ಹೊನ್ನಾವರದಲ್ಲಿ ಮಳೆ ಇಳಿಮುಖ

| Published : Jul 27 2025, 12:01 AM IST

ಸಾರಾಂಶ

ಶುಕ್ರವಾರ ಭರ್ಜರಿ ಮಳೆ ಬಿದ್ದಿತ್ತು. ಆದರೆ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗದ್ದರಿಂದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ಹೊನ್ನಾವರ: ತಾಲೂಕಿನಲ್ಲಿ ಶುಕ್ರವಾರ ಭರ್ಜರಿ ಮಳೆ ಬಿದ್ದಿತ್ತು. ಆದರೆ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗದ್ದರಿಂದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಶುಕ್ರವಾರ ಭರ್ಜರಿ ಮಳೆ ಉಂಟಾದ ಕಾರಣ ನೆರೆಹಾವಳಿ ಉಂಟಾಗಿತ್ತು. ತಾಲೂಕಿನಲ್ಲಿ ಶನಿವಾರ ಮಳೆಯ ಪ್ರಮಾಣ ಕಡಿಮೆ ಇದ್ದರೂ ಸಹ ಮುಂಜಾಗ್ರತೆಯ ಸಲುವಾಗಿ ಕಾಳಜಿ ಕೇಂದ್ರದಲ್ಲಿ ಜನರನ್ನು ಇಟ್ಟುಕೊಳ್ಳಲಾಗಿದೆ.

ಒಟ್ಟು ೯ ಕಡೆಯಲ್ಲಿ ಕಾಳಜಿ ಕೇಂದ್ರ ಮುಂದುವರಿಸಲಾಗಿದ್ದು, ಸುಮಾರು ೩೬೮ ಜನರು ಈ ಕಾಳಜಿ ಕೇಂದ್ರದಲ್ಲಿ ಆಶ್ರಯವನ್ನು ಪಡೆದಿದ್ದಾರೆ.

ಶುಕ್ರವಾರ ಸುರಿದ ಭಾರಿ ಮಳೆಯ ಕಾರಣ ಹಳ್ಳದ ನೀರಿನ ಹರಿವಿನಲ್ಲಿ ಬಿದ್ದು ಮರಣ ಹೊಂದಿದ ಮಂಕಿ ಹೊಬಳಿಯ ತುಂಬೆಬೀಳು ಗ್ರಾಮದ ಜನಾರ್ಧನ ರಾಮ ಮರಾಠಿ ರವರ ಮನೆಗೆ ಮಾನ್ಯ ತಹಶೀಲ್ದಾರ್ ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೂ ಸ್ಥಳ ಪರಿಶೀಲನೆ ನಡೆಸಿದರು. ಪಿಎಸ್ಐ ಮಂಕಿ, ಕಂದಾಯ ನಿರೀಕ್ಷಕ ಮಂಕಿ, ಗ್ರಾಮ ಆಡಳಿತ ಅಧಿಕಾರಿ ಇದ್ದರು.

ಇನ್ನು ಮಲ್ಲಾಪುರ ಗ್ರಾಮದ ಗೀತಾ ರಾಮ ಭೋವಿ ವಾಸ್ತವ್ಯದ ಮನೆಯ ಮೇಲೆ ಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ.

ತಾಲೂಕಿನ ಸಾಲಕೋಡ ಗ್ರಾಮದ ಕೊಂಡಾಕುಳಿ ಮಜರೆಯಲ್ಲಿನ ಜಂಗಾ ಜಟ್ಟು ಗೌಡರವರ ಮನೆಯ ಹಿಂಭಾಗದ ಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು, ಮನೆಯು ಮಣ್ಣಿನದ್ದಾಗಿದ್ದು, ಇನ್ನು ಕುಸಿಯುವ ಹಂತದಲ್ಲಿ ಇರುತ್ತದೆ, ಕಾರಣ ಸುರಕ್ಷತೆಯ‌ ದೃಷ್ಟಿಯಿಂದ ಸಂಬಂಧಿಕರ ಮನೆಗೆ ತೆರಳುವಂತೆ ಇಲ್ಲವೇ ಕಾಳಜಿ ಕೇಂದ್ರಕ್ಕೆ ಬರುವಂತೆ ತಿಳಿಸಲಾಯಿತು.

