ಸಾರಾಂಶ
ರೈತರಿಂದ ಪಡೆದ ಪ್ರತಿಯೊಂದು ರುಪಾಯಿಗೂ ಅಗತ್ಯ ರಸೀದಿ ನೀಡುವಂತೆ ರೈತಸಂಘ ಹತ್ತು ಹಲವು ಸಲ ಮನವಿ ಮಾಡಿದ್ದರೂ ಕಂದಾಯ ಇಲಾಖೆ ಮಾತ್ರ ಯಾವುದೇ ರೀತಿಯ ಕ್ರಮ ವಹಿಸುತ್ತಿಲ್ಲ. ರೆಕಾರ್ಡ್‌ನಲ್ಲಿ ಸಿಬ್ಬಂದಿ ಬದಲು ದಲ್ಲಾಳಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಕಂದಾಯ ಇಲಾಖೆ ರೆಕಾರ್ಡ್ ರೂಂನಲ್ಲಿ ರೈತರ ಶೋಷಣೆ ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.ಪಟ್ಟಣದ ಆಡಳಿತ ಸೌಧದ ಆವರಣದಲ್ಲಿರುವ ಶಿರಸ್ತೇದಾರರ ಕಚೇರಿಗೆ ರೈತ ಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ರೈತ ಮುಖಂಡರು ರೆಕಾರ್ಡ್ ರೂಂನಲ್ಲಿ ನಡೆಯತ್ತಿರುವ ರೈತರ ಶೋಷಣೆ ನಿಲ್ಲಿಸುವಂತೆ ಆಗ್ರಹಿಸಿದರು.
ರೈತರು ದಾಖಲಾತಿಗಳಿಗೆ ರೆಕಾರ್ಡ್ ರೂಂ ಸಿಬ್ಬಂದಿ ಮನಸೋ ಇಚ್ಚೆ ಹಣ ವಸೂಲಿ ಮಾಡುತ್ತಿದ್ದಾರೆ. ಕೂಡಲೇ ಕಚೇರಿ ಎದುರು ನಾಮಫಲಕದ ಮೂಲಕ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.ರೈತರಿಂದ ಪಡೆದ ಪ್ರತಿಯೊಂದು ರುಪಾಯಿಗೂ ಅಗತ್ಯ ರಸೀದಿ ನೀಡುವಂತೆ ರೈತಸಂಘ ಹತ್ತು ಹಲವು ಸಲ ಮನವಿ ಮಾಡಿದ್ದರೂ ಕಂದಾಯ ಇಲಾಖೆ ಮಾತ್ರ ಯಾವುದೇ ರೀತಿಯ ಕ್ರಮ ವಹಿಸುತ್ತಿಲ್ಲ. ರೆಕಾರ್ಡ್‌ನಲ್ಲಿ ಸಿಬ್ಬಂದಿ ಬದಲು ದಲ್ಲಾಳಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ರೆಕಾರ್ಡ್ ರೂಂ ಅವ್ಯವಸ್ಥೆ ಸರಿಪಡಿಸಬೇಕು. ರೈತರ ಶೋಷಣೆ ನಿಲ್ಲಿಸಿ ಮಾಹಿತಿ ಪಡೆದ ಪ್ರತಿಯೊಂದು ದಾಖಲೆಗೂ ರಸೀದಿ ಹಾಕುವಂತೆ ರೈತರು ಒತ್ತಾಯಿಸಿದರು.ರೈತರ ಅಹವಾಲು ಆಲಿಸಿದ ಶಿರಸ್ತೇದಾರ್ ರವಿ, ಹಳೆಯ ರಸೀದಿ ಪುಸ್ತಕಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ರೆಕಾರ್ಡ್ ರೂಂನಿಂದ ಬರುವ ಎಲ್ಲಾ ದಾಖಲಾತಿ ರಸೀದಿಗಳನ್ನು ಪರಿಶೀಲಿಸಿ ಸಹಿ ಮಾಡುತ್ತೇನೆ. ರೈತರ ಶೋಷಣೆಯಾಗದಂತೆ ಶುಲ್ಕ ವಿವರದ ನಾಮ ಫಲಕ ಹಾಕಿಸುವ ಭರವಸೆ ನೀಡಿದರು. ನಿಯಮಾನುಸಾರ ಶುಲ್ಕ ಪಾವತಿಸಿ ಹಣಕ್ಕೆ ಕಡ್ಡಾಯವಾಗಿ ಕೇಳಿ ರಸೀದಿ ಪಡೆಯುವಂತೆ ಸೂಚಿಸಿದರು.
ಈ ವೇಳೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಮುಖಂಡರಾದ ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ನೀತಿಮಂಗಲ ಮಹೇಶ್, ಮರಡಹಳ್ಳಿ ರಾಮೇಗೌಡ ಸೇರಿದಂತೆ ಹಲವರಿದ್ದರು.