ಕೊಡಗಿನಲ್ಲಿ ಮಳೆಯ ಸಿಂಚನ

| Published : Feb 21 2025, 12:49 AM IST

ಸಾರಾಂಶ

ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಯವಕಪಾಡಿ, ಕಕ್ಕಬೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ.

ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಯವಕಪಾಡಿ, ಕಕ್ಕಬೆ, ಕುಂಜಿಲ, ನಾಲಡಿ, ಚೆಯ್ಯಂಡಾಣೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.

ಫೆ.21ರ ವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಜಿಲ್ಲೆಯಲ್ಲಿ ಕೆಲವು ಕಡೆ ಮಳೆಯಾಗಿದೆ.

ಜಿಲ್ಲೆಯಾದ್ಯಂತ ಕಾಫಿ ಕೊಯ್ಲು ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಕೆಲವರು ಕಾಫಿ ಕೊಯ್ಲು ಮುಗಿಸಿ ಕೃತಕವಾಗಿ ತೋಟಗಳಿಗೆ ನೀರು ಸಿಂಪಡಿಸುತ್ತಿದ್ದಾರೆ. ಇದೀಗ ಮಳೆಯಾದರೆ ಕಾಫಿ ಹೂವು ಅರಳಲು ಅನುಕೂಲವಾಗುತ್ತದೆ. ಆದ್ದರಿಂದ ಜಿಲ್ಲೆಯ ಕಾಫಿ ಬೆಳೆಗಾರರು ಮಳೆಗೆ ಎದುರು ನೋಡುತ್ತಿದ್ದಾರೆ.

-------------------------

ಕೊಡಗಿನ ಕಕ್ಕಬೆಯಲ್ಲಿ ಮೊದಲ ವರ್ಷಧಾರೆ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗಿನ ನಾಲ್ಕುನಾಡು ವ್ಯಾಪ್ತಿಯ ಕಕ್ಕಬೆಯಲ್ಲಿ ಗುರುವಾರ ಸಂಜೆ ಮೊದಲ ಮಳೆಯ ಸಿಂಚನವಾಗಿದೆ.

ಸಮೀಪದ ಕಕ್ಕಬೆ, ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವಕಪಾಡಿ, ನಾಲಡಿ ಗ್ರಾಮಗಳಲ್ಲಿ ಗುರುವಾರ ಸಂಜೆ ವೇಳೆಗೆ ಗುಡುಗು ಸಹಿತ ಸುಮಾರು 70 ಮಿ.ಮೀ. ನಿಂದ 1.30 ಇಂಚಿನವರೆಗೆ ಮಳೆ ಸುರಿದಿದೆ.

ಅನಿರೀಕ್ಷಿತ ಮಳೆಯಿಂದಾಗಿ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ. ಹೂ ಮಳೆ ಬರುವ ಸಮಯ ಇದಾಗಿದ್ದು ಕಾಫಿ ಬೆಳೆಗಾರರು ಅಲ್ಲಲ್ಲಿ ತುಂತುರು ನೀರಾವರಿ ಮೂಲಕ ಕಾಫಿ ಹೂ ಅರಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಇದೀಗ ಮೊದಲ ಮಳೆಯ ಸಿಂಚನ ವಾಗಿದ್ದು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.

ಕೆಲವು ಕಡೆ ಅಂಗಳದಲ್ಲಿ ಬಿಸಿಲಿಗೆ ಒಣಗಲು ಹಾಕಿದ್ದ ಕಾಫಿ ಅನಿರೀಕ್ಷಿತ ಮಳೆಗೆ ಒದ್ದೆಯಾಗಿ ಕಾಫಿ ಬೆಳೆಗಾರರು ಪರದಾಡುವ ಪರಿಸ್ಥಿತಿ ,ಸಮಸ್ಯೆಗೂ ಎಡೆ ಮಾಡಿಕೊಟ್ಟಿತು.

ನಾಪೋಕ್ಲು ಸೇರಿದಂತೆ ಸುತ್ತಮುತ್ತ ಗುಡುಗು ಸಹಿತ ಮಳೆಯ ಮೋಡದ ವಾತಾವರಣವಿದ್ದರೂ ಮಳೆಯಾಗಲಿಲ್ಲ.