ಸಮಾಜದ ಬಗ್ಗೆ ಬದ್ಧತೆ ಹೊಂದಿದ್ದ ರಾಜಾನಂದಮೂರ್ತಿ

| Published : Dec 16 2024, 12:45 AM IST

ಸಮಾಜದ ಬಗ್ಗೆ ಬದ್ಧತೆ ಹೊಂದಿದ್ದ ರಾಜಾನಂದಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಾನಂದಮೂರ್ತಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಕೂಡ ಬಾಬಾ ಸಾಹೇಬರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ರಾಜ್ಯಾದ್ಯಂತ ಬೌದ್ಧ ಧಮ್ಮದ ಪ್ರಚಾರ, ಆಚಾರ- ವಿಚಾರಗಳನ್ನು ಬೋಧನೆ ಮಾಡಿ ಜನರಲ್ಲಿ ಅಂಬೇಡ್ಕರ್ ಮತ್ತು ಬುದ್ಧರ ಚಿಂತನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದರು. ಜಾತಿ ಮುಕ್ತ ಸಮಾಜ ಆಗಬೇಕು ಎಂಬುದು ಅವರ ಆಸೆಯಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಬುದ್ಧ ಧಮ್ಮದ ಪ್ರಚಾರಕ್ಕಾಗಿ ರಾಜ್ಯದೆಲ್ಲೆಡೇ ಸಂಚರಿಸಿ ಕಿಶ್ಚಿಯನ್ ಮಿಷನರಿ ರೀತಿಯಲ್ಲಿಯೇ ಕೆಲಸ ಮಾಡಿದರು. ಒಬ್ಬ ವ್ಯಕ್ತಿ ಉದ್ಯೋಗದಲ್ಲಿದ್ದುಕೊಂಡು ಮತ್ತೊಂದು ಸಮಾಜ ಸೇವೆ ಮಾಡುವುದು ಸುಲಭದ ಕೆಲಸವಲ್ಲ. ಅದು ಅವರಲ್ಲಿರುವ ಸಾಮಾಜಿಕ ಬದ್ಧತೆ ಎಂದು ಕರ್ನಾಟಕ ಬುದ್ಧಧಮ್ಮ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಹೇಳಿದರು.

ವಿಜಯನಗರ 1ನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧಧಮ್ಮ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಧಮ್ಮಚಾರಿ ಡಾ.ಬಿ.ರಾಜಾನಂದಮೂರ್ತಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಾನಂದಮೂರ್ತಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಕೂಡ ಬಾಬಾ ಸಾಹೇಬರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ರಾಜ್ಯಾದ್ಯಂತ ಬೌದ್ಧ ಧಮ್ಮದ ಪ್ರಚಾರ, ಆಚಾರ- ವಿಚಾರಗಳನ್ನು ಬೋಧನೆ ಮಾಡಿ ಜನರಲ್ಲಿ ಅಂಬೇಡ್ಕರ್ ಮತ್ತು ಬುದ್ಧರ ಚಿಂತನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದರು. ಜಾತಿ ಮುಕ್ತ ಸಮಾಜ ಆಗಬೇಕು ಎಂಬುದು ಅವರ ಆಸೆಯಾಗಿತ್ತು. ಈ ಮೂಲಕ ಧಮ್ಮದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಗಿ ಅವರು ಹೇಳಿದರು.

ವಕೀಲ ಈ. ಧನಂಜಯ ಎಲಿಯೂರು ಮಾತನಾಡಿ, ಬುದ್ಧ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅನೇಕ ಕೃತಿ ಬರೆದು ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದರು. ಇಂದು ಕರ್ನಾಟಕದಲ್ಲಿ ಬುದ್ಧಧಮ್ಮ ವ್ಯಾಪಕವಾಗಿ ಹರಡಿದೆ ಎಂದರೆ ಅವರ ಕೊಡುಗೆ ಸಾಕಷ್ಟಿದೆ ಎಂದು ಗುಣಗಾನ ಮಾಡಿದರು.

ಟಿ.ನರಸೀಪುರ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಚಂದ್ರಮುನಿ, ಬಂತೇಜಿ, ಸಮಿತಿಯ ಸಹ ಕಾರ್ಯದರ್ಶಿ ಎಚ್. ಶಿವರಾಜು, ಗಂಗಾ, ಚೇತನ, ವಕೀಲ ರಾಜು ಹಂಪಾಪುರ, ಪ್ರಾಧ್ಯಾಪಕ ವಿ. ಷಣ್ಮುಗಂ, ಕ್ರಾಂತಿರಾಜ್ ಒಡೆಯರ್, ಡಾ. ಕೃಷ್ಣಮೂರ್ತಿ, ಉಪಾಸಕರಾದ ರವಿಕೀರ್ತಿ, ಪುಟ್ಟಸ್ವಾಮಿ, ಸರೋಜಮ್ಮ, ಬಿ.ಎಂ. ಲಿಂಗರಾಜು, ರಾಜಶೇಖರ್, ಅಹಿಂದ ಜವರಪ್ಪ, ಪಿ. ಮಹದೇವ, ರಾಮನಗರ ಸಿದ್ದರಾಜು, ನಿಸರ್ಗ ಸಿದ್ದರಾಜು, ವಿವಿಧ ಸಂಘ -ಸಂಸ್ಥೆಗಳ ಪ್ರಮುಖರು ಇದ್ದರು.ದಸಂಸ ವತಿಯಿಂದ ಬುದ್ಧಬರಲಿ ನಮ್ಮ ಊರಿಗೆ ಎಂಬ ವಿನೂತನ ಕೃತಿಯನ್ನು ಪ್ರಕಟಿಸಿ, ಬಾಡಿಗೆ ಸೈಕಲ್ ಪಡೆದುಕೊಂಡು ರಾಜ್ಯಾದ್ಯಂತ ಈ ಕೃತಿಯನ್ನು ಹಂಚುವ ಕೆಲಸ ಮಾಡುತ್ತಿದ್ದೇವು. ಇದಕ್ಕೆಲ್ಲ ಸೈಕಲ್ ವೆಚ್ಚವನ್ನು ಧಮ್ಮಚಾರಿಗಳಾದ ರಾಜಾನಂದಮೂರ್ತಿಯವರೇ ಭರಿಸುತ್ತಿದ್ದರು. ಜನರಿಗೆ ಬುದ್ಧ ಮತ್ತು ಅಂಬೇಡ್ಕರ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಅಮಾವಾಸ್ಯೆಯ ದಿನದಂದೇ ಮದುವೆ ಕಾರ್ಯ ಮಾಡಿ, ಈ ಮೂಲಕ ಮೌಢ್ಯದ ಬೇರನ್ನು ಕೀಳುವ ಪ್ರಯತ್ನಕ್ಕೆ ಕೈಹಾಕಿದ್ದರು.

- ಚೋರನಹಳ್ಳಿ ಶಿವಣ್ಣ, ಹೋರಾಟಗಾರ, ದಸಂಸ