ಸಾರಾಂಶ
ಕನ್ನಡಪ್ರಭ ವಾರ್ತೆ, ಬೀರೂರು
ಕಾಫಿನಾಡಿನ ಗಿರಿಶ್ರೇಣಿಗಳಲ್ಲಿ ಭೋರ್ಗರೆಯುತ್ತಿರುವ ಮಳೆ ಬಯಲು ಭಾಗದ ತಾಲೂಕಿಗೂ ಆವರಿಸಿದ್ದು, ಕಳೆದ 2-3 ದಿನಗಳಿಂದ ಎಡಬಿಡದೆ ಸುರಿದ ಪುನರ್ವಸು ಜಿಟಿಜಿಟಿ ಮಳೆ ತೆಂಗು-ಅಡಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿ ಮಲೆನಾಡಿನ ವಾತಾವರಣವನ್ನೆ ಸೃಷ್ಟಿಸಿದೆ.ಕಳೆದ ವಾರ ಮೋಡ ಕವಿದಿದ್ದರೂ ನಿರೀಕ್ಷಿತ ಮಟ್ಟದ ಮಳೆಯಾಗಿರಲಿಲ್ಲ. ಬಳಿಕ 3-4 ದಿನಗಳಿಂದ ರಾತ್ರಿ ಇಡೀ ಸುರಿದ ಮಳೆ ಭೂಮಿಯನ್ನು ತಂಪಾಗಿಸಿದೆ. ಈಗಾಗಲೇ ತಾಲೂಕಿನಾದ್ಯಂತ ಸುಮಾರು ಐದು ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ಬಿತ್ತನೆ ಯಾಗಿರುವ ಈರುಳ್ಳಿ ಬೆಳೆಗೆ ಜೀವದಾನ ಪಡೆದಿದೆ. ಬಿತ್ತಿದ ಈರುಳ್ಳಿಯ ಕಳೆ ಕೀಳುವ, ಗೊಬ್ಬರ ಹಾಕುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ. ಇಲ್ಲಿನ ಪ್ರಮುಖ ಬೆಳೆಯಾದ ತೆಂಗು ಮತ್ತು ಅಡಕೆಗೆ ಕಳೆದ ವರ್ಷದ ಬರಗಾಲ ಆತಂಕ ತಂದೊಡ್ಡಿತ್ತು. ಕಡೂರು ತಾಲೂಕು ಒಂದರಲ್ಲೆ ಸುಮಾರು 3500 ಎಕರೆ ಪ್ರದೇಶದಲ್ಲಿ ಅಡಕೆ ಗಿಡ ಹೊಸದಾಗಿ ನಾಟಿ ಮಾಡಲಾಗಿತ್ತು. ಪೂರ್ವ ಮುಂಗಾರು ಉತ್ತಮವಾಗಿ ಸುರಿದರೂ ಮತ್ತೆ ಬಾರದ ಮಳೆ ಈ ಬಾರಿಯೂ ಕೈಕೊಡುತ್ತದೆ ಎಂಬ ಆತಂಕದಲ್ಲಿದ್ದಾಗಲೇ ನಿರಂತರ ಸುರಿದ ಪುನರ್ವಸು ಮಳೆ ರೈತರಲ್ಲಿ ಆಶಾಭಾವ ತುಂಬಿದೆ.ಆರಂಭಿಕ ಮುಂಗಾರು ಮಳೆ ವಿಫಲವಾಗಿ ತಾಲೂಕಿನಲ್ಲಿ ವಾಣಿಜ್ಯ ಬೆಳೆಯಾದ ಹತ್ತಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಯಾಗಿಲ್ಲ. ಆದರೆ ಈರುಳ್ಳಿಯನ್ನು ಗಣನೀಯ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. 663 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಇನ್ನುಳಿದಂತೆ ರಾಗಿ ಬಿತ್ತನೆಯಾಗಬೇಕಿದೆ. ಅದಕ್ಕೆ ಪೂರಕವಾಗಿ ಉತ್ತಮ ಮಳೆಯಾಗುತ್ತಿದೆ.