ಸಾರಾಂಶ
ರಾಂ ಅಜೆಕಾರು ಕನ್ನಡಪ್ರಭ ವಾರ್ತೆ ಕಾರ್ಕಳ
ರಾಷ್ಟ್ರೀಯ ಹೆದ್ದಾರಿ 169 ಅವೈಜ್ಞಾನಿಕ ಕಾಮಗಾರಿಯ ದುರವಸ್ಥೆಯಿಂದ ಸಾಣೂರು ಗ್ರಾಮದ ವಿವಿಧ ಕಡೆಗಳಲ್ಲಿ ಮಳೆ ನೀರು ನುಗ್ಗಿ ಕೃತಕ ನೆರೆ ಅವಾಂತರ ಸೃಷ್ಟಿಸಿದೆ.ಸಾಣೂರು ಗ್ರಾಮ ಪಂಚಾಯಿತಿಯ ಶುಂಠಿ ಗುಡ್ಡೆ ಎಂಬಲ್ಲಿ ರತ್ನಾಕರ್ ಎಂಬವರ ಮನೆಗೆ ಚರಂಡಿ ನೀರು ನುಗ್ಗಿದೆ. ಮನೆಯ ಅಂಗಳದ ಮುಂಭಾಗದಲ್ಲಿ ಇತ್ತೀಚೆಗೆ ಎರಡು ಲಕ್ಷ ರು. ಖರ್ಚು ಮಾಡಿ ನಿರ್ಮಿಸಿದ್ದ ತಡೆಗೋಡೆ ಧರಾಶಾಯಿಯಾಗಿದೆ.
ಶಾಸಕರ ಮಾತಿಗೂ ಬಗ್ಗದ ಗುತ್ತಿಗೆ ಪಡೆದ ಕಂಪನಿ:ರತ್ನಾಕರ್ ಕಾಮತ್ ಅವರ ಮನೆ ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡುವಂತೆ ಶಾಸಕ ವಿ. ಸುನಿಲ್ ಕುಮಾರ್ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗು ಕಾಮಗಾರಿ ಗುತ್ತಿಗೆ ಪಡೆದ ಕಂಪೆನಿಗೆ ನಿರ್ದೇಶನ ನೀಡಿದ್ದರು. ಆದರೆ ಗುತ್ತಿಗೆ ಪಡೆದ ಕಂಪನಿಯು ಚರಂಡಿ ನಿರ್ಮಾಣ ಮಾಡಿಲ್ಲ. ಆದರೆ ಕಾಮಗಾರಿ ದುರವಸ್ಥೆಯಿಂದ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿ ಸಾರ್ವಜನಿಕರಿಗೆ ಸಾಗಲು ಕಷ್ಟ ವಾಗುತ್ತಿದೆ.
ಸಾಣೂರು ಗ್ರಾ.ಪಂ. ಅಧ್ಯಕ್ಷರಾದ ಯುವರಾಜ್ ಜೈನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು, ಹೆದ್ದಾರಿ ಹೋರಾಟ ಸಮಿತಿ ಪ್ರಮುಖರು ಹಾಗೂ ಮಾಜಿ ಗ್ರಾ.ಪಂ. ಅಧ್ಯಕ್ಷ ಸಾಣೂರು ನರಸಿಂಹ ಕಾಮತ್, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂತೋಷ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.ಯಾವುದೇ ಮನವಿ, ಒತ್ತಾಯಕ್ಕೆ ಸ್ಪಂದಿಸದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯ ವಿರುದ್ಧ ಪೊಲೀಸ್ ಕೇಸ್ ದಾಖಲಿಸುವ ಮತ್ತು ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ ಕಾನೂನು ಹೋರಾಟ ನಡೆಸುವುದಾಗಿ ನಿರ್ಧರಿಸಲಾಗಿದೆ. ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಜನರ ದೂರು ಪಂಚಾಯಿತಿ ಆಡಳಿತಕ್ಕೆ ಬರುತ್ತಿದ್ದು, ಬೇಸತ್ತಿರುವ ಪಂಚಾಯಿತಿ ಆಡಳಿತ ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯವರು ರತ್ನಾಕರ್ ಕಾಮತ್ ಅವರಿಗೆ ಆಗಿರುವ ನಷ್ಟ ಪರಿಹಾರದ ಜೊತೆಗೆ, ಮುಂದೆ ಅವರ ಮನೆಗೆ ಮಳೆ ನೀರು ನುಗ್ಗದಂತೆ ರಸ್ತೆ ಬದಿಯಲ್ಲಿ ಶಾಶ್ವತವಾದ ಚರಂಡಿ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಾಣೂರು ನರಸಿಂಹ ಕಾಮತ್ ಹೇಳಿದರು.
ಕೂಡಲೇ ಹೆದ್ದಾರಿ ವಿನ್ಯಾಸಗಾರರು ಮತ್ತು ಸಲಹೆಗಾರರನ್ನು ಕಳುಹಿಸಿಕೊಟ್ಟು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದಿಲೀಪ್ ಬಿಲ್ಡ್ ಕಾನ್ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ತಿಳಿಸಿದರು.