ಶಾಂತರಾಮ್ ಭಟ್ ಮುಗ್ವಾ ಅವರ ಮಣ್ಣಿನ ಗೋಡೆಯು ಗಾಳಿ ಹಾಗೂ ಮಳೆಯಿಂದಾಗಿ ಕುಸಿದು ಹಾನಿಯಾಗಿದೆ. ಯಾವುದೇ ಜನಜಾನುವಾರುಗಳಿಗೆ ಹಾನಿಯಾಗಿಲ್ಲ.

ಹಡಿನಬಾಳ ಗ್ರಾಮದಿಂದ ಚಿಕ್ಕನಕೋಡ ಗ್ರಾಮಕ್ಕೆ ಮಾರ್ಗವಾಗಿ ಹೋಗುವ ರಸ್ತೆಯ ಅಕ್ಕ-ಪಕ್ಕದಲ್ಲಿರುವ ಅರಣ್ಯ ಜಾಗದಲ್ಲಿರುವ ಧರೆಯು ಸ್ವಲ್ಪ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಪ್ರಕೃತಿ ವಿಕೋಪದ ನೋಡಲ್ ಅಧಿಕಾರಿಗಳು ಗ್ರಾಪಂ ಚಿಕ್ಕನಕೋಡ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಮಳೆಯ ಕಾರಣ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಧರೆ ಕುಸಿತ ಉಂಟಾಗಬಹುದಾದ ಸಂಭವವಿದೆ. ಚಿಕ್ಕನಕೋಡ ಗ್ರಾಮವನ್ನು ಒಳಗೊಂಡಂತೆ ಹೆರಾವಲಿ, ಜನ್ನಕಡ್ಕಲ ಗ್ರಾಮಗಳಿಗೆ ಇದೊಂದೇ ರಸ್ತೆ ಮಾರ್ಗವಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಿ ಇಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಮನವಿ ಮಾಡಲಾಗಿದೆ.

ಗ್ರಾಪಂ ಮಂಕಿ ಚಿತ್ತಾರ ವ್ಯಾಪ್ತಿಯ ಅಡಿಕೆಕುಳಿ ಗ್ರಾಮದ ತಿಮ್ಮಪ್ಪ ನಾರಾಯಣ್ ನಾಯ್ಕ್ ಅವರ ಮನೆಯ ಪಕ್ಕ ಗುಡ್ಡ ಕುಸಿದಿದೆ. ಸ್ಥಳಕ್ಕೆ ಭೇಟಿ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟಿಸ್ ನೀಡಿ ಪಕ್ಕದಲ್ಲಿ ಇರುವ ಇನ್ನೊಂದು ಮನೆಗೆ ಸ್ಥಳಾಂತರಿಸಲಾಯಿತು.

ಹೇರಂಗಡಿ ಗ್ರಾಮದ ರವಿ ಕೇಶ ಗೌಡ ಅವರ ಮನೆಯೂ ಗಾಳಿ ಹಾಗೂ ಮಳೆಯಿಂದಾಗಿ ಮಣ್ಣಿನ ಮನೆಯ ಗೋಡೆಗಳು ಸಂಪೂರ್ಣ ಹಾನಿ ಆಗಿದೆ. ಯಾವುದೇ ಜನ ಜಾನುವಾರುಗಳಿಗೆ ಹಾನಿಯಾಗಿಲ್ಲ.

ತಾಲೂಕಿನಲ್ಲಿ ಉಂಟಾದ ವರುಣಾಘಾತಕ್ಕೆ ಜನ ತತ್ತರಿಸಿದ್ದಾರೆ. ಮಳೆಯ ತೀವ್ರತೆ ಕಡಿಮೆಯಾಗಲೆಂದು ಬೇಡಿಕೊಳ್ಳುತ್ತಿದ್ದಾರೆ.