ತಾಲೂಕಿನಾದ್ಯಂತ ಶುಕ್ರವಾರ ಸುರಿದ ಮಳೆಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ತರೀಕೆರೆ ಉಪವಿಭಾಗಾಧಿಕಾರಿ ಡಾ. ಕಾಂತರಾಜ್ ರಜೆ ನೀಡಲು ಆದೇಶಿಸಿದರು. ಶಾಲೆಗಳಿಗೆ ರಜೆ ಹಿನ್ನಲೆಯಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಧಾವಂತದಲ್ಲಿದ್ದ ಪೋಷಕರು ನಿರಾಳರಾದರು. ಕೆರೆಕಟ್ಟೆಗಳಿಗೆ ಪುನಶ್ಚೇತನ:ಉತ್ತಮ ಮಳೆಯಾದರೂ ತಾಲೂಕಿನಲ್ಲಿ ಹಳ್ಳಗಳು ತುಂಬಿ ಹರಿಯುವಷ್ಟು ಆಗಿಲ್ಲ. ತಾಲೂಕಿನ 2 ನದಿಗಳಾದ ವೇದಾ ಮತ್ತು ಆವತಿ (ಮುಂದೆ ಎರಡೂ ಸಂಗಮಿಸಿ ವೇದಾವತಿ) ನದಿಗಳು ಇನ್ನೂ ಹರಿಯಲಾರಂಭಿಸಿಲ್ಲ. ಗಿರಿಶ್ರೇಣಿಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜೀವನಾಡಿಯಾದ ಮದಗದ ಕೆರೆ- ಅಯ್ಯನ ಕೆರೆಗಳಲ್ಲಿ ನೀರು ಹರಿದು ಬರುತ್ತಿ ರುವುದು ರೈತರಲ್ಲಿ ಬದುಕಿನ ಭರವಸೆ ಹೆಚ್ಚಿಸಿದೆ. ಮದಗದಕೆರೆಗೆ ನೀರು ಹರಿದು ಬರುವ ದೃಶ್ಯ ಕಣ್ತುಂಬಿಕೊಳ್ಳಲು ರೈತರು ಭೇಟಿ ನೀಡುತ್ತಿದ್ದು ನೀರಿನ ಏರಿಕೆ ಪ್ರಮಾಣದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಮದಗದಕೆರೆ ಗಾಳಿ ಮಳೆಗೆ ತುಂಬುವ ಕೆರೆಯೆಂದೇ ಪ್ರಸಿದ್ಧಿ ಪಡೆದಿದ್ದು, ಈ ಕೆರೆ ಪೂರ್ಣ ಮಟ್ಟ 65 ಅಡಿ. ಶುಕ್ರವಾರ ದವರೆಗಿನ ನೀರಿನ ಮಟ್ಟ 48 ಅಡಿ ಇತ್ತು. ಇದೇ ಮಳೆ ಮುಂದುವರಿದರೆ ನಾಲ್ಕೈದು ದಿನಗಳಲ್ಲಿ ಕೆರೆ ಭರ್ತಿಯಾಗಿ ಕೋಡಿ ಹರಿವ ಸಾಧ್ಯತೆ ಹೆಚ್ಚಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಭಿಯಂತರ ಮಂಜುನಾಥ್ ಪತ್ರಿಕೆಗೆ ಪ್ರತಿಕ್ರಯಿಸಿದರು.ಇನ್ನು ಸಖರಾಯಪಟ್ಟಣ ಹೋಬಳಿ ಭಾಗದ ಅಯ್ಯನಕೆರೆ 36 ಅಡಿಯಿದ್ದು, ಪ್ರಸ್ತುತ 22 ಅಡಿ ತುಂಬಿದೆ. ಕೆರೆ ವಿಸ್ತಾರ ವಾಗಿ ರುವುದರಿಂದ ಪೂರ್ಣ ತುಂಬಲು ಸುಮಾರು 10-12 ದಿನವಾಗುವ ನಿರೀಕ್ಷೆಯಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ದಯಾಶಂಕರ್ ಪ್ರತಿಕ್ರಿಯಸಿದರು. ಇದೀಗ ಎರಡೂ ಕೆರೆಗಳು ತುಂಬಿಕೋಡಿ ಹರಿದರೆ ವೇದಾವತಿ ನದಿ ಜೀವಕಳೆ ಪಡೆಯಲಿದೆ. ಮಳೆಯ ಪ್ರಮಾಣ ಈ ಭಾಗಕ್ಕೆ ಅವಶ್ಯಕತೆ ಇದೆ.