ಸಾರಾಂಶ
ಸಮೀಪದ ರನ್ನಬೆಳಗಲಿ ಸರಹದ್ದಿನ ಪೆಂಡಾರಿ ಮಲ್ಲಾ ತೋಟದ ಶೆಡ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಸಂಬಂಧಿಸಿದಂತೆ ಗುರುವಾರ ಮತ್ತೊಬ್ಬ ಅಸುನೀಗಿದ್ದು, ಈ ಮೂಲಕ ಮೃತರ ಸಂಖ್ಯೆ ಮೂರಕ್ಕೇರಿದೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ರನ್ನಬೆಳಗಲಿ ಸರಹದ್ದಿನ ಪೆಂಡಾರಿ ಮಲ್ಲಾ ತೋಟದ ಶೆಡ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಸಂಬಂಧಿಸಿದಂತೆ ಗುರುವಾರ ಮತ್ತೊಬ್ಬ ಅಸುನೀಗಿದ್ದು, ಈ ಮೂಲಕ ಮೃತರ ಸಂಖ್ಯೆ ಮೂರಕ್ಕೇರಿದೆ.ಘಟನೆಯಲ್ಲಿ ಅರ್ಧ ಬೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಭಾನ್ ದಸ್ತಗಿರಸಾಬ್ ಪೆಂಡಾರಿ (27) ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಘಟನೆ ನಡೆದ ದಿನ ಐವರಲ್ಲಿ ಜೈಬುನ್ ದಸ್ತಗಿರಸಾಬ ಪೆಂಡಾರಿ (55), ಮಗಳಾದ ಶಬಾನಾ ದಸ್ತಗಿರಸಾಬ ಪೆಂಡಾರಿ (26) ಸ್ಥಳದಲ್ಲೇ ಮೃತಪಟ್ಟಿದ್ದರು. ದಸ್ತಗಿರನ ಮೊಮ್ಮಗ (ಮಗಳ ಮಗ)ಸಿದ್ಧಿಕ್ ಶೌಕತ್ ಪೆಂಡಾರಿ ಅದೃಷ್ಟವಶಾತ್ ಶೆಡ್‌ನಿಂದ ಪಾರಾಗಿದ್ದ. ದಸ್ತಗಿರಸಾಬ ಪೆಂಡಾರಿ ಮತ್ತು ಹಿರಿಯ ಮಗ ಸುಭಾನ್ ಪೆಂಡಾರಿ(27) ಸುಟ್ಟ ಗಾಯಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿದ್ದರು. ಸುಭಾನ್ ಪೆಂಡಾರಿ ದೇಹ ಶೇ.80 ರಷ್ಟು ಸುಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳವಾರ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಅಲ್ಲಿಯೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಗುರುವಾರ ನಸುಕಿನ ಜಾವ 3 ಗಂಟೆಗೆ ಸುಭಾನ್ ಮೃತನಾಗಿದ್ದಾನೆ.
ಲೋಕಾಪುರ ಠಾಣೆಯ ಠಾಣಾಧಿಕಾರಿ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಪೆಂಡಾರಿ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಪೆಂಡಾರಿ ಕುಟುಂಬದ ಹಿರಿಯ ದಸ್ತಗಿರಸಾಬ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು, ಗುರುವಾರ ಪೊಲೀಸರು ವಿಚಾರಣೆಗಾಗಿ ಮತ್ತೆ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಅವರ ತೋಟದ ಸುತ್ತಮುತ್ತ ಮೊಲ ಬೇಟೆಯಾಡುತ್ತಿದ್ದ ವ್ಯಕ್ತಿಯೋರ್ವನ ಬ್ಯಾಟರಿ ಸಿಕ್ಕಿದ್ದರಿಂದ ಆತನನ್ನೂ ವಿಚಾರಣೆಗೆ ಕರೆದೋಯ್ದಿದ್ದಾರೆ ಎನ್ನಲಾಗಿದೆ.