ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜೇಂದ್ರ ಶ್ರೀಗಳು ಸೇವೆ ಮತ್ತು ಮಹಾಕರುಣೆಯ ಪ್ರತೀಕದಂತೆ ಇದ್ದರು ಎಂದು ಕುಂದೂರು ಮಠಾಧ್ಯಕ್ಷರಾದ ಡಾ.ಶರತ್ಚಂದ್ರ ಸ್ವಾಮೀಜಿ ತಿಳಿಸಿದರು.ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ನಡೆದ ಜಗದ್ಗುರು ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳ 110ನೇ ಜಯಂತಿಯಲ್ಲಿ ಮಾತನಾಡಿದ ಅವರು, ಮಹಾಕರುಣೆ ಯಾರಲ್ಲಿರುತ್ತದೆಯೋ ಅವರೇ ನಿಜವಾದ ಶರಣರು. ರಾಜೇಂದ್ರ ಶ್ರೀಗಳವರಲ್ಲಿದ್ದ ಕರುಣೆ ಎಂಬ ಮೂಲಗುಣವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಸಮಾಜಸೇವೆಗೆ ತಾಳ್ಮೆ ಅತ್ಯಂತ ಅಗತ್ಯ. ಸೇವೆ ಎಂಬ ಪದಕ್ಕೆ ನಿಜಾರ್ಥದಲ್ಲಿ ಗೌರವ ತಂದುಕೊಟ್ಟವರು ರಾಜೇಂದ್ರ ಶ್ರೀಗಳವರು. ಸಮಾಜಸೇವೆಯನ್ನು ಒಂದು ವ್ರತವಾಗಿ ಅವರು ಪರಿಗಣಿಸಿದ್ದರು. ಸಮಾಜದಲ್ಲಿ ಎಲ್ಲರೂ ಚೆನ್ನಾಗಿರಬೇಕೆಂಬ ಮನೋಧರ್ಮವನ್ನು ಹೊಂದಿದ್ದರು. ಎಲ್ಲರನ್ನೂ ನಗುವಿನಿಂದಲೇ ಗೆಲ್ಲುತ್ತಿದ್ದರು. ಸಂತರಾದವರು ಲಾಭ-ನಷ್ಟಗಳಿಗೆ ಅತೀತರಾಗಿರಬೇಕೆಂಬ ನಿಟ್ಟಿನಲ್ಲಿ ಶ್ರೀಗಳು ದೇವರ ಸಮಾನವಾಗಿದ್ದರು ಎಂದರು.12ನೇ ಶತಮಾನದಲ್ಲಿ ಬಸವಾದಿ ಶರಣರು ಧರ್ಮವನ್ನು ಜನಕಲ್ಯಾಣಕ್ಕಾಗಿ, ಸಮಾಜದ ಉನ್ನತಿಗಾಗಿ ಬಳಸಿಕೊಂಡರು. ರಾಜೇಂದ್ರ ಶ್ರೀಗಳು ಧರ್ಮವನ್ನು ಸಮಾಜದ ಉನ್ನತಿಗಾಗಿ ಪ್ರಾಯೋಗಿಕವಾಗಿ ಬಳಸಿಕೊಂಡರು. ಎಲ್ಲರಿಗೂ ಸಂಸ್ಕಾರವನ್ನು ಹೇಳಿಕೊಟ್ಟರು. ಸಮಾಜದ ಬಗೆಗಿನ ಅವರ ಕಳಕಳಿ ತಾಯಿಯ ತ್ಯಾಗಕ್ಕೆ ಸಮನಾದುದು. ಅವರು ಇಲ್ಲದಿದ್ದರೆ, ಕರ್ನಾಟಕದ ಶೈಕ್ಷಣಿಕ ಮಟ್ಟ ಯಾವ ರೀತಿಯಲ್ಲಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಮಾತನಾಡಿ, ಬಹುಮುಖ ವ್ಯಕ್ತಿತ್ವವುಳ್ಳ ರಾಜೇಂದ್ರ ಶ್ರೀಗಳು ಅಪರೂಪದ ಸಾಧನೆಗಳನ್ನು ಮಾಡಿದವರು. ಶಿಕ್ಷಣ, ಅನ್ನ, ವಸತಿ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಿಗೆ ಶ್ರೀಗಳು ಪೋಷಕರಾಗಿದ್ದರು. ಸತ್ಯಶುದ್ಧ ಕಾಯಕದ ಮೂಲಕ ಸಮಾಜದ ಬೆಳವಣಿಗೆಗೆ ಕಾರಣೀಭೂತರಾಗಿದ್ದವರು. ಸುತ್ತೂರು ಮಠ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠಗಳ ಸೇವೆ ಜಗತ್ತಿನಾದ್ಯಂತ ಪಸರಿಸಲು ಬಹುಮುಖ್ಯ ಕಾಣಿಕೆಯನ್ನು ನೀಡಿದ್ದಾರೆ. ಶ್ರೀಗಳು ಮಾನವೀಯ ಗುಣಗಳಿಂದ ಜನರ ಮನಸ್ಸಿನಲ್ಲಿ ಸದಾಕಾಲ ಉಳಿಯುವಂಥವರು ಎಂದರು.ಇದೇ ವೇಳೆ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ವಿ. ಲಲಿತಾ ಮತ್ತು ಷಣ್ಮುಖ ಅವರನ್ನು ಸನ್ಮಾನಿಸಲಾಯಿತು.
ಅರಕಲಗೂಡು ತಾಲೂಕು ಕೆಸವತ್ತೂರು ಮಠದ ಶ್ರೀಬಸವರಾಜೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ. ಮಂಜುನಾಥ್, ಎಸ್. ಶಿವಕುಮಾರಸ್ವಾಮಿ, ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.ಗೀತಾ ತಂಡದವರು ಹಾಗೂ ಮಲ್ಲಿಕಾರ್ಜುನಸ್ವಾಮಿ ಪ್ರಾರ್ಥಿಸಿದರು. ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ ಸ್ವಾಗತಿಸಿದರು. ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ವಂದಿಸಿದರು. ಎ.ಎಂ. ಶಿವಪ್ರಕಾಶ್ ನಿರೂಪಿಸಿದರು.