ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮಳೆ ಆರ್ಭಟ ಮುಂದುವರೆದಿದ್ದು, ರಾಜರಾಜೇಶ್ವರಿನಗರ, ದಾಸರಹಳ್ಳಿ, ಮಹದೇವಪುರ ಸೇರಿದಂತೆ ನಗರದ ತಗ್ಗು ಪ್ರದೇಶಗಳ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮತ್ತೊಂದೆಡೆ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಿದರು.
ಭಾನುವಾರ ಬೆಳಗಿನ ಜಾವ ಸುಮಾರು 4.30ರಿಂದ ಎಡಬಿಡದೇ 6 ಗಂಟೆವರೆಗೆ ಸುರಿದು ಸ್ವಲ್ಪ ವಿರಾಮ ನೀಡಿತ್ತು. ನಂತರ ಬಿಸಿಲಿನ ವಾತಾವರಣ ನಗರದಲ್ಲಿ ಕಂಡು ಬಂತಾದರೂ ಸಂಜೆಯಿಂದ ನಗರದಲ್ಲಿ ಮಳೆ ಗುಡುಗು ಸಹಿತ ಮಳೆ ಧಾರಾಕಾರವಾಗಿ ಸುರಿಯಿತು.
ಭಾನುವಾರ ಬೆಳಗಿನ ಜಾವ ಸುರಿದ ಮಳೆಗೆ ಆರ್.ಆರ್.ನಗರದ ನಾಗದೇವನಹಳ್ಳಿ ಬಳಿಯ ರಾಮನಾಥನಗರ ಬಡಾವಣೆಯ ಸುಮಾರು 25 ಮನೆಗಳಿಗೆ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗಿ, ನಿವಾಸಿಗಳು ಪರದಾಡಿದರು. ರೂಪೇನಗರ ಲೇಔಟ್‌ನ 10ಕ್ಕೂ ಅಧಿಕ ಮನೆಗೆ ಹಾಗೂ ಬಿಇಎಂಲ್ ಲೇಔಟ್‌ನ ಹಲವು ಮನೆ ನೀರು ನುಗ್ಗುವುದರೊಂದಿಗೆ ರಸ್ತೆ ಬದಿ ಮತ್ತು ನೆಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಬೈಕ್ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.
ಬನಶಂಕರಿ 6ನೇ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ಸುಮಾರು 10 ಅಡಿಯಷ್ಟು ತಡೆಗೋಡೆ ಕುಸಿತ ಉಂಟಾಗಿದ್ದು, ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಇನ್ನು ಮಹದೇವಪುರದ ಸಾಯಿ ಲೇಔಟ್‌ನ ಜನರ ಗೋಳನ್ನು ಕೇಳುವವರಿಲ್ಲದಂತಾಗಿದೆ. ಭಾನುವಾರ ಬೆಳಗಿನ ಜಾವ ಸುರಿದ ಮಳೆಗೆ ಮತ್ತೆ ಸಾಯಿ ಲೇಔಟ್ ಮತ್ತೆ ಜಲಾವೃತಗೊಂಡಿತ್ತು.
ಕೊಮ್ಮಘಟ್ಟದ ಭೈರಹಳ್ಳಿಯ ಹಾಲೋ ಬ್ಲಾಕ್ ಫ್ಯಾಕ್ಟರಿಗೆ ಮಳೆ ನೀರು ನುಗ್ಗಿದೆ. ಈ ವೇಳೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಹಾರ, ರಾಯಚೂರು ಮೂಲದ ಕೂಲಿ ಕಾರ್ಮಿಕರ ಶೆಡ್‌ಗೆ ಮಳೆ ನೀರು ನುಗ್ಗಿದೆ. ಸುಮಾರು 3 ಅಡಿಯಷ್ಟು ನೀರು ನಿಂತುಕೊಂಡ ಪರಿಣಾಮ ಶಡ್‌ನಲ್ಲಿ ಇದ್ದ ಕಾರ್ಮಿಕದ ಅಗತ್ಯ ವಸ್ತುಗಳು ಹಾಗೂ ಚಿನ್ನಾಭರಣ, ಕಾರ್ಖಾನೆಯ ಕೆಲಸಕ್ಕೆ ಬಳಕೆ ಮಾಡುವ ಸಿಮೆಂಟ್ ಚೀಲ ಹಾಗೂ ಹಾಲೋ ಬ್ಲಾಕ್ ಮನೆಯಲಿದ್ದ ದಿನಸಿ ಸಾಮಾನುಗಳೆಲ್ಲ ಕೊಚ್ಚಿಕೊಂಡು ಹೋಗಿದೆ. ಸಮೀಪದ ಮಾದೇಶ್ವರ ಸ್ವಾಮಿ ದೇವಾಲಯಕ್ಕೂ ಮಳೆ ನೀರು ನುಗ್ಗಿದೆ.
ಆರ್.ಆರ್.ನಗರದ ರಾಜಶ್ರೀ ಅಪಾಟ್‌ಮೆಂಟ್ ಪಕ್ಕದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ವಾಣಿಜ್ಯ ಕಟ್ಟಡದ ತಡೆಗೋಡೆ ಕುಸಿದು ಬೆಸ್ ಮೆಂಟ್ ಒಳಗೆ ನೀರು ನುಗ್ಗಿದೆ. ಪಂಪ್ ಮೂಲಕ ನೀರು ಹೊರ ಹಾಕಲಾಯಿತು.
ಉತ್ತರಹಳ್ಳಿಯ ಶ್ರೀನಿವಾಸ ಕಾಲೋನಿಯ ಸರ್ಕಾರಿ ಶಾಲೆಗೆ ಮಳೆ ನೀರು ನುಗ್ಗಿ ಪೀಠೋಪಕರಣಗಳು, ಪುಸ್ತಕಗಳು ಹಾಳಾಗಿವೆ. ಮಳೆ ನೀರು ನುಗ್ಗಿದ್ದರಿಂದ ಕೊಠಡಿಗಳಲ್ಲಿ ಕೆಸರು ಮೆತ್ತಿಕೊಂಡಿತ್ತು. ಶಾಲೆ ಸಿಬ್ಬಂದಿ ನೀರು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ.
ಭಾನುವಾರ ಸಂಜೆ ಸುರಿದ ಮಳೆಗೆ ದಾಸರಹಳ್ಳಿಯ ಸಿದ್ದೇನಹಳ್ಳಿ ವಾರ್ಡ್ ಬಿಟಿಎಸ್ ಲೇಔಟ್‌ನ ಸುಮಾರು 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ವರದಿಯಾಗಿದೆ.
ವಾಹನ ಸವಾರರ ಪರದಾಟ
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಮಳೆ ನೀರು ಗಾಲುವೆಯಲ್ಲಿ ಭಾರೀ ಪ್ರಮಾಣ ಹೂಳು ತುಂಬಿಕೊಂಡು ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಜಂಕ್ಷನ್ ಜಲಾವೃತವಾಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳ ಪರದಾಟ ಉಂಟಾಗಿತ್ತು.
ಇನ್ನು ಮೈಸೂರು ರಸ್ತೆಯ ಜಯರಾಮ್ ದಾಸ್ ಮುಂಭಾಗ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ನಿಂತುಕೊಂಡ ಪರಿಣಾಮ ಆರ್.ಆರ್.ನಗರ ನಿಂದ ಆರ್.ವಿ ಕಾಲೇಜು ಸುಮಾರು 3 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಹಲವು ಕಡೆ ಮರ ಧರೆಗೆ
ಭಾನುವಾರ ಸಂಜೆ ಸುರಿದ ಮಳೆಗೆ ಹಲವು ಕಡೆ ಮರ ಹಾಗೂ ಮರದ ಕೊಂಬೆ ಧರೆಗುರುಳಿವೆ. ಬಿಬಿಎಂಪಿಯ ಮಾಹಿತಿ ಪ್ರಕಾರ ಸುಮಾರು 50ಕ್ಕೂ ಅಧಿಕ ಮರ ಬಿದ್ದಿವೆ, ಮರ ಹಾಗೂ ಕೊಂಬೆ ಬಿದ್ದ ಪರಿಣಾಮ ಆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಕೈ ಕೊಟ್ಟ ವಿದ್ಯುತ್
ನಗರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಹಲವು ಬಡಾವಣೆಗಳಲ್ಲಿ ಜನರು ವಿದ್ಯುತ್ ಇಲ್ಲದ ಕತ್ತಲೆಯಲ್ಲಿ ಕಾಲ ಕಳೆಯಬೇಕಾಯಿತು. ಬೆಸ್ಕಾಂನ ಸಹಾಯವಾಣಿ ಸಂಖ್ಯೆಗೆ ಜನರು ಕರೆ ಮಾಡಿದರೂ ಯಾರೊಬ್ಬರೂ ಸ್ವೀಕಾರ ಮಾಡಲಿಲ್ಲ. ಬಸವೇಶ್ಬರ ನಗರದ ಕಿಲೋಸ್ಕರ್ ಕಾಲೋನಿ ಸೇರಿದಂತೆ ಮೊದಲಾದ ಕಡೆ ವಿದ್ಯುತ್ ಸಮಸ್ಯೆ ಉಂಟಾಗಿತ್ತು.
ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆ?
ಭಾನುವಾರ ನಗರದಲ್ಲಿ ಅತಿ ಹೆಚ್ಚು ಬಾಗಲಗುಂಟೆ 5.4 ಸೆಂ.ಮೀ ಮಳೆಯಾಗಿದೆ. ಹಂಪಿನಗರ 4.9, ನಾಗಪುರ 4.7, ಶೆಟ್ಟಿಹಳ್ಳಿ 4.3, ಆರ್‌ಆರ್‌ನಗರ 4.2, ನಂದಿನಿ ಲೇಔಟ್ 4.1, ಬಸವೇಶ್ವರನಗರ 3.7, ಹೆರೋಹಳ್ಳಿ 3.6, ಮಾರುತಿನಗರ, ಚೊಕ್ಕಸಂದ್ರದಲ್ಲಿ ತಲಾ 3.4, ಕೆಂಗೇರಿ 2.8, ದೊಡ್ಡಬಿದರಕಲ್ಲು 2.7, ಪೀಣ್ಯ ಕೈಗಾರಿಕಾ ಪ್ರದೇಶ 2.5, ರಾಜಾಜಿನಗರ 2.2,ದೊರೆಸಾನಿಪಾಳ್ಯದಲ್ಲಿ 2.1 ಸೆಂ.ಮೀ ಭಾನುವಾರ ರಾತ್ರಿ 10.15ರವರೆಗೆ ಮಳೆಯಾದ ವರದಿಯಾಗಿದೆ.
ಇನ್ನು ಶನಿವಾರ ಬೆಳಗ್ಗೆ 8.30 ರಿಂದ ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿಯಲ್ಲಿ ಕೆಂಗೇರಿಯಲ್ಲಿ ಅತಿ ಹೆಚ್ಚು 14.1 ಸೆಂ.ಮೀ ಮಳೆಯಾಗಿದೆ. ಜ್ಞಾನಭಾರತಿ, ಆರ್‌ಆರ್‌ನಗರ, ನಾಯಂಡನಹಳ್ಳಿಯಲ್ಲಿ ತಲಾ 10.6 ಸೆಂ.ಮೀ ಮಳೆಯಾಗಿದೆ. ಹೆಮ್ಮೆಗೆಪುರದಲ್ಲಿ 6.7, ಬಿಳೇಕಹಳ್ಳಿ, ಸಾರಕ್ಕಿ, ಪಟ್ಟಾಭಿರಾಮನಗರದಲ್ಲಿ ತಲಾ 6.2 ಸೆಂ.ಮೀಮಳೆಯಾಗಿದೆ.
ಮತ್ತೆ ಬಾಯ್ದೆರೆದ ಗುಂಡಿಗಳು
ಕಳೆದ ಒಂದು ವಾರದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಬಿಬಿಎಂಪಿಯು ಇತ್ತಿಚಿಗೆ ಮುಚ್ಚಿದ್ದ ರಸ್ತೆಗುಂಡಿಗಳು ಮತ್ತೆ ಬಾಯ್ದೆರೆದುಕೊಂಡಿವೆ. ಮೈಸೂರು ರಸ್ತೆಯಲ್ಲಿ ಗುಂಡಿಗಳದೇ ಕಾರುಬಾರು ಆಗಿದೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳ ದರ್ಶನವಾಗಿದೆ.
)
;Resize=(128,128))
;Resize=(128,128))
;Resize=(128,128))