ಹಳದಿ ಎಲೆ ರೋಗ ತಗುಲಿ ಬಹುತೇಕ ತೋಟ, ಬೆಳೆಗಳು ನಾಶವಾಗಿವೆ. ವ್ಯಾಪಕವಾಗಿ ಹರಡುತ್ತಿರುವ ಈ ರೋಗಕ್ಕೆ ಬಹುತೇಕ ತೋಟಗಳು ತುತ್ತಾಗುತ್ತಿವೆ. ಯಾವುದೇ ಸಂಶೋಧನೆ ಕೈ ಗೊಂಡರೂ ಇಂದಿಗೂ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಇದು ಶಾಶ್ವತ ಸಮಸ್ಯೆ ಯಾಗಿ ರೈತರನ್ನು ಕಾಡುತ್ತಲೇ ಇದೆ.

ಈ ರೋಗದ ಜತೆಗೆ ಕಳೆದ 4-5 ವರ್ಷಗಳಿಂದ ಅಡಕೆಗೆ ಎಲೆ ಚುಕ್ಕಿ ರೋಗವೂ ಕಾಣಿಸಿಕೊಮಡಿದ್ದು, ಅಡಕೆ ಮರಗಳ ಹೆಡಲುಗಳಲ್ಲಿ ಕೀಟಗಳು, ಹೆಡಲುಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ, ಕಾಯಿಗಳಲ್ಲಿ ಚುಕ್ಕಿಗಳು ಕಾಣಿಸಿಕೊಳ್ಳುತ್ತಾ ಕ್ರಮೇಣ ಮರಗಳೇ ಒಣಗಿ ಇಡೀ ತೋಟವೇ ನಾಶಗೊಳ್ಳುತ್ತಿದೆ. ಎಲೆ ಚುಕ್ಕಿ ರೋಗಕ್ಕೆ ಎಲ್ಲಾ ರೀತಿ ಔಷಧಿ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣವಾಗಿಲ್ಲ. ಹಳದಿ ಎಲೆ ಮತ್ತು ಎಲೆ ಚುಕ್ಕಿ ರೋಗ ದಿನೇ ದಿನೇ ತನ್ನ ತೀವ್ರತೆ ಹೆಚ್ಚಿಸುತ್ತಾ ತೋಟಗಳನ್ನು ಬಲಿಪಡೆಯುತ್ತಾ ಮಲೆನಾಡಿನ ರೈತರ ಬದುಕು ಅತಂತ್ರಗೊಳಿಸಿದೆ.

ಇದರಿಂಲೇ ಚೇತರಿಸಿಕೊಳ್ಳದ ರೈತರಿಗೆ ಮತ್ತೆ ಬರಸಿಡಿಲಿನಂತೆ ಕೊಳೆ ರೋಗ ಕಾಡುತ್ತಿದೆ. ಈ ವರ್ಷ ಸುರಿದ ಭಾರೀ ಮಳೆಯಿಂದ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಕಳೆದ 3 ತಿಂಗಳ ಭಾರೀ ಮಳೆಗೆ ಕೊಳೆ ರೋಗ ತಗುಲಿ ಅಡಕೆ ತೋಟಗಳಲ್ಲಿ ರಾಶಿ ರಾಶಿ ಅಡಕೆ ಕಾಯಿಗಳು ಉದುರಿ ಬೀಳುತ್ತಿವೆ. ಹಳದಿ ಎಲೆ, ಎಲೆ ಚುಕ್ಕಿ ರೋಗಗಳ ನಡುವೆ ಅಳಿದುಳಿದ ತೋಟಗಳ ಕೆಲವೇ ಫಸಲು ಕೈಸೇರುವ ಮುನ್ನ ರೈತರಿಂದ ಕಸಿದುಕೊಳ್ಳುವಂತಾಗಿದೆ.

ಮಳೆಗಾಲಕ್ಕೂ ಮೊದಲು ಔಷಧಿ ಸಿಂಪಡಣೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವರು 2-3 ಬಾರಿ ಔಷಧಿ ಸಿಂಪಡಿಸಿ ಕೈಗೊಂಡ ಮುನ್ನೆಚ್ಚಿರಿಕೆಗೂ ರೀಗ ಜಗ್ಗಿಲ್ಲ. ಸುಣ್ಣ ,ರಾಳ ಮಿಶ್ರಣದ ಬೋರ್ಡೋ ಸಿಂಪಡಿಸಿದರೂ ಅಡಕೆ ಮರ ಗಳಲ್ಲಿನ ಕಾಯಿಗಳು ತೆರಗೆಲೆಗಳಂತೆ ಉದುರುತ್ತಿವೆ. ಅಡಕೆ ಬೆಳೆಯೇ ವಿನಾಶದ ಅಂಚಿಗೆ ತಲುಪುವ ಭೀತಿ ಎದುರಾಗಿದೆ. ವಿಪರ್ಯಾಸವೆಂದರೆ ಮಾರುಕಟ್ಟೆಯಲ್ಲಿ ಅಡಕೆಗೆ ಈ ಬಾರಿ ಉತ್ತಮ ಧಾರಣೆ ಕಂಡುಬಂದಿದ್ದರೂ,ರೋಗಗಳಿಂದ ಫಸಲು ಹಾಳಾಗುತ್ತಿರುವುದು ದುರಂತ.

ಅಡಕೆ ಜೊತೆ ಉಪಬೆಳೆಯಾಗಿ ಬೆಳೆಯುತ್ತಿರುವ ಕಾಳು ಮೆಣಸು, ಕಾಫಿಯೂ ಅತಿಯಾದ ಮಳೆಗೆ ಕೊಳೆತು ಹೋಗಿ ವ್ಯಾಪಕ ಹಾನಿಯಾಗಿದೆ. ಶೃಂಗೇರಿಯಲ್ಲಿ ಆರಂಭವಾಗಿರುವ ಅಡಕೆ ಸಂಶೋಧನೆ ಕೇಂದ್ರದಲ್ಲಿ ವಿಜ್ಞಾನಿಗಳು ಕಳೆದ ಕೆಲ ವರ್ಷಗಳಿಂದ ನಿರಂತರ ಸಂಶೋಧನೆ ಕೈಗೊಂಡಿದ್ದರೂ ಈವರೆಗೂ ಅಡಕೆಗೆ ಆವರಿಸಿರುವ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದಿಲ್ಲ. ಸರ್ಕಾರದ ಯಾವುದೇ ಕ್ರಮಗಳು ಪರಿಣಾಮ ಬೀರಿಲ್ಲ. ಆದರೆ ರೋಗಮಾತ್ರ ವ್ಯಾಪಕವಾಗಿ ಹರಡುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಅಡಕೆ ಇತಿಹಾಸದ ಪುಟ ಸೇರುವ ದಿನಗಳು ದೂರವಿಲ್ಲ. ಇನ್ನಾದರೂ ಸರ್ಕಾರ, ಅಡಕೆ ಸಂಶೋಧನೆ ಕೇಂದ್ರದ ವಿಜ್ಞಾನಿಗಳು ಎಚ್ಚೆತ್ತು ಅಡಕೆ ರೋಗ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕಿದೆ.

-- ಬಾಕ್ಸ್‌--

ಸರ್ಕಾರಗಳು ಅಡಕೆ ಬೆಳೆ ಉಳಿಸಲು ಮುಂದಾಗಬೇಕು. ವೈಜ್ಞಾನಿಕ ಸಂಶೋಧನೆಗೆ ಒತ್ತು ನೀಡಿ, ಅಡಕೆ ಸಂಶೋಧನೆ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ, ಹೆಚ್ಚುವರಿ ವಿಜ್ಞಾನಿಗಳನ್ನು ನೇಮಿಸಿ, ತ್ವರಿತಗತಿಯಲ್ಲಿ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ. ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಈಗ ಕೊಳೆ ರೋಗ ಎಲ್ಲವೂ ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.

-ಕೆ.ಎಂ.ರಾಮಣ್ಣ ಕರುವಾನೆ.ಕೃಷಿಕ --

ಭಾರೀ ಮಳೆಯಿಂದ ಕೊಳೆ ರೋಗ ಹರಡುತ್ತಿದೆ. ಮಳೆ ಕಡಿಮೆಯಾದ ಮೇಲೆ ಇಡೀ ತೋಟಕ್ಕೆ ಬೋರ್ಡೋ ಸಿಂಪಡಣೆ ಮಾಡಿ, ಎಲೆಚುಕ್ಕಿ ರೋಗ, ಕೊಳೆ ರೋಗ ನಿಯಂತ್ರಿಸ ಬಹುದಾಗಿದೆ. ಕಾಳು ಮೆಣಸು ಬಳ್ಳಿ ಸಂಪೂರ್ಣ ನೆನೆಯುವಂತೆ ಸಿಂಪಡಿಸಬೇಕು. ಇಲಾಖೆ ರೈತರಿಗೆ ಅಗತ್ಯ ಮಾಹಿತಿಗಳೊಂದಿಗೆ ಎಲ್ಲಾ ರೀತಿ ಸಹಕರಿಸುತ್ತಿದೆ. ರೈತರು ಹತಾಶರಾಗದೇ ಆತ್ಮವಿಶ್ವಾಸದಿಂದ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು.

---ಶ್ರೀ ಕೃಷ್ಣ

ಸಹಾಯಕ ನಿರ್ದೇಶಕರು.

ತೋಟಗಾರಿಕೆ ಇಲಾಖೆ.9 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನಲ್ಲಿ ಅಡಕೆ ತೋಟಗಳಿಗೆ ವ್ಯಾಪಕ ಕೊಳೆ ರೋಗ ಆವರಿಸಿರುವುದು.

9 ಶ್ರೀ ಚಿತ್ರ-2 ಅಡಕೆಗಳು ಉದುರಿ ಬಿದ್ದಿರುವುದು.

9 ಶ್ರೀ ಚಿತ್ರ 3-ಕಾಳುಮೆಣಸೆ ಕೊಳೆ ರೋಗದಿಂದ ಕೊಳೆತು ಬೀಳುತ್ತಿರುವುದು.

9 ಶ್ರೀ ಚಿತ್ರ 4-ಕಾಫಿ ಬೆಳೆ ಕೊಳೆ ರೋಗಕ್ಕೆ ಒಳಗಾಗಿರುವುದು.

9 ಶ್ರೀ ಚಿತ್ರ 5-ಶ್ರೀ ಕೃಷ್ಣ .ಸಹಾಯಕ ನಿರ್ದೇಶಕರು

9 ಶ್ರೀ ಚಿತ್ರ 6-ಕೆ.ಎಂ.ರಾಮಣ್ಣ .ಕೃಷಿಕರು.