ಸಾರಾಂಶ
ವಾಡಿಕೆ ಗುರಿ ಮುಟ್ಟಿದ ಮಳೆ । ಬರ ಪೀಡಿತ ತಾಲೂಕಲ್ಲಿ ಮಳೆ ಎದುರು ನೋಡುತ್ತಿರುವ ಅನ್ನದಾತ
ಆರ್. ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಪಂಚನದಿಗಳ ತವರೂರು ಸೇರಿದಂತೆ ಜಿಲ್ಲೆಯ 8 ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದವು. ಆದರೆ, ಈ ಬಾರಿ ಹಿಂಗಾರು ಹಾಗೂ ಈಗಾಗಲೇ ಒಂದು ತಿಂಗಳು ಪೂರೈಸಿರುವ ಮುಂಗಾರು ಮಳೆಯ ಚಿತ್ರಣ ನೋಡಿದರೆ ಮಳೆಯ ಕಣ್ಣಾ ಮುಚ್ಚಲೆ ಆಟ ರೈತರ ಪಾಲಿಗೆ ಸಂಕಟವಾಗಿದೆ.ಮಲೆನಾಡಿನಲ್ಲಿ ಕಳೆದ 3-4 ದಶಕಗಳ ಹಿಂದೆ ಬಯಲುಸೀಮೆ ಮಂದಿ ಇಲ್ಲಿಗೆ ಕಾಲಿಡಲು ಭಯಪಡುತ್ತಿದ್ದರು. ವರ್ಷದ 7 - 8 ತಿಂಗಳು ನಿರಂತರವಾಗಿ ಮಳೆ ಸುರಿಯುತ್ತಿತ್ತು. ಬಯಲುಸೀಮೆಯವರು ಮಲೆನಾಡಿನೊಂದಿಗೆ ನೆಂಟಸ್ಥಿಕೆ ಮಾಡಿ ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ, ಈ ರೀತಿಯ ಚಿತ್ರಣ ಬದಲಾಗಿ ಸುಮಾರು ಎರಡು ದಶಕ ಕಳೆದಿದೆ.
ಈ ವರ್ಷದಲ್ಲಿ ಈಗಾಗಲೇ ತನ್ನ ಅವಧಿಯನ್ನು ಪೂರೈಸಿರುವ ಹಿಂಗಾರು ಹಾಗೂ ಒಂದು ತಿಂಗಳು ಪಯಣ ಮುಗಿಸಿರುವ ಮುಂಗಾರು ಮಳೆ ಪ್ರಮಾಣ ನೋಡಿದರೆ ರೈತರು ನಿರೀಕ್ಷೆ ಮಾಡಿದಷ್ಟು ಬಂದಿಲ್ಲ. ಈವರೆಗೆ ಬಿತ್ತನೆಯಲ್ಲಿ ಶೇ. 14 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯ ಮಲೆನಾಡಿನಲ್ಲಿ ಭಾರೀ ಇಲ್ಲದೆ ಹೋದರೂ ಆಗಾಗ ಸಾಧಾರಣ ಮಳೆ ಬರುತ್ತಿದೆ. ಆದರೆ, ಕಳೆದ ವರ್ಷ ಬರಗಾಲದ ಪಟ್ಟಿಯಲ್ಲಿದ್ದ ಅಜ್ಜಂಪುರ, ತರೀಕೆರೆ ಹಾಗೂ ಕಡೂರು ತಾಲೂಕಿನಲ್ಲಿ ಮಳೆ ಕೈ ಕೊಟ್ಟಿದೆ. ಮುಸುಕಿನ ಜೋಳ, ಬಿಳಿ ಜೋಳ ಬಿತ್ತನೆ ಮಾಡಲು ಈಗಾಗಲೇ ಒಂದು ಸಾಲಿನ ಉಳುಮೆ ಮಾಡಿ ಹದಕ್ಕಾಗಿ ಮಳೆಯನ್ನೆ ಕಾಯುತ್ತಿದ್ದಾರೆ. ಮಳೆ ಬದಲಿಗೆ ಪ್ರತಿದಿನ ರೈತರು ಬಿಸಿಲು ಕಾಣುತ್ತಿದ್ದಾರೆ.ಬಿತ್ತನೆ ಸ್ಥಿತಿಗತಿ:ಹಿಂಗಾರಿನಲ್ಲಿ ಭತ್ತ, ರಾಗಿ, ಜೋಳ, ಸ್ಥಳೀಯ ಜೋಳ, ಮುಸುಕಿನ ಜೋಳ ಸೇರಿದಂತೆ ಏಕದಳ ಬೆಳೆಯ ಬಿತ್ತನೆಯಲ್ಲಿ ಈ ವರ್ಷ 80,475 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಈವರೆಗೆ 5,426 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅಂದರೆ, ಶೇ. 7 ರಷ್ಟು ಮಾತ್ರ ಗುರಿ ತಲುಪಲಾಗಿದೆ.
ಹುರುಳಿ, ಉದ್ದು, ಅಲಸಂದೆ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ 7,850 ಹೆಕ್ಟೇರ್ ಬಿತ್ತನೆಯ ಗುರಿ ಇದ್ದು, 3,601 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ. 46 ರಷ್ಟು ಪ್ರಗತಿ ಸಾಧಿಸಲಾಗಿದೆ. ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ ಎಣ್ಣೆ ಕಾಳು ಬಿತ್ತನೆಯಲ್ಲಿ 7,550 ಹೆಕ್ಟೇರ್ ಗುರಿ ಇದ್ದು, 3,772 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅಂದರೆ, ಶೇ. 50 ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂಗಾರಿನಲ್ಲಿ 98,300 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದ ಲಾಗಿದ್ದು, ಈವರೆಗೆ 14,155 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಶೇ. 14 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ.ಮಳೆಯ ಏರುಪೇರು:ಕಳೆದ ಮಾರ್ಚ್ 1 ರಿಂದ ಮೇ 31ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 160 ಮಿ.ಮೀ., ಬಂದ ಮಳೆ 265 ಮಿ.ಮೀ. ಅಂದರೆ, ಹಿಂಗಾರಿನಲ್ಲಿ ವಾಡಿಕೆಗೂ ಮೀರಿ ಮಳೆ ಬಂದಿದೆ. ಆದರೆ, ವಾಸ್ತವವಾಗಿ ನಿಗದಿತ ಸಮಯಕ್ಕೆ ಮಳೆ ಬಂದಿಲ್ಲ, ನಾಲ್ಕೈದು ದಿನ ಸತತವಾಗಿ ಮಳೆ ಬಂದು ನಂತರದಲ್ಲಿ ಕೈ ಕೊಟ್ಟಿದೆ. ಹಾಗಾಗಿ ವಾಡಿಕೆ ಗಡಿ ದಾಟಿದೆ. ಈ ಕಾರಣ ದಿಂದಲೇ ಎಣ್ಣೆ ಕಾಳು ಬೆಳೆ ಬಿತ್ತನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
ಜೂನ್ 1 ರಿಂದ 29 ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 310 ಮಿ.ಮೀ., ಆದರೆ, ಈ ಅವಧಿಯಲ್ಲಿ ಬಂದಿರುವ ಮಳೆ 187 ಮಿ.ಮೀ. ಅಂದರೆ, ಶೇ. 40 ರಷ್ಟು ಮಳೆ ಕೊರತೆಯಾಗಿದೆ. ಮಳೆ ಏರುಪೇರುನಿಂದಾಗಿ ಬಿತ್ತನೆಯಲ್ಲೂ ಏರು ಪೇರಾಗಿದೆ. ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸಕಾಲದಲ್ಲಿ ಜಿಲ್ಲೆಯ ಮಲೆನಾಡು ಮಾತ್ರವಲ್ಲ, ಬಯಲು ಸೀಮೆಯಲ್ಲೂ ಬಂದಿಲ್ಲ. ಕಳೆದ ಒಂದು ವಾರದಲ್ಲಿ ಮಳೆಯ ಪ್ರಮಾಣದಲ್ಲಿ ಶೇ. 25 ರಷ್ಟು ಕೊರತೆ ಉಂಟಾಗಿದೆ. ಒಟ್ಟಾರೆ, ಈ ಬಾರಿ ಮುಂಗಾರು ಮಳೆಯ ನಡೆ ನೋಡಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ.