ಮಧುಗಿರಿಯಲ್ಲಿ ಮಳೆ ಕಣ್ಣಾಮುಚ್ಚಾಲೆಯಾಟ: ರೈತರಿಗೆ ಪರದಾಟ

| Published : Jul 02 2025, 12:24 AM IST

ಮಧುಗಿರಿಯಲ್ಲಿ ಮಳೆ ಕಣ್ಣಾಮುಚ್ಚಾಲೆಯಾಟ: ರೈತರಿಗೆ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲ ಸೂಲ ಮಾಡಿ ತಂದಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಶೇಖರಿಸಿಕೊಂಡು ಮಳೆಯ ಆಗಮನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಆದ್ರಿ ಮಳೆ ಮುಗಿಯುತ್ತಾ ಬಂದರೂ ತಾಲೂಕಿನಲ್ಲಿ ಎತ್ತ ನೋಡಿದರೂ ಮಳೆಯ ಸುಳಿವಿಲ್ಲ. ಶೇಂಗಾ, ತೊಗರಿ ಬಿತ್ತನೆ ಮಾಡಲು ಇದು ಸೂಕ್ತ ಸಕಾಲ. ಆದರೆ ಉಳುಮೆ ಮಾಡಿ ಉತ್ತಿ ಬಿತ್ತುವ ಕಾಲಕ್ಕೆ ಮಳೆ ಬಾರದ ಕಾರಣ ರೈತಾಪಿ ವರ್ಗ ಚಿಂತಜನಕವಾಗಿದೆ.ಬಹಳ ದಿನಗಳಿಂದ ಆಕಾಶದ ಮೋಡಗಳನ್ನು ನೋಡುತ್ತಾ ರೈತಾಪಿ ಜನರು ಹೊಸ ಹೊಸ ಕನಸುಗಳನ್ನು ಕಾಣುತ್ತಾ ಆಕಾಶ ಮತ್ತು ಭೂಮಿ ಕಂಡು ನಿಟ್ಟುಸಿರು ಬಿಡುತ್ತಿದ್ದಾರೆ. ಸಾಲ ಸೂಲ ಮಾಡಿ ತಂದಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಶೇಖರಿಸಿಕೊಂಡು ಮಳೆಯ ಆಗಮನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ ತಾಲೂಕಿನಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ಕೇವಲ ಶೇ. 30ರಷ್ಟು ಮಾತ್ರ ರೈತರು ಭೂಮಿ ಉಳುಮೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂಳಿದ 70 ಭೂ ಭಾಗ ಉಳುಮೆ ಮಾಡಲು ರೈತರು ಮಳೆಯಾಶ್ರಿತ ಬೆಳೆ ನಂಬಿ ಜಮೀನುಗಳನ್ನು ಉಳುಮೆ ಮಾಡಿ ವ್ಯವಸಾಯ ಮಾಡಲು ಹಿಂದೆಟು ಹಾಕುತ್ತಿದ್ದಾರೆ ಏನ್ನಲಾಗಿದೆ. ಕಾರಣ ಪೂರ್ವ ಮೂಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಸಾಲ ಮಾಡಿ ಉಳಿಮೆ ಮಾಡಿದರೂ ಬೆಳೆ ತೆಗೆಯಲು ಆಗದ ಕಾರಣ ತಾಲೂಕಿನಲ್ಲಿ ಸಾಕಷ್ಟು ಭೂ ಪ್ರದೇಶ ಬೀಳುಬಿದ್ದಿದೆ. ಇನ್ನೂ 15 ದಿನಗಳು ಮಾತ್ರ ಬಿತ್ತನೆಗೆ ಬಾಕಿಯಿದ್ದು, ಅಷ್ಟರೊಳಗೆ ಮಳೆ ಬಂದರೆ ಬಿತ್ತನೆ ಮಾಡಬಹುದು. ಇಲ್ಲವಾದರೆ ನಂತರ ಬೀಳುವ ಮಳೆಗೆ ರಾಗಿ, ಉರುಳಿ, ಕೊರಲೆ ಇಂತಹ ಒಣ ಧಾನ್ಯದ ಬೆಳೆಗಳನ್ನು ಬಿತ್ತಬಹುದು. ಪ್ರಸ್ತುತ ಸಕಾಲಕ್ಕೆ ಮಳೆ ಬಾರದ ಕಾರಣ ರೈತರು ಆರ್ಥಿಕ ಬೆಳೆಗಳಾದ ಶೇಂಗಾ, ತೊಗರಿ, ಮುಸುಕಿನ ಜೋಳ ಬಿತ್ತಲು ಸಾಧ್ಯವಾಗದೇ ರೈತರ ಮೊಗದಲ್ಲಿ ಸಂತಸದ ಹೊನಲು ಕಾಣದೆ ಕೊರಗಿ ಸೊರಗುತ್ತಿದ್ದಾನೆ.ಪ್ರಸ್ತುತ ಈ ಬಾರಿ ತಾಲೂಕಿನಲ್ಲಿ ಸುಮಾರು 30 ಸಾವಿರ ಹೇಕ್ಟೆರ್‌ ಬಿತ್ತನೆ ಗುರಿಯಿದ್ದು, ಕೃಷಿ ಇಲಾಖೆ ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿ ವಿತರಿಸಿದ್ದು ಬಿತ್ತನೆ ಬೀಜಕ್ಕೆ ಕೊರತೆಯಿಲ್ಲದಂತೆ ರೈತರಿಗೆ ಅನುಕೂಲ ಮಾಡಿದೆ. ರೈತರಿಗೆ ಇನ್ಸೂರೆನ್ಸ್ ಕಟ್ಟಲು ಜು. 31 ಕೊನೆ ದಿನವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ. ಪ್ರಸ್ತುತ ಕೆಲವು ರೈತರು ದನ ಕರುಗಳಿಲ್ಲದೆ ಉಳುಮೆ ಮಾಡಲು ಟ್ರ್ಯಾಕ್ಟರ್‌ ಆಶ್ರಯಿಸಿ ಜಮೀನುಗಳನ್ನು ಹಸನು ಮಾಡಿದ್ದಾರೆ. ಇನ್ನೂ ಕೆಲವು ರೈತರಿಗೆ ಕೃಷಿ ಚಟುವಟಿಕೆಗಳ ಪರಿಕರಗಳಿಲ್ಲದೆ ಉಳುಮೆ ಮಾಡಲಾಗದೆ ಮತ್ತು ಮಾಡದರೆ ಮಳೆ ಸಕಾಲಕ್ಕೆ ಬಾರದೇ ಕೈ ಕೊಡುತ್ತದೆ ಎಂಬ ಕಾರಣಕ್ಕೆ ಬೇಸತ್ತು ಬೇಸಾಯ ಮನೆ ಮಂದಿ ಸಾಯ ಎಂಬಂತೆ ಭೂಮಿಯನ್ನು ಬೀಳು ಬಿಟ್ಟು ಕೃಷಿ ಚಟುವಟಿಕೆ ಕೈಗೊಳ್ಳಲು ಹಿಂದೆಟು ಹಾಕುತ್ತಿದ್ದಾರೆ.