ಗ್ರಾಮೀಣ ಮಕ್ಕಳಲ್ಲೂ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಹಾಗೂ ಸಂಶೋಧನಾ ಮನೋಭಾವ ಬೆಳೆಸಬಹುದು ಎಂಬುದನ್ನು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿರುವ ಶಿಕ್ಷಕಿ ರಾಜಶ್ರೀ ಬೀಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.

ಅಜೀಜಅಹ್ಮದ ಬಳಗಾನೂರು

ಹುಬ್ಬಳ್ಳಿ:

ಗ್ರಾಮೀಣ ಮಕ್ಕಳಲ್ಲೂ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಹಾಗೂ ಸಂಶೋಧನಾ ಮನೋಭಾವ ಬೆಳೆಸಬಹುದು ಎಂಬುದನ್ನು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿರುವ ಶಿಕ್ಷಕಿ ರಾಜಶ್ರೀ ಬೀಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು, ಪಠ್ಯಪುಸ್ತಕ ಬೋಧನೆಗೆ ಸೀಮಿತವಾಗದೆ ವಿದ್ಯಾರ್ಥಿಗಳನ್ನು ಪ್ರಯೋಗ, ವಿಜ್ಞಾನ ಮಾದರಿ, ಸಂಶೋಧನಾ ಪ್ರಬಂಧ ಹಾಗೂ ವಿವಿಧ ವಿಜ್ಞಾನ ಪ್ರದರ್ಶನಗಳಲ್ಲಿ ತೊಡಗಿಸುತ್ತಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ, ಭಾರತೀಯ ವಿಜ್ಞಾನ ಕಾಂಗ್ರೆಸ್, ರಾಷ್ಟ್ರೀಯ ಕಿಶೋರ ವೈಜ್ಞಾನಿಕ ಸಮ್ಮೇಳನ ಹಾಗೂ INSPIRE-MANAK ಸೇರಿದಂತೆ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಭಾಗವಹಿಸಿ ಯಂಗ್ ಸೈಂಟಿಸ್ಟ್ ಹಾಗೂ ಅತ್ಯುತ್ತಮ ವಿಜ್ಞಾನ ಮಾದರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

2022-23ರಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಅತ್ಯುತ್ತಮ ಮಾದರಿ ಪ್ರಶಸ್ತಿ, ಜಿಜ್ಞಾಸಾ ವಿಜ್ಞಾನ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಸೇರಿದಂತೆ ಹಲವು ಸಾಧನೆಗಳು ಇವರ ಮಾರ್ಗದರ್ಶನದಲ್ಲಿ ದಾಖಲಾಗಿವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನ ಮತ್ತು ಟಿಎಲ್‌ಎಂ ಸ್ಪರ್ಧೆಗಳಲ್ಲೂ ಹಲವು ಪ್ರಥಮ ಸ್ಥಾನಗಳು ಲಭಿಸಿವೆ. 2025-26ರಲ್ಲಿ ಗುಜರಾತ್‌ನಲ್ಲಿ ನಡೆದ INSEF ರಾಷ್ಟ್ರೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳದಲ್ಲಿ ಅತ್ಯುತ್ತಮ ವಿಜ್ಞಾನ ಮಾದರಿ ಪ್ರಶಸ್ತಿ ಪಡೆದಿದ್ದಾರೆ.

ಇವರ ಸೇವೆಗೆ 2023ರಲ್ಲಿ ಕರ್ನಾಟಕ ಸರ್ಕಾರದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, 2024ರಲ್ಲಿ ಅಕ್ಷರ ಅವ್ವ ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ 2025ರಲ್ಲಿ ಕಾಯಕಯೋಗಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಗ್ರಾಮೀಣ ಮಕ್ಕಳಲ್ಲಿ ‘ವಿಜ್ಞಾನ ಕಲಿಯುವುದಕ್ಕಿಂತ ಅದನ್ನು ಪ್ರಶ್ನಿಸಿ, ಪ್ರಯೋಗಿಸಿ, ಹೊಸದನ್ನು ಕಂಡುಕೊಳ್ಳಬೇಕು’ ಎಂಬ ಮನೋಭಾವ ಬೆಳೆಸುತ್ತಿರುವುದು ಇವರ ವಿಶೇಷ ಸಾಧನೆ.