ಸಾರಾಂಶ
ತಾಲೂಕು ಮಟ್ಟದ ಸಮಿತಿಗಳ ರಚನೆ, ಕಾರ್ಯಚಟುವಟಿಕೆಗಳ ಕುರಿತು ಸಭೆಗದಗ: ಗ್ರಾಮ ಪಂಚಾಯತಗಳಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಿಯಮಿತವಾಗಿ ಆಯೋಜಿಸುವುದರ ಮೂಲಕ ಮಕ್ಕಳ ಹಕ್ಕುಗಳ ಕುರಿತು ಜಾರಿ ಇರುವ ಎಲ್ಲ ಕಾರ್ಯಕ್ರಮಗಳನ್ನು ಜರುಗಿಸುವಂತೆ ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದೊಂದಿಗೆ ತಾಲೂಕು ಮಟ್ಟದ ಸಮಿತಿಗಳ ರಚನೆ ಮತ್ತು ಕಾರ್ಯಚಟುವಟಿಕೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಬೇಕು. ಗ್ರಾಮಸಭೆಯಲ್ಲಿ ಮಕ್ಕಳ ಅಹವಾಲು, ಕುಂದು ಕೊರತೆಗಳನ್ನು ಆಲಿಸಿ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳ ಕುರಿತು ಇರುವ ಕಾನೂನುಗಳ ಅರಿವು ಮೂಡಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮನೋಭಾವ ತೋರಿದಲ್ಲಿ ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೇಶದ ಜನಸಂಖ್ಯೆಯ ಶೇ. ೪೦ರಷ್ಟು ಪ್ರಮಾಣ ಮಕ್ಕಳಿದ್ದು, ಅವರ ಹಕ್ಕುಗಳ ಕುರಿತು ಅರಿವು ಮೂಡಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗ್ರಾಮಸಭೆ ಆಯೋಜನೆಗೂ ಮುನ್ನ ಪೂರ್ವಭಾವಿ ಸಭೆಗಳನ್ನು ಆಯೋಜಿಸಬೇಕು. ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕುರಿತು ಕ್ಲಬ್‌ಗಳನ್ನು ರಚಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಸೇರಿಸುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಪಂಚಾಯತಿಗಳಿಂದ ಆಗಬೇಕಾಗಿದೆ ಎಂದು ತಿಳಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಬಾಲ್ಯವಿವಾಹ ನೀಷೇಧ ಅಧಿಕಾರಿಗಳಾಗಿದ್ದು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹಗಳನ್ನು ನಿಯಂತ್ರಿಸುವದು ತಮ್ಮ ಆದ್ಯ ಕರ್ತವ್ಯವಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಕಂಡು ಬಂದಲ್ಲಿ ಬಾಲ್ಯ ವಿವಾಹವನ್ನು ತಡೆದು ಕೂಡಲೇ ಪ್ರಕರಣ ದಾಖಲಿಸಬೇಕು. ಗ್ರಾಪಂಗಳಲ್ಲಿ ತಮ್ಮ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಮಕ್ಕಳಿಗಾಗಿ ವಿಶೇಷ ಅನುದಾನ ಮೀಸಲಿಡುವುದರ ಜೊತೆಗೆ ಮಕ್ಕಳ ಸ್ನೇಹಿ ಪಂಚಾಯತಗಳನ್ನಾಗಿಸಬೇಕು. ಮಕ್ಕಳ ಗ್ರಾಮ ಸಭೆಯಲ್ಲಿ ಮೂಲ ಸೌಲಭ್ಯಗಳ ಕುರಿತು ಅಹವಾಲು ಆಲಿಸುವದು ಉದ್ದೇಶವಾಗಿದ್ದರೆ ಮಕ್ಕಳ ಮೇಲಿನ ದೌರ್ಜನ್ಯ ಅವರ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಗಮನ ಹರಿಸಿ ಅವುಗಳ ಕುರಿತು ಕ್ರಮ ಕೈಗೊಳ್ಳುವದು ಸಭೆಯ ಉದ್ದೇಶವಾಗಿರುತ್ತದೆ. ಇದರ ಜೊತೆಗೆ ಮಕ್ಕಳ ಕಾಣೆಯಾಗುತ್ತಿರುವ ಕುರಿತು ರಚಿಸಲಾದ ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ಜರುಗಿಸಬೇಕು ಎಂದು ಹೇಳಿದರು.
ಮಕ್ಕಳ ಗ್ರಾಮ ಸಭೆಯಲ್ಲಿ ನಡೆದಂತಹ ಚರ್ಚೆಗಳ ನಡಾವಳಿಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಮಕ್ಕಳ ಗ್ರಾಮ ಸಭೆಯುಲ್ಲಿ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿನ ೧೮ ವರ್ಷದೊಳಗಿನ ಪ್ರತಿ ಮಗುವಿಗೆ ಲಸಿಕಾಕರಣ ಆಗಿರುವ, ಶಾಲೆಯಿಂದ ಹೊರಗುಳಿದ, ಬಾಲ್ಯ ವಿವಾಹ ಪ್ರಕರಣ, ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಹೆಚ್ಚಿನ ಚರ್ಚೆ ಆಗಬೇಕು. ಗ್ರಾಮ ಸಭೆಯು ಮಕ್ಕಳ ಹಕ್ಕುಗಳ ಸಭೆ ಆಗಬೇಕು. ಪ್ರತಿ ಶಾಲೆಯಲ್ಲಿಯೂ ಸಲಹಾ ಪೆಟ್ಟಿಗೆಯನ್ನು ಇರಿಸಬೇಕು. ಈ ಕುರಿತು ಪಂಚಾಯತ ಅಧಿಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.ತಾಪಂ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿನ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಸಂದರ್ಭದಲ್ಲಿ ಫಲಾನುಭವಿಗಳಿಂದ ಬಾಲ್ಯವಿವಾಹ ಮಾಡಿಸುವುದಿಲ್ಲ, ೮ನೇ ತರಗತಿ ವರೆಗೆ ಮಗುವನ್ನು ಶಾಲೆಯಿಂದ ಹೊರಗುಳಿಸುವುದಿಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳಲು ಸಲಹೆ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕ ಪಿ.ವಾಯ. ಶೆಟ್ಟಪ್ಪನವರ, ಜಿಪಂ ಮುಖ್ಯಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಧಾ ಮಣ್ಣೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.