ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಬಗ್ಗೆ ಜಾಗೃತಿ

| Published : Feb 08 2024, 01:32 AM IST

ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಬಗ್ಗೆ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದು ಇಲಾಖೆ ಧ್ಯೇಯವಲ್ಲ. ಬದಲಾಗಿ ಅರಿವು ಮೂಡಿಸಿ ಪ್ರತಿಯೊಬ್ಬರೂ ವಾಹನ ಚಾಲನೆ ವೇಳೆ ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸುವಂತೆ ಮಾಡುವುದು ನಮ್ಮ ಆಶಯ. ಇಂದು ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ಅರಿವು ಮೂಡಿಸಿದ್ದೇವೆ. ನಾಳೆಯಿಂದ ಹೆಲ್ಮೆಟ್ ಧರಿಸದವರಿಗೆ ಕಡ್ಡಾಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಬುಧವಾರ ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಯಿತು.

ಪಟ್ಟಣ ಠಾಣೆ ನಿರೀಕ್ಷಕಿ ಸುಮಾರಾಣಿ ಮತ್ತು ಗ್ರಾಮಾಂತರ ಠಾಣೆ ನಿರೀಕ್ಷಕ ಆನಂದೇಗೌಡರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಸ್ಥಳದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಿದರು.

ಆರಕ್ಷಕ ನಿರೀಕ್ಷಕಿ ಸುಮಾರಾಣಿ ಮಾತನಾಡಿ, ರ್‍ಯಾಂಕೋ ಸಿಮೆಂಟ್ ಕಂಪನಿ ಸಹಕಾರದೊಂದಿಗೆ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಸಂಚಾರ ನಿಯಂತ್ರಣ ಕ್ರಮಕ್ಕಾಗಿ ಕಂಪನಿ ಪೊಲೀಸ್ ಇಲಾಖೆಗೆ 25 ಬ್ಯಾರಿಕೇಡ್ ಗಳನ್ನು ಉಡುಗೊರೆಯಾಗಿ ನೀಡಿದೆ ಎಂದರು.

ಪಟ್ಟಣ ಸೇರಿದಂತೆ ತಾಲೂಕಿನ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುತ್ತಿಲ್ಲ. ಹೆಲ್ಮೆಟ್ ಜೀವ ರಕ್ಷಕವಾಗಿದೆ. ಬೈಕ್ ಸವಾರನ ಜೀವ ರಕ್ಷಣೆ ಜೊತೆಗೆ ಕುಟುಂಬದ ಅಮೂಲ್ಯ ಜೀವವನ್ನೂ ಉಳಿಸುತ್ತದೆ ಎಂದರು.

ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದು ಇಲಾಖೆ ಧ್ಯೇಯವಲ್ಲ. ಬದಲಾಗಿ ಅರಿವು ಮೂಡಿಸಿ ಪ್ರತಿಯೊಬ್ಬರೂ ವಾಹನ ಚಾಲನೆ ವೇಳೆ ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸುವಂತೆ ಮಾಡುವುದು ನಮ್ಮ ಆಶಯವಾಗಿದೆ. ಇಂದು ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ಅರಿವು ಮೂಡಿಸಿದ್ದೇವೆ. ನಾಳೆಯಿಂದ ಹೆಲ್ಮೆಟ್ ಧರಿಸದವರಿಗೆ ಕಡ್ಡಾಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪೋಷಕರು ಯಾವುದೇ ಕಾರಣಕ್ಕೂ ಅಪ್ರಾಪ್ತರ ಕೈಗೆ ವಾಹನ ನೀಡಬಾರದು. ವಾಹನ ನೀಡಿದರೆ ಅದರ ಮಾಲೀಕರೂ ಕಾನೂನಿನ ಪ್ರಕ್ರಿಯೆಗೆ ಒಳಪಡುತ್ತಾರೆ. ಜೊತೆಗೆ 25 ಸಾವಿರ ದಂಡ ಜೈಲು ಶಿಕ್ಷೆಗೊಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ ಐ ಸುಬ್ಬಯ್ಯ ಸೇರಿದಂತೆ ಠಾಣೆ ಸಿಬ್ಬಂದಿ ಇದ್ದರು.