ದೇಶದ್ರೋಹಿಗಳ ವಿರುದ್ಧ ಹೋರಾಟದ ಧ್ವನಿ ಮೊಳಗಲಿ: ತುಷಾರ್‌ ಗಾಂಧಿ

| Published : Sep 21 2024, 01:55 AM IST

ಸಾರಾಂಶ

‘ಆನ್‌ ದಿ ಟ್ರಾಯಲ್‌ ಆಫ್‌ ಗಾಂಧೀಸ್‌ ಫುಟ್‌ಸ್ಟೆಫ್ಸ್‌’ ಮತ್ತು ‘ಬಿಫೋರ್‌ ಐ ರಿಟರ್ನ್‌ ಟು ದಿ ಸಾಯಿಲ್‌’ ಪುಸ್ತಕವನ್ನು ನಿಟ್ಟೆವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ತನ್ನ ಒಗ್ಗಟ್ಟನ್ನು ಪ್ರದರ್ಶಿಸಿತ್ತು. ಸತ್ಯಾಗ್ರಹ, ಕ್ರಾಂತಿಕಾರಿ ಮಾರ್ಗಗಳ ಮೂಲಕ ಅಂದು ಬ್ರಿಟಿಷರ ವಿರುದ್ಧ ನಡೆದ ಹೋರಾಟದಂತೆಯೇ ಇಂದು ಜಾತಿ, ಧರ್ಮ, ದ್ವೇಷದ ಮೂಲಕ ದೇಶದ ಜನರ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸುತ್ತಿರುವ ದೇಶದ್ರೋಹಿಗಳ ವಿರುದ್ಧ ಹೋರಾಟದ ಧ್ವನಿ ಮೊಳಗಬೇಕಾಗಿದೆ. ಈ ಜವಾಬ್ದಾರಿಯನ್ನು ಯುವಕರು ವಹಿಸಬೇಕು ಎಂದು ಮಹಾತ್ಮ ಗಾಂಧೀಜಿಯವರ ಮರಿಮಗ ಮತ್ತು ಸಾಮಾಜಿಕ ಚಿಂತಕ ತುಷಾರ್‌ ಗಾಂಧಿ ಅಭಿಪ್ರಾಯಿಸಿದ್ದಾರೆ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಕೆದಂಬಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಶುಕ್ರವಾರ ವಿಚಾರ ಸಂಕಿರಣ ಹಾಗೂ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವಜನತೆಗೆ ಗಾಂಧೀ ವಿಚಾರಧಾರೆಯ ಪ್ರಸ್ತುತತೆ’ ಬಗ್ಗೆ ವಿಷಯ ಮಂಡಿಸಿದ ಅವರು, ಸ್ವಾತಂತ್ರ್ಯ ನಂತರದ 78 ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ನಮ್ಮ ಸಮಾಜವನ್ನು ಮತ್ತೆ ಜಾತಿ, ಧರ್ಮ, ದ್ವೇಷ ಮತ್ತು ಮೂಲಭೂತವಾದದ ಮೂಲಕ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಇಂತಹ ಸಮಾಜವನ್ನು ವಿಭಜಿಸುವ ಮನಸ್ಥಿತಿಯವರು ದೇಶದ್ರೋಹಿಗಳು. ಅವರು ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದವರು. ಭಾಷೆ, ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ನಡೆಯುತ್ತಿರುವ ದ್ವೇಷದ ವಿರುದ್ಧ ಪ್ರೀತಿ, ಭಾತೃತ್ವ ಹಾಗೂ ಒಗ್ಗಟ್ಟಿನ ಮೂಲಕ ಉತ್ತರ ನೀಡಬೇಕಾಗಿದೆ. ನಮ್ಮ ಪೂರ್ವಜರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ಬಲಿದಾನದ ಮಹತ್ವವನ್ನು ನಾವು ಎತ್ತಿ ಹಿಡಿಯಬೇಕು. ಈ ನಿಟ್ಟಿನಲ್ಲಿ ಗಾಂಧಿಯ ಪ್ರಸ್ತುತತೆಯನ್ನು ಯುವಕರು ಅರಿಯಬೇಕು ಎಂದು ಹೇಳಿದರು.

ಸಾಮಾಜಿಕ ಜೀವನದಲ್ಲಿ ಇಲ್ಲದವರನ್ನು ಇಂದು ನಾವು ಮತ್ತೆ ಮತ್ತೆ ಅಧಿಕಾರಕ್ಕೇರಿಸುತ್ತಿದ್ದೇವೆ. ಈ ಮೂಲಕ ಮತದಾನ ಮೌಲ್ಯವು ಕುಸಿಯುತ್ತಿದೆ. ಸಂವಿಧಾನ ವಿರೋಧಿ ಕಾನೂನುಗಳು ದೇಶದ ಸಂಸತ್ತಿನಲ್ಲಿ ಚರ್ಚೆ ರಹಿತವಾಗಿ ಮಂಜೂರಾಗುತ್ತಿವೆ. ಸರಕಾರಿ ಅಧಿಕಾರಿಗಳು ಆರೆಸ್ಸೆಸ್‌ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಸಂವಿಧಾನವನ್ನು ಬದಲಿಸಿ, ಕೇವಲ ಹಿಂದೂ ರಾಷ್ಟ್ರ ಮಾತ್ರವಲ್ಲ, ಜಾತಿ ಆಧಾರಿತ ಹಿಂದೂ ರಾಷ್ಷ್ರ ನಿರ್ಮಾಣದ ತಂತ್ರದ ಆರೆಸೆಸ್‌ ಭಾಗವಾಗಿದ್ದು, ಇದನ್ನು ಯುವ ಸಮುದಾಯ ಅರಿಯಬೇಕಾಗಿದೆ ಎಂದವರು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬಡತನ ದಾರಿದ್ರ್ಯದಿಂದ ಕೂಡಿದ್ದರೂ ಆಧ್ಯಾತ್ಮಿಕ ಹಾಗೂ ಪ್ರಜ್ಞಾವಂತ ಭಾರತ ನಮ್ಮದಾಗಿತ್ತು. ಆದರೆ ಗಾಂಧಿಯನ್ನು ನಾವು ಬಳುವಳಿಯಾಗಿ ಮಾತ್ರ ಪಡೆದುಕೊಂಡಿದ್ದೇವೆ. ಅವರ ತತ್ವ, ಸಿದ್ಧಾಂತಗಳನ್ನು ನಾವು ಮರೆತಿದ್ದೇವೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ ಹಾಗೂ ನೆಹರೂ ಅವರ ಮೌಲ್ಯಗಳ ಅಧ:ಪತನವಾಗುತ್ತಿದೆ. ಆದರೆ ಭಾರತ ಬಿಟ್ಟು ಗಾಂಧಿ ಇಲ್ಲ. ಗಾಂಧಿ ಬಿಟ್ಟು ಭಾರತ ಇಲ್ಲ ಎಂಬುದನ್ನು ಯುವ ಸಮುದಾಯ ತಿಳಿಯಬೇಕಾಗಿದೆ. ಅದಕ್ಕಾಗಿ ಅವರನ್ನು ಓದಬೇಕು. ಅರ್ಥಮಾಡಿಕೊಳ್ಳಬೇಕು. ಸಂಶಯ ಇದ್ದಾಗ ಪ್ರಶ್ನಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್‌. ಧರ್ಮ ವಹಿಸಿದ್ದರು.‘ಆನ್‌ ದಿ ಟ್ರಾಯಲ್‌ ಆಫ್‌ ಗಾಂಧೀಸ್‌ ಫುಟ್‌ಸ್ಟೆಫ್ಸ್‌’ ಮತ್ತು ‘ಬಿಫೋರ್‌ ಐ ರಿಟರ್ನ್‌ ಟು ದಿ ಸಾಯಿಲ್‌’ ಪುಸ್ತಕವನ್ನು ನಿಟ್ಟೆವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಲೋಕಾರ್ಪಣೆಗೊಳಿಸಿದರು.

ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್‌ ಕುಮಾರ್‌ ರೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಇದ್ದರು.ಮಂಗಳೂರು ವಿವಿ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶೇಷಪ್ಪ ವಂದಿಸಿದರು. ಆರ್‌ಜೆ ಅಭಿಷೇಕ್‌ ನಿರೂಪಿಸಿದರು.ಗಾಂಧಿ ಸ್ಮೃತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಅತಿಥಿಗಳಿಗೆ ತುಳುನಾಡ ಸಂಪ್ರದಾಯದಂತೆ ವೀಳ್ಯದೆಲೆ, ಅಡಕೆ, ಖಾದಿ ಶಾಲು ಹಾಗೂ ಚರಕವನ್ನು ನೀಡಿ ಗೌರವಿಸಲಾಯಿತು. ಬಾಕ್ಸ್‌...

ಧಾರ್ಮಿಕ ಆಚರಣೆ ಮನೆಗೆ ಸೀಮಿತವಾಗಿರಲಿ ಪ್ರತಿ ಧರ್ಮವೂ ಅದರದ್ದೇ ಆದ ಮಹತ್ವವನ್ನು ಹೊಂದಿವೆ. ಈ ಧಾರ್ಮಿಕ ಆಚರಣೆ ನಮ್ಮ ಮನೆಗಳಿಗೆ ಸೀಮಿತವಾಗಿರಲಿ. ಅದನ್ನು ಬೀದಿಗೆ ತರುವುದು ಬೇಡ. ಅದಕ್ಕಾಗಿಯೇ ಜಾತಿ, ಧರ್ಮಗಳ ಮೇಲ್ಮೆಯನ್ನು ಪ್ರತಿಬಿಂಬಿಸುವ ನಮ್ಮ ಸಂಕೇತಗಳಿಂದ ನಮ್ಮ ಒಗ್ಗಟ್ಟಿಗೆ ಅಪಚಾರ ಆಗಬಾರದು ಎಂಬ ನೆಲೆಯಲ್ಲಿ ಸಮಾನತೆ ಸಾರಲು ಬಿಳಿ ಟೋಪಿಯನ್ನು ಕಾಂಗ್ರೆಸ್ಸಿಗರು ಧರಿಸುವುದನ್ನು ರೂಢಿಸಿದ್ದರು. ಆದರೆ ಇಂದು ಕಾಂಗ್ರೆಸ್‌ನಲ್ಲಿ ಆ ಏಕತೆ ಕಾಣದಿರುವುದು ದುರದೃಷ್ಟಕರ ಎಂದು ತುಷಾರ್‌ ಗಾಂಧಿ ಹೇಳಿದರು.

ಕ್ವೋಟ್‌----ಮೂರು ಭಾರಿ ಗಾಂಧೀಜಿ ಭೇಟಿ ನೀಡಿರುವ ಮಂಗಳೂರಿನಲ್ಲಿಯೂ ಇಂದು ಮೂಲಭೂತವಾದ ವಿಜೃಂಭಿಸುತ್ತಿದೆ. ಗಾಂಧಿಯನ್ನು ಹತ್ಯೆ ಮಾಡಿದವರ ಸಿದ್ಧಾಂತಗಳು ಇಲ್ಲಿ ಮರೆಯುವ ಮೂಲಕ ಗಾಂಧಿ ಸಂದೇಶಗಳು ಮರೆಯಾಗಿರುವುದು ನಾಚಿಕೆಗೇಡಿನ ವಿಚಾರ.

-ತುಷಾರ್‌ ಗಾಂಧಿ, ಗಾಂಧೀಜಿ ಮರಿ ಮಗ

---------------------