ಸಾರಾಂಶ
ಕಳೆದ 2 ದಿನಗಳಿಂದ ಮೋಡದ ವಾತಾವರಣ ಇದ್ದರೂ ಮಳೆ ಬಂದಿರಲಿಲ್ಲ. ಆದರೆ, ಗುರುವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಪ್ರಾರಂಭವಾಗಿ ಸಂಜೆಯವರೆಗೂ ಬಿಟ್ಟು, ಬಿಟ್ಟೂ ತುಂತುರು ಮಳೆ ಮುಂದುವರಿದಿದ್ದರಿಂದ ಅಡಿಕೆ ಕೊಯ್ಲಿಗೆ ತೀವ್ರ ತೊಂದರೆಯಾಗಿದೆ
ಬೆಳಿಗ್ಗೆಯಿಂದಲೇ ಸಂಜೆಯವರೆಗೂ ನಿರಂತರ ಸುರಿದ ಮಳೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಅಕಾಲಿಕ ತುಂತುರು ಮಳೆ, ಮೋಡದ ವಾತಾವರಣ ಮುಂದುವರಿದಿದ್ದು ಅಡಿಕೆ ಕೊಯ್ಲಿಗೆ ತೀವ್ರ ತೊಂದರೆಯಾಗಿದೆ.
ಕಳೆದ 2 ದಿನಗಳಿಂದ ಮೋಡದ ವಾತಾವರಣ ಇದ್ದರೂ ಮಳೆ ಬಂದಿರಲಿಲ್ಲ. ಆದರೆ, ಗುರುವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಪ್ರಾರಂಭವಾಗಿ ಸಂಜೆಯವರೆಗೂ ಬಿಟ್ಟು, ಬಿಟ್ಟೂ ತುಂತುರು ಮಳೆ ಮುಂದುವರಿದಿತ್ತು. ತಾಲೂಕಿನಲ್ಲಿ ಈಗ ಅಡಿಕೆ ಕೊಯ್ಲು ಬಿರುಸಿನಿಂದ ನಡೆಯುತ್ತಿದೆ. ಬಹುತೇಕ ಗ್ರಾಮಗಳಲ್ಲಿ 1ನೇ ಅಡಿಕೆ ಕೊಯ್ಲು ಮುಗಿಸಿ, 2 ನೇ ಅಡಿಕೆ ಕೊಯ್ಲು ನಡೆಯುತ್ತಿದೆ. ಕಳೆದ 3 ದಿನಗಳಿಂದ ಸರಿಯಾಗಿ ಬಿಸಿಲು ಇಲ್ಲದೆ ಅಡಿಕೆ ಒಣಗಿಸಲು ತೊಂದರೆಯಾಗುತ್ತಿದೆ. ಬೇಯಿಸಿದ ಅಡಿಕೆಗೆ ಬಿಸಿಲು ಇಲ್ಲದೆ ಇದ್ದರೆ ಅಡಿಕೆಗೆ ಬೂಸ್ಟ್ ಬರಲಿದೆ. ಅಡಿಕೆ ಬೆಳೆಗಾರರು ಒಂದೆರಡು ದಿನ ನೋಡಿ ಡ್ರೈಯರ್ ಅಥವಾ ಹೊಗೆ ತಟ್ಟಿ ಮೂಲಕ ಅಡಿಕೆ ಒಣಗಿಸಲಿದ್ದಾರೆ. ಬತ್ತಕ್ಕೆಸ್ವಲ್ಪ ಹಾನಿ: ತಾಲೂಕಿನಲ್ಲಿ ಶೇ.90 ರಷ್ಟು ಬತ್ತದ ಗದ್ದೆ ಕಟಾವು ಮುಗಿಸಿ ಕಣದಲ್ಲಿ ಬತ್ತದ ಕುತ್ತರಿ ಹಾಕಿದ್ದರಿಂದ ಬತ್ತ ಬೆಳೆಯುವ ರೈತರಿಗೆ ತೀವ್ರ ತೊಂದರೆಯಾಗಿಲ್ಲ. ಆದರೆ, ಶೇ.10 ರೈತರು ಈಗ ಬತ್ತದ ಗದ್ದೆ ಕಟಾವು ಮಾಡಿದ್ದು ಮಳೆಯಿಂದ ಅವರಿಗೆ ತೊಂದರೆಯಾಗಿದೆ. ಕೆಲವು ಗ್ರಾಮಗಳಲ್ಲಿ ರೈತರು ಕಣದಲ್ಲಿ ಬತ್ತದ ಒಕ್ಕಲಾಟ ಮಾಡುತ್ತಿರುವುದರಿಂದ ಸ್ವಲ್ಪ ಭಾಗ ಹಾನಿಯಾಗಿದೆ. ಕಾಫಿಗೂ ಹಾನಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಫಿ ಹಣ್ಣು ಕೊಯ್ದು ಕಾಫಿ ಕಣದಲ್ಲಿ ಒಣಗಿಸ ಲಾಗುತ್ತಿದ್ದು ಮಳೆಯಿಂದ ಕಾಫಿ ಬೀಜಕ್ಕೆ ಹಾನಿಯಾಗುತ್ತಿದೆ. ಪ್ರಸ್ತುತ ಕಾಫಿ ಹಣ್ಣು ಕೊಯ್ಯುವ ಕಾಲ ಪ್ರಾರಂಭ ವಾಗಿದ್ದು ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಮತ್ತೆ ಹೂ ಬರಲಿದೆ. ಕಾಫಿ ಹಣ್ಣು ಇದ್ದಂತೆ ಹೂ ಬಂದರೆ ಹಣ್ಣು ಕೊಯ್ಯುವಾಗ ಕಾಫಿ ಹೂ ಗೆ ಹಾನಿಯಾಗಿ ಮುಂದಿನ ಕಾಫಿ ಫಸಲು ಕಡಿಮೆಯಾಗಲಿದೆ ಎಂಬುದು ಕಾಫಿ ಬೆಳೆಗಾರರ ಆತಂಕವಾಗಿದೆ.