ರಾಜಣ್ಣಗೆ ಹೈಕಮಾಂಡ್ ಇಂಜೆಕ್ಷನ್ ಕೊಡುತ್ತೆ: ಬಾಲಕೃಷ್ಣ

| Published : Feb 21 2025, 12:45 AM IST

ಸಾರಾಂಶ

ರಾಮನಗರ: ಸಹಕಾರ ಸಚಿವ ರಾಜಣ್ಣವರು ಹೈಕಮಾಂಡ್‌ಗಿಂತ ಒಂದು ಹೆಜ್ಜೆ ಮುಂದೆ ಹಾಗೂ ಎತ್ತರದಲ್ಲಿದ್ದಾರೆ. ಆದ್ದರಿಂದಲೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಮ್ಮ ಹೈಕಮಾಂಡ್ ಅವರಿಗೆ ಯಾವಾಗ ಇಂಜೆಕ್ಷನ್ ಕೊಡಬೇಕೊ ಆಗ ಕೊಡುತ್ತಾರೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು.

ರಾಮನಗರ: ಸಹಕಾರ ಸಚಿವ ರಾಜಣ್ಣವರು ಹೈಕಮಾಂಡ್‌ಗಿಂತ ಒಂದು ಹೆಜ್ಜೆ ಮುಂದೆ ಹಾಗೂ ಎತ್ತರದಲ್ಲಿದ್ದಾರೆ. ಆದ್ದರಿಂದಲೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಮ್ಮ ಹೈಕಮಾಂಡ್ ಅವರಿಗೆ ಯಾವಾಗ ಇಂಜೆಕ್ಷನ್ ಕೊಡಬೇಕೊ ಆಗ ಕೊಡುತ್ತಾರೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು.

ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಮತ್ತು ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿಯನ್ನಾಗಿ ಮಾಡುವುದು, ಬಿಡುವುದು ವರಿಷ್ಠರಿಗೆ ಸೇರಿದ ವಿಚಾರ. ಇಂತವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಯಾರೂ ತೆವಲು ತೀರಿಸಿಕೊಳ್ಳುವ ಮಾತುಗಳನ್ನಾಡುವ ಅವಶ್ಯಕತೆ ಇಲ್ಲ. ಸಚಿವ ರಾಜಣ್ಣವರು ಏನೇ ಹೇಳಬೇಕಿದ್ದರು ವರಿಷ್ಠರೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹೇಳಲಿ. ಬೀದಿಯಲ್ಲಿ ಹೇಳಿಕೆ ನೀಡಿ ಅದನ್ನು ವೈಭವೀಕರಿಸುವ ಅವಶ್ಯಕತೆ ಇಲ್ಲ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ ಎಂದು ಟೀಕಿಸಿದರು.

ರಾಜಣ್ಣವರು ಹೇಳಿದಷ್ಟು ನಮ್ಮ ವರಿಷ್ಠರು ವೀಕ್ ಆಗಿಲ್ಲ. ಎಲ್ಲರು ಹೇಳಿದ್ದನ್ನು ಒಪ್ಪಿಕೊಳ್ಳಲು ವರಿಷ್ಠರು ಸಿದ್ಧರಿಲ್ಲ. ಯಾರ ಸಲಹೆ ಸೂಚನೆ ತೆಗೆದುಕೊಳ್ಳಬೇಕೊ ಅದನ್ನು ಪರಿಗಣಿಸುತ್ತಾರೆ. ಡಿ.ಕೆ.ಶಿವಕುಮಾರ್ ಎಐಸಿಸಿನೇ ನಿಯಂತ್ರಣ ಮಾಡುತ್ತಿದ್ದಾರೆಂದು ಹೇಳುವುದು ಸರಿಯಲ್ಲ. ಎಐಸಿಸಿ ಹೇಳಿದ ಮೇಲೂ ವಿತಂಡ ವಾದ ಮಾಡಿದರೆ ಅವರ ವಿರುದ್ಧ ಕ್ರಮ ವಹಿಸುತ್ತಾರೆ. ರಾಜಣ್ಣವರಿಗೆ ಕೆಲಸ ಕಡಿಮೆ ಆಗಿದೆ. ಅವರಿಗೆ ನಮ್ಮ ಸರ್ಕಾರ ಹೆಚ್ಚು ಕೆಲಸ ಕೊಡಬೇಕಿತ್ತು. ಕೆಲಸ ಇಲ್ಲದೇ ಅವಾಗವಾಗ ಈ ರೀತಿ ಮಾತನಾಡುತ್ತಾರೆ. ಅವರ ನಡವಳಿಕೆಯಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ರಾಜಣ್ಣವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಅಂತಹವರಿಂದ ಪಕ್ಷ ಏನನ್ನು ನಿರೀಕ್ಷೆ ಮಾಡಬಹುದು ಎಂಬುದನ್ನು ಎಐಸಿಸಿ ತೀರ್ಮಾನ ಮಾಡಲಿದೆ ಎಂದರು.

ಮಾಗಡಿಗೆ ಹೇಮಾವತಿ ನೀರು ಕೊಡೊಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ರಾಜಣ್ಣ ಬಾಯಿ ಚಪಲಕ್ಕೆ, ತಮ್ಮ ತೆವಲು ತೀರಿಸಿಕೊಳ್ಳಲು ಇಂತಹ ಹೇಳಿಕೆ ಕೊಡಬಾರದು. ತುಮಕೂರಿನಲ್ಲಿ ಹೈನುಗಾರಿಕೆ ಮಾಡುವ ರೈತರು, ನಮ್ಮ ಕುದೂರಿನಲ್ಲಿ ಹಾಲು ಮಾರಾಟ ಮಾಡುತ್ತಿದ್ದಾರೆ. ಅಂದರೆ, ತುಮಕೂರು ಹಾಲು ಉತ್ಪನ್ನ ಬೆಂಗಳೂರಿನಲ್ಲಿ ಅರ್ಧ ಭಾಗ, ನಮ್ಮ ಕುದೂರಿನಲ್ಲಿ ಅರ್ಧ ಭಾಗ ಮಾರಾಟ ಆಗುತ್ತಿದೆ. ನಾವು ನಿಮ್ಮ ಹಾಲು ಬೇಡ, ನಿಮ್ಮ‌ ನೀರು ಬೇಡ ಅಂತಾ ತಡೆದು ನಿಲ್ಲಿಸಿದರೆ ಅದರಿಂದ ತುಮಕೂರಿನ ರೈತರಿಗೆ ತೊಂದರೆ ಆಗುತ್ತದೆ. ಅದನ್ನು ನಾವು ಮಾಡಬೇಕಾ ಎಂದು ಪ್ರಶ್ನಿಸಿದರು.

ರಾಜಣ್ಣವರು ವಿವೇಚನೆಯಿಂದ ಮಾತನಾಡಬೇಕು. ಅವರು ಹಿರಿಯ ಸಚಿವರು, ಈ ರೀತಿ ಬಾಲಿಷ ಹೇಳಿಕೆ ನೀಡಬಾರದು. ಏನೇ ಹೇಳುವುದಿದ್ದರು ಸರ್ಕಾರದ ಹಂತದಲ್ಲಿ ಹೇಳಬೇಕು. ನೀರು ಕೋಡೋದೆ ಇಲ್ಲ, ಬಿಡೋದೇ ಇಲ್ಲ ಅಂದರೆ ಹೇಗೆ? ಇದು ಒಕ್ಕೂಟದ ವ್ಯವಸ್ಥೆ, ಒಂದೇ ದೇಶ, ಒಂದೇ ರಾಜ್ಯದಲ್ಲಿ ಬದುಕುತ್ತಿದ್ದೇವೆ. ಒಬ್ಬ ಹಿರಿಯ ಸಚಿವರಾಗಿ ಈ ರೀತಿ ಚಿಲ್ಲರೆ ಹೇಳಿಕೆ ಕೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಬಾಲಕೃಷ್ಣ ಹೇಳಿದರು.

ಈ ವೇಳೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜು ಯರೇಹಳ್ಳಿ, ದೊಡ್ಡಗಂಗವಾಡಿ ಸೊಸೈಟಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ, ತಾಪಂ ಮಾಜಿ ಅಧ್ಯಕ್ಷ ಜಗದೀಶ್, ಮುಖಂಡರಾದ ಗೋಪಾಲ್ ಮತ್ತಿತರರು ಹಾಜರಿದ್ದರು.

ಬಾಕ್ಸ್‌...........

ಕುಮಾರಸ್ವಾಮಿ ಅನುಕಂಪ ಗಿಟ್ಟಿಸಿಕೊಳ್ಳುವ ಹೇಳಿಕೆ

ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ವೆಗೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶ ಮಾಡಿದ್ದರೆ ದಾಖಲಾತಿ ಕೊಡಲಿ. ಅನುಕಂಪ ಗಿಟ್ಟಿಸಿಕೊಳ್ಳಲು ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರ ಏನಿದೆ. ಹಾಗಾದರೆ ಹೈಕೋರ್ಟ್ ಸೇಡಿನ ರಾಜಕಾರಣ ಮಾಡುತ್ತಿದೆಯಾ. ಕುಮಾರಸ್ವಾಮಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ದಿಕ್ಕು ತಪ್ಪಿಸುವ ಹೇಳಿಕೆ ಕೊಡಬಾರದು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಹಿರೇಮಠ್ ಅವರ ದೂರಿನ ಮೇಲೆ ಕೋರ್ಟ್ ಸರ್ವೆ ಕಾರ್ಯಕ್ಕೆ ಸೂಚನೆ ನೀಡಿದೆ. ಆದರೆ, ಕುಮಾರಸ್ವಾಮಿ ತಮ್ಮ ಜೀವನದುದ್ದಕ್ಕೂ ಪ್ರತಿಯೊಂದು ವಿಚಾರಕ್ಕೂ ಸಿದ್ದರಾಮಯ್ಯ ಮೇಲೆ ಹೇಳುವುದು, ಜಾತಿ ವಿಚಾರ ತರುತ್ತಿದ್ದಾರೆ. ಅವರ ವಿರುದ್ಧ ನಾವು ಕುಸ್ತಿ ಮಾಡಿ ತೊಡೆ ತಟ್ಟಿದ್ದೀವಾ ಎಂದು ಪ್ರಶ್ನಿಸಿದರು.

ಕೋರ್ಟ್ ಆದೇಶದಂದೆ ಭೂಮಿಯ ಸರ್ವೆ ನಡೆಯುತ್ತಿದೆ ಎಂಬುದು ಜನರಿಗೂ ಗೊತ್ತಿದೆ. ಇನ್ನಾದರು ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುವುದನ್ನು ಬಿಡಬೇಕು. ಚನ್ನಪಟ್ಟಣದಲ್ಲಿ ನಿಮ್ಮನ್ನು ರಾಜಕೀಯವಾಗಿ ಎದುರಿಸಿದ್ದೇವೆ. ಮುಂದೆಯೂ ಎದುರಿಸುತ್ತೇವೆ ಎಂದು ಬಾಲಕೃಷ್ಣ ಕಿಡಿಕಾರಿದರು.

20ಕೆಆರ್ ಎಂಎನ್ 4.ಜೆಪಿಜಿ

ಮಾಗಡಿ ಕ್ಷೇತ್ರದ ಕೂಟಗಲ್ ಹೋಬಳಿಯ ಚಿಕ್ಕಗಂಗವಾಡಿ ಗ್ರಾಮದಲ್ಲಿ ಶಾಸಕ ಬಾಲಕೃಷ್ಣರನ್ನು ಮುಖಂಡರು ಅಭಿನಂದಿಸಿದರು. ಮಂಜು ಯರೇಹಳ್ಳಿ, ಡಿ.ಎಂ.ಮಹದೇವಯ್ಯ, ಜಗದೀಶ್ ಇತರರಿದ್ದರು.