ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಧಿಕ ತಾಪಮಾನ ಹೆಚ್ಚಳದಿಂದ ತೀವ್ರ ಶಾಖದ ಬಿಸಿಗಾಳಿಯು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬೀಸುತ್ತಿರುವುದರಿಂದ ಬಿಸಿ ಅಲೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನು ತಪ್ಪಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತೀವ್ರ ಶಾಖದ ಅಲೆಯ ಬಿಸಿಗಾಳಿಯಿಂದ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆಯು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮವಹಿಸಲು ಸೂಚಿಸಿದರು.ನೀರಿನ ಪರೀಕ್ಷೆ ಮಾಡಿಸಬೇಕು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಪರೀಕ್ಷೆಯನ್ನು ನಿರಂತರ ಮಾಡಲಾಗುತ್ತಿದೆ. ಜಿಲ್ಲೆಯ 11 ಗ್ರಾಮಗಳ ನೀರಿನ ಟ್ಯಾಂಕರ್ ಗಳಲ್ಲಿ ಕುಡಿಯುವ ನೀರು ಕುಡಿಯಲು ಯೋಗ್ಯವಲ್ಲ ಎಂದು ಪರೀಕ್ಷೆಯಿಂದ ಸಾಭಿತಾದ ಹಿನ್ನೆಲೆಯಲ್ಲಿ ಆ ಗ್ರಾಮಗಳ ಸ್ಥಳೀಯ ಅಧಿಕಾರಿಗಳ ಮುಖಾಂತರ ಸ್ವಚ್ಛಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಯಮಿತವಾಗಿ ನೀರು ಪರೀಕ್ಷೆ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳ್ಳಸಬೇಕು ಎಂದರು.
ನೀರಿನ ಟ್ಯಾಂಕರ್‌ಗಳು, ನೀರಿನ ಸಂಗ್ರಹಣಾ ತಾಣಗಳನ್ನು, ಸಂಪುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಾಲರಾ ರೋಗವು ಅಶುದ್ದ ನೀರಿನ ಸೇವನೆಯಿಂದ ಕಾಣಿಸಿಕೊಳ್ಳುತ್ತದೆ. ಡೆಂಘೀ, ಇತರ ಕೀಟ ಜನ್ಯ ರೋಗಗಳು ಸೊಳ್ಳೆಯಿಂದ ಹರಡುವುದರಿಂದ ಜನರು ಸ್ವಚ್ಛತೆಗೆ ಆದ್ಯತೆ ನೀಡಿ ಸೊಳ್ಳೆಗಳ ಉತ್ಪತ್ತಿಯನ್ನು ತಮ್ಮ ಮನೆಗಳ ಸುತ್ತಮುತ್ತ ತಡೆಗಟ್ಟಬೇಕು. ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಪೂರೈಕೆ ಪೈಪ್ ಲೈನ್ ಗಳು ಒಡೆದುಹೋಗದಂತೆ ನೀಡಿಕೊಳ್ಳಬೇಕು. ದುರಸ್ತಿಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು. ಈ ಕುರಿತು ಸ್ಥಳೀಯ ಮಟ್ಟದ ಅಧಿಕಾರಿಗಳು ನಿಗಾವಹಿಸಬೇಕು ಎಂದರು.ನೀರು ಪೂರೈಕೆಗೆ ಆದ್ಯತೆಜಿಲ್ಲೆಯ 45 ಗ್ರಾಮಗಳು, 17 ವಾರ್ಡ್ ಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಯಿದ್ದು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 144 ಗ್ರಾಮಗಳು ಮತ್ತು 24 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವ ಆಗಬಹುದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀರಿನ ಪೂರೈಕೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.
ಜಿಲ್ಲೆಯಲ್ಲಿರುವ 44 ನೀರಿನ ಟ್ಯಾಂಕರ್ ವಾಹನಗಳ ಮಾಲಿಕರಿಗೆ ಮಾಹಿತಿ ನೀಡಿ “ಯಾವುದೇ ಕ್ಷಣದಲ್ಲಿ ತಮ್ಮ ವಾಹನವನ್ನು ಕುಡಿಯುವ ನೀರಿನ ಉದ್ಧೇಶಕ್ಕಾಗಿ ಜಿಲ್ಲಾಡಳಿತ ಅಧೀನಕ್ಕೆ ಪಡೆಯಬಹುದು ಎಂಬುದನ್ನು ತಿಳಿಸಬೇಕು. ಖಾಸಗಿ ಕೊಳವೆ ಬಾವಿಗಳ ಮಾಲಿಕರ ಮುಖಾಂತರ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಬೇಕು. ಜಿಲ್ಲೆಯಲ್ಲಿ ನಿರ್ಮಿಸಿರುವ ಜಾನುವಾರು ತೊಟ್ಟಿಗಳಿಗೆ ಕುಡಿಯುವ ನೀರಿನ್ನು ಪ್ರತಿನಿತ್ಯ ಪೂರೈಸಿಬೇಕು. ಈ ಕಾರ್ಯವನ್ನು ಆಧ್ಯತೆಯಾಗಿ ಪರಿಗಣಿಸಿ ತಮ್ಮ ಕಾರ್ಯ ಕೇಂದ್ರಗಳಲ್ಲಿ 24 ತಾಸು ಲಭ್ಯವಿದ್ದು, ಕಾರ್ಯೋನ್ಮುಖರಾಗಲು ತಿಳಿಸಿದರು.ಬಿಸಿಗಾಳಿ ಅಲೆ ಬಗ್ಗೆ ಎಚ್ಚರಿಕೆ ವಿಶೇಷವಾಗಿ ಮಧ್ಯಾಹ್ನ 12.00 ರಿಂದ 3.00 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ.ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲ್ ಗಳನ್ನು ಬಳಸಿ. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ. ಸನ್ ಸ್ಟ್ರೋಕ್‌ಗೆ ಚಿಕಿತ್ಸೆವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ, ನೆರಳಿನ ಕೆಳಗೆ ಇರಿಸಿ. ಅವರನ್ನು ಒದ್ದೆ ಬಟ್ಟೆಯಿಂದ ಒರೆಸಿ/ಆಗಾಗ ದೇಹವನ್ನು ತೊಳೆಯಿರಿ, ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಿರಿ. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು ಮುಖ್ಯ. ವ್ಯಕ್ತಿಗೆ ಒಆರ್‌ಎಸ್ ಕುಡಿಯಲು ಅಥವಾ ನಿಂಬೆ ಸರಬತ್/ತೋರಣಿ ಅಥವಾ ದೇಹವನ್ನುಪುನರ್ಜಲೀಕರಣಗೊಳಿಸಲು ಉಪಯುಕ್ತವಾದ ಯಾವುದನ್ನಾದರೂ ನೀಡಬೇಕು. ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಡೀಸಿ ಡಾ. ಎನ್. ತಿಪ್ಪೇಸ್ವಾಮಿ, ಎಸಿ ಡಿ.ಹೆಚ್. ಅಶ್ವಿನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.