ಮದುವೆಯ ಕನಿಷ್ಠ ವಯಸ್ಸು ಹೆಚ್ಚಿಸುವುದು ಒಳ್ಳೆಯದು

| Published : Dec 27 2024, 12:50 AM IST

ಸಾರಾಂಶ

ಮದುವೆಗೆ ನಿಗದಿಪಡಿಸಿರುವ ವಯಸ್ಸು ಹುಡುಗಿಗೆ 18 ಹುಡುಗರಿಗೆ 21 ವರ್ಷ ಇದ್ದರೂ ಹುಡುಗ ಮತ್ತು ಹುಡುಗಿ ಕನಿಷ್ಠ ಪದವಿ ಶಿಕ್ಷಣ ಪೂರೈಸಿ, ಸಂಸಾರವನ್ನು ಸಮರ್ಥವಾಗಿ ನಿಭಾಯಿಸುವ ವಯಸ್ಸು ಅಂದರೆ ಇಬ್ಬರಿಗೂ 25 ವರ್ಷ ತುಂಬುವುದು ಒಳ್ಳೆಯದು ಎಂದು ಗ್ರಾ.ಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್ ತಿಳಿಸಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸಮಯದಲ್ಲಿ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಮದುವೆಗೆ ನಿಗದಿಪಡಿಸಿರುವ ವಯಸ್ಸು ಹುಡುಗಿಗೆ 18 ಹುಡುಗರಿಗೆ 21 ವರ್ಷ ಇದ್ದರೂ ಹುಡುಗ ಮತ್ತು ಹುಡುಗಿ ಕನಿಷ್ಠ ಪದವಿ ಶಿಕ್ಷಣ ಪೂರೈಸಿ, ಸಂಸಾರವನ್ನು ಸಮರ್ಥವಾಗಿ ನಿಭಾಯಿಸುವ ವಯಸ್ಸು ಅಂದರೆ ಇಬ್ಬರಿಗೂ 25 ವರ್ಷ ತುಂಬುವುದು ಒಳ್ಳೆಯದು ಎಂದು ಗ್ರಾ.ಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್ ತಿಳಿಸಿದರು.

ಇಲ್ಲಿನ ವಿನುತ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ, ಆರೋಗ್ಯ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅರಕಲಗೂಡು ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ "ಬೇಟಿ ಬಚಾವೋ ಬೇಟಿ ಪಢಾವೋ " ಯೋಜನೆಯಡಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಹಳಷ್ಟು ಜನ ಚಿಕ್ಕ ವಯಸ್ಸಿನಲ್ಲಿ ವಿವಾಹವಾಗಿ ವಿಧವೆಯಾಗಿರುವ ಉದಾಹರಣೆಗಳನ್ನು ಮಕ್ಕಳಿಗೆ ವಿವರಿಸಿ. ವಯಸ್ಸಾಗದ ಹೊರತು ಯಾವುದೇ ಕಾರಣಕ್ಕೂ ಮದುವೆಗೆ ಮುಂದಾಗಬೇಡಿ ಎಂದು ಸಲಹೆ ನೀಡಿದರು.

ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಪಿ. ವೆಂಕಟೇಶ್ ಮಾತನಾಡಿ, ಶಾಲಾ, ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸಮಯದಲ್ಲಿ ತಮ್ಮ ಮನಸ್ಸನ್ನು ಚಂಚಲತೆಯ ದಾರಿಗೆ ಹೋಗಲು ಬಿಡದೇ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಎಂದು ತಿಳಿಸಿದರು.

ಹಾಸನ ಪ್ರಚೋದಯ ಸಂಸ್ಥೆಯ ನಿರ್ದೇಶಕ ಸಿ.ಸಿ. ಪೌಲೋಸ್ ರವರು ಮಕ್ಕಳು ಹಕ್ಕುಗಳ ಬಗ್ಗೆ, ವಿಶ್ವಸಂಸ್ಥೆಯ ಉದ್ದೇಶಗಳು ಹಾಗೂ ಶಾಲೆ ಬಿಟ್ಟ ಮಕ್ಕಳಿಗೆ ನೆರವು ನೀಡಿರುವ ಬಗ್ಗೆ, ಬೀದಿ ಮಕ್ಕಳನ್ನು ರಕ್ಷಿಸಿ ತಮ್ಮ ಸಂಸ್ಥೆಯಿಂದ ಶಿಕ್ಷಣದ ನೆರವು ನೀಡುತ್ತಿರುವ ಬಗ್ಗೆ ತಿಳಿಸಿದರು.ವಕೀಲ ಪ್ರಶಾಂತ್ ಮಾತನಾಡಿ, 18 ವರ್ಷದೊಳಗಿನ ಹೆಣ್ಣುಮಕ್ಕಳನ್ನು ದೈಹಿಕವಾಗಿ, ಅಶ್ಲೀಲ ಕೃತ್ಯಗಳಲ್ಲಿ ಬಳಸಿಕೊಳ್ಳುವ ವ್ಯಕ್ತಿಗಳ ವಿರುದ್ದ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸುವುದರ ಬಗ್ಗೆ ವಿವರವಾಗಿ ತಿಳಿಸಿದರು. ವಕೀಲ ಶಂಕರಯ್ಯ ರವರು ಬಾಲ್ಯ ವಿವಾಹದ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾ, ಕಾಲೇಜು ಮಕ್ಕಳಿಗೆ ಅರಕಲಗೂಡು ರೋಟರಿ ಸಂಸ್ಥೆಯ ವತಿಯಿಂದ ರಕ್ತಗುಂಪು ಪರೀಕ್ಷೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಧರಣಿ ಕುಮಾರ್, ಅಂಗನವಾಡಿ ಮೇಲ್ವಿಚಾರಕಿಯರಾದ ಮಂಜುಳಾ, ಶೋಭಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.