ಹಾವೇರಿ: ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಹಾಗೂ ಬಾಲ ಕಾರ್ಮಿಕರನ್ನು ಪತ್ತೆಹಚ್ಚಲು ಅನಿರೀಕ್ಷಿತ ದಾಳಿ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಪ್ರಗತಿ ಪರಿಶೀಲನೆ, ಕಾರ್ಯಕಾರಿ ಸಮಿತಿ ಸಭೆ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅರಿವು ಮೂಡಿಸಿ:ಜಿಲ್ಲೆಯಲ್ಲಿ ಬಾಲಕಾರ್ಮಿಕರ ಪ್ರಕರಣಗಳ ತಡೆಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಶಾಲಾ-ಕಾಲೇಜುಗಳು ಹಾಗೂ ಮಕ್ಕಳ ವಿಶೇಷ ಗ್ರಾಮ ಸಭೆಗಳಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನಿರೀಕ್ಷಿತ ದಾಳಿ ನಡೆಸಿ: ಜಿಲ್ಲೆಯ ಕೈಗಾರಿಕೆ, ದಾಬಾ, ಹೋಟೆಲ್, ಇಟ್ಟಂಗಿ ಭಟ್ಟಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ, ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಬೇಕು. ಒಂದು ವೇಳೆ ಬಾಲಕಾರ್ಮಿಕರು ಪತ್ತೆಯಾದರೆ ಅವರನ್ನು ರಕ್ಷಿಸಬೇಕು ಹಾಗೂ ಸಂಬಂಧಿಸಿದವರ ವಿರುದ್ಧ ಕಡ್ಡಾಯವಾಗಿ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.ದಾಳಿಯಲ್ಲಿ ಪತ್ತೆಹಚ್ಚಲಾದ ಮಕ್ಕಳನ್ನು ಪಾಲಕರ ವಶಕ್ಕೆ ನೀಡಿದರೆ ಸಾಲದು, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅವರ ವಿದ್ಯಾಭ್ಯಾಸದ ಕುರಿತು ಸಂಪರ್ಕದಲ್ಲಿರಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು.
ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಧ್ವನಿವರ್ಧಕ ಮೂಲಕ ಹಾಗೂ ಕಸವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ್ ಬೆಂಗಾಲಿ ಅವರು ಮಾತನಾಡಿ, 2025-26ನೇ ಸಾಲಿನಲ್ಲಿ ಜಿಲ್ಲೆಯ ಹೋಟೆಲ್, ಗ್ಯಾರೇಜು, ಬೇಕರಿ, ವೆಲ್ಡಿಂಗ್‌ಶಾಪ್, ಸ್ಟೀಟ್ಸ್ ತಯಾರಿಕಾ ಘಟಕ, ಮಂಡಕ್ಕಿ ಭಟ್ಟಿ ಹಾಗೂ ವಿವಿಧ ವಾಣಿಜ್ಯ ಅಂಗಡಿಗಳ ಮೇಲೆ ದಾಳಿ ನಡೆಸಿ 17 ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಎಂಟು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ, ಆರು ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ ಮತ್ತು ಮೂರು ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಂಗವಾಗಿ ಬೀದಿನಾಟಕ, ಗೋಡೆ ಬರಹ, ಆಟೋ ಪ್ರಚಾರ, ಕರಪತ್ರ-ಬಿತ್ತಿಪತ್ರ, ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಹಾವೇರಿ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಕೃಷಿ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಕೆ., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ದಾಖಲಿಸಿ:ಕೆಲಸ ಅರಿಸಿಕೊಂಡು ಊರಿಂದ ಊರಿಗೆ ಬರುವ ವಲಸೆ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲಿಸುವ ಕೆಲಸವಾಗಬೇಕು. ರಸ್ತೆ ಕಾಮಗಾರಿ, ಕಬ್ಬು ಕಟಾವು, ಕೈಗಾರಿಕೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಮಕ್ಕಳನ್ನು ಹತ್ತಿರದ ಶಾಲೆಗೆ ದಾಖಲಿಸುವ ಮೂಲಕ